R Ashwin: ಐಪಿಎಲ್ನಲ್ಲಿ ಶಾಹಿನ್ ಅಫ್ರಿದಿ ಬೆಲೆ ಎಷ್ಟು? ಕೇಳಿದ್ದಕ್ಕೆ ಅಶ್ವಿನ್ ಕೊಟ್ಟ ಉತ್ತರವೇನು ಗೊತ್ತೇ?
Shaheen Shah Afridi: ಪಾಕ್ ತಂಡದ ಸ್ಟಾರ್ ವೇಗಿ ಶಾಹಿನ್ ಅಫ್ರಿದಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುತ್ತಿದ್ದರೆ ಎಷ್ಟು ಮೊತ್ತಕ್ಕೆ ಸೇಲ್ ಆಗುತ್ತಿದ್ದರು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡ ಸದ್ಯ ಯುಎಇನಲ್ಲಿ ಬೀಡುಬಿಟ್ಟಿದ್ದು ಏಷ್ಯಾಕಪ್ ಟೂರ್ನಿ (Asia Cup 2022) ಆಡುತ್ತಿದೆ. ಪಾಕಿಸ್ತಾನ ತಂಡ ಕೂಡ ಇದರಲ್ಲಿ ಭಾಗವಹಿಸುತ್ತಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಇದೀಗ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಪಾಕಿಸ್ತಾನ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಹಾಂಗ್ ಕಾಂಗ್ ವಿರುದ್ಧ ಗೆದ್ದರೆ ಭಾನುವಾರ ಭಾರತ ವಿರುದ್ಧ ಮತ್ತೆ ಮುಖಾಮುಖಿ ಆಗಲಿದೆ. ಹೀಗಿರುವಾಗ ಭಾರತ ತಂಡದ ಮುಖ್ಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಪಾಕಿಸ್ತಾನ ತಂಡದ ಬಗ್ಗೆ ಮಾತನಾಡಿದ್ದಾರೆ. ಪಾಕ್ ತಂಡದ ಸ್ಟಾರ್ ವೇಗಿ ಶಾಹಿನ್ ಅಫ್ರಿದಿ (Shaheen Afridi) ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುತ್ತಿದ್ದರೆ ಎಷ್ಟು ಮೊತ್ತಕ್ಕೆ ಸೇಲ್ ಆಗುತ್ತಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಅಶ್ವಿನ್, ”ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಶಾಹಿನ್ ಅಫ್ರಿದಿ ಇದ್ದಿದ್ದರೆ ಎಷ್ಟು ರೋಮಾಂಚನಕಾರಿ ಆಗಿರುತ್ತಿತ್ತು ಎಂದು ನಾನು ಸಾಕಷ್ಟು ಸಮಯ ಯೋಚಿಸಿದ್ದೇನೆ. ಇವರು ಐಪಿಲ್ನಲ್ಲಿ 14-15 ಕೋಟಿಗೆ ಸೇಲ್ ಆಗುತ್ತಿದ್ದರು. ಅಫ್ರಿದಿ ಪಂದ್ಯವನ್ನು ಟರ್ನ್ ಮಾಡುವಂತಹ ಬೌಲರ್. ಡೆತ್ ಓವರ್ನಲ್ಲಿ ಯಾರ್ಕರ್ ಎಸೆಯುವುದರಲ್ಲಿ ಇವರು ನಿಸ್ಸೀಮರು. ಹೀಗಾಗಿ ಐಪಿಎಲ್ ಹರಾಜಿನಲ್ಲಿ ಇವರು ದೊಡ್ಡ ಮೊತ್ತಕ್ಕೆ ಸೇಲ್ ಆಗುತ್ತಾರೆ,” ಎಂದು ಅಶ್ವಿನ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಆಡಲು ಅವಕಾಶವಿಲ್ಲ. 2008ರ ಮೊದಲ ಆವೃತ್ತಿಯಲ್ಲಷ್ಟೆ ಪಾಕ್ ಆಟಗಾರರು ಐಪಿಎಲ್ನಲ್ಲಿ ಆಡಿದ್ದರು. ನಂತರ ರಾಜಕೀಯ ವಿಚಾರದಿಂದ ಪಾಕ್ ಆಟಗಾರರಿಗೆ ಐಪಿಎಲ್ನಲ್ಲಿ ಆಡಲು ಅವಕಾಶ ನೀಡಲಿಲ್ಲ. ಸದ್ಯ ಶಾಹಿನ್ ಆಫ್ರಿದಿ ಕೂಡ ಏಷ್ಯಾಕಪ್ನಲ್ಲಿ ಭಾಗವಹಿಸುತ್ತಿಲ್ಲ. ಇಂಜುರಿಗೆ ತುತ್ತಾಗಿರುವುದರಿಂದ ಇವರು ತಂಡದಿಂದ ಹೊರಬಿದ್ದಿದ್ದಾರೆ.
”ಹಿಂದಿನ ಬಾರಿ ನಾವು ಪಾಕಿಸ್ತಾನ ವಿರುದ್ಧ ಆಡಿದಾಗ ಶಹ್ದಾಬ್ ಖಾನ್ ಮತ್ತು ಹ್ಯಾರಿಸ್ ರೌಫ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದರೆ, ಶಾಹಿನ್ ಅಫ್ರಿದಿ ಬೌಲಿಂಗ್ ಗೇಮ್ ಚೇಂಜಿಂಗ್ ಆಗಿತ್ತು. ಈ ಬಾರಿ ಇಂಜುರಿಯಿಂದ ಆಫ್ರಿದಿ ತಂಡದಲ್ಲಿ ಇರದಿರುವುದು ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆ,” ಎಂಬುದು ಅಶ್ವಿನ್ ಅಭಿಪ್ರಾಯ.
ಮಾತು ಮುಂದುವರೆಸಿದ ಅಶ್ವಿನ್, ”ಪಾಕಿಸ್ತಾನ ತಂಡದಲ್ಲಿರುವ ಎಲ್ಲ ಬೌಲರ್ಗಳು 140-142kmph ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ವಿಶ್ವದ ಯಾವುದೇ ತಂಡ ಇಷ್ಟೊಂದು ಶ್ರೇಷ್ಠ ಬ್ಯಾಕಪ್ ಬೌಲರ್ಗಳನ್ನು ಇಟ್ಟುಕೊಂಡಿದೆ ಎಂದು ನನಗೆ ಅನಿಸುವುದಿಲ್ಲ. ಪಾಕ್ ತಂಡದಲ್ಲಿ ಇಮಾದ್ ವಾಸೀಂ ಅದ್ಭುತ ಆಟಗಾರ. ಟಿ20 ಕ್ರಿಕೆಟ್ನಲ್ಲಿ ಆತ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾನೆ. ಆದರೆ, ಈ ಬಾರಿ ಪಾಕ್ ಮೊಹಮ್ಮದ್ ನವಾಜ್ ಮೊರೆ ಹೋಗಿದೆ. ನಮ್ಮ ತಂಡದಲ್ಲಿ ರವೀಂದ್ರ ಜಡೇಜಾ ಇರುವ ರೀತಿ,” ಎಂದು ಹೇಳಿದ್ದಾರೆ.
Published On - 12:17 pm, Fri, 2 September 22