ಈ ವರ್ಷದ ಐಸಿಸಿ ಏಕದಿನ ವಿಶ್ವಕಪ್ನ ತಯಾರಿಗಾಗಿ ನಡೆಯುತ್ತಿರುವ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ (India vs Australia) ಪ್ರದರ್ಶನ ಕಳಪೆ ಆಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆಡಿದ ಆಟ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿದೆ. ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕೇವಲ 49 ರನ್ಗು ಮುನ್ನವೇ ಟೀಮ್ ಇಂಡಿಯಾದ (Team India) ಅರ್ಧ ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡರು. ಪಂದ್ಯ ಆರಂಭವಾದ ಮೂರನೇ ಎಸೆತದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ರೋಹಿತ್ ಪಡೆ ಒಟ್ಟು ಗಳಿಸಿದ್ದು ಕೇವಲ 117 ರನ್. ವಿರಾಟ್ ಕೊಹ್ಲಿ (Virat Kohli) ಕ್ರೀಸ್ನಲ್ಲಿ ಇರುವ ವರೆಗೆ ತಂಡ ಸವಾಲಿನ ಮೊತ್ತ ಕಲೆಹಾಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇವರು ಕೂಡ ಔಟಾಗಿದ್ದು ಹೊಡೆತ ಬಿದ್ದಿತು.
ಭಾರತ ಪರ ಗರಿಷ್ಠ ರನ್ ಕಲೆಹಾಕಿದ್ದೇ ವಿರಾಟ್ ಕೊಹ್ಲಿ. 35 ಎಸೆತಗಳಲ್ಲಿ 4 ಫೋರ್ನೊಂದಿಗೆ 31 ರನ್ ಗಳಿಸಿದರು. ಆಕ್ರಮಣಕಾರಿ ಆಟವಾಡುತ್ತಿದ್ದದ ಕೊಹ್ಲಿ 16ನೇ ಓವರ್ನ ನೇಥನ್ ಎಲಿಸ್ ಅವರ ಎರಡನೇ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಕ್ರಾಸ್ ಬ್ಯಾಟ್ ಶಾಟ್ ಹೊಡೆಯುವಲ್ಲಿ ಸಂಪೂರ್ಣ ವಿಫಲರಾದ ವಿರಾಟ್ ಆರನೇ ಬ್ಯಾಟರ್ ಆಗಿ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು. ಎಲ್ಬಿಗೆ ಆಸೀಸ್ ಆಟಗಾರರು ಮನವಿ ಮಾಡಿದ ತಕ್ಷಣ ಅಂಪೈರ್ ಔಟ್ ಎಂಬ ಸೂಚನೆ ನೀಡಿದರು.
IPL 2023: ಐಪಿಎಲ್ಗೆ ಮತ್ತೆ ಕೋವಿಡ್ ಭೀತಿ..!
ಅಂಪೈರ್ ಔಟ್ ಕೊಟ್ಟಾಗ ಕೊಹ್ಲಿ ಡಿಆರ್ಎಸ್ ಮೊರೆ ಹೋಗಲು ಮುಂದಾದರು. ಆದರೆ, ನಾನ್ಸ್ಟ್ರೈಕ್ನಲ್ಲಿದ್ದ ರವೀಂದ್ರ ಜಡೇಜಾ ಇದು ಖಚಿತವಾಗಿ ಔಟ್, ಡಿಆರ್ಎಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕೊಹ್ಲಿ ಬಳಿ ಹೇಳಿದ್ದಾರೆ. ಜಡೇಜಾ ಹಾಗೂ ಕೊಹ್ಲಿ ನಡುವಣ ಈ ಸಂಭಾಷಣೆ ಸ್ಟಂಪ್ಮೈಕ್ನಲ್ಲಿ ಸೆರೆಯಾಗಿದೆ. ಬಳಿಕ ವಿರಾಟ್ ಒಲ್ಲದ ಮನಸ್ಸಿನಲ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಬೆನ್ನಲ್ಲೇ 16 ರನ್ ಗಳಿಸಿದ್ದ ಜಡೇಜಾ ಕೂಡ ಔಟಾದರರು.
— Main Dheet Hoon (@MainDheetHoon69) March 19, 2023
ಈ ಪಂದ್ಯದಲ್ಲಿ ಟಾಸ್ ಸೋತು ಭಾರತ ಬ್ಯಾಟಿಂಗ್ಗೆ ಇಳಿಯಿತು. ಟೀಮ್ ಇಂಡಿಯಾ ಅಂದುಕೊಂಡ ಯೋಜನೆಯಂತೆ ಯಾವುದೂ ನಡೆಯಲಿಲ್ಲ. ಮಿಚೆಲ್ ಸ್ಟಾರ್ಕ್ ಬೌಲಿಂಗ್ ಬಿರುಗಾಳಿಗೆ ಮೊದಲ ಓವರ್ನ ಮೂರನೇ ಎಸೆತದಲ್ಲೇ ಭಾರತ ಶುಭ್ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ರೋಹಿತ್ ಶರ್ಮಾ (13,) ಸೂರ್ಯ ಕುಮಾರ್ ಯಾದವ್ (0) ವಿಕೆಟ್ ಒಪ್ಪಿಸಿದರು. 9ನೇ ಓವರ್ನಲ್ಲಿ ಕೆಎಲ್ ರಾಹುಲ್ (9) ಔಟಾದರೆ ಹಾರ್ದಿಕ್ ಪಾಂಡ್ಯ (1), ನಂತರದಲ್ಲಿ ಕೊಹ್ಲಿ-ಜಡೇಜಾ ಕೂಡ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ 29 ಎಸೆತಗಳಲ್ಲಿ 29 ರನ್ ಬಾರಿಸಿ ತಂಡದ ಮೊತ್ತವನ್ನು 100 ದಾಟಿಸಿದರು. ಅಂತಿಮವಾಗಿ ಭಾರತ 26 ಓವರ್ಗಳಲ್ಲಿ 117 ರನ್ಗೆ ಸರ್ವಪತನ ಕಂಡಿತು. ಆಸೀಸ್ ಪರ ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಸೀನ್ ಅಬಾಟ್ 3 ಮತ್ತು ನೇಥನ್ ಎಲಿಸ್ 2 ವಿಕೆಟ್ ಪಡೆದರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕರಾದ ಟ್ರಾವಿಸ್ ಹೆಡ್ 51 ರನ್ ಮತ್ತು ಮಿಚೆಲ್ ಮಾರ್ಷ್ 66 ರನ್ ಗಳಸಿ ಗೆಲುವಿಗೆ ಕಾರಣರಾದರು. ಭಾರತ ತಂಡ ತವರಿನಲ್ಲಿ ಅತಿ ಕಡಿಮೆ ಮೊತಕ್ಕೆ ಕುಸಿದ ನಾಲ್ಕನೇ ಮ್ಯಾಚ್ ಇದಾಯಿತು. ಈ ಮೂಲಕ ಕೆಟ್ಟ ದಾಖಲೆ ಬರೆಯಿತು. ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ 10 ವಿಕೆಟ್ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂಕಗಳ ಅಂತರದ ಸಮಬಲ ಸಾಧಿಸಿದೆ. ಹೀಗಾಗಿ ಅಂತಿಮ ತೃತೀಯ ಏಕದಿನ ಪಂದ್ಯ ಕುತೂಹಲ ಕೆರಳಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:56 am, Mon, 20 March 23