ಸಿರಾಜ್‌ರನ್ನು ಕೈಬಿಟ್ಟಿದ್ದೇಕೆ? ಟೀಂ ಇಂಡಿಯಾ ಆಯ್ಕೆಗೆ ಕೋಚ್ ಸಮರ್ಥನೆ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. WTC ಚಕ್ರದಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿದ್ದ ಸಿರಾಜ್ ಬದಲಿಗೆ ಯುವ ಅನ್ಶುಲ್ ಕಾಂಬೋಜ್‌ಗೆ ಅವಕಾಶ ನೀಡಲಾಗಿದೆ. ಈ ನಿರ್ಧಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ತಂಡದ ಆಡಳಿತ ಮಂಡಳಿ ಮತ್ತು ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ, ವಾಷಿಂಗ್ಟನ್ ಸುಂದರ್ ಸೇರ್ಪಡೆಯ ಕಾರಣವನ್ನೂ ವಿವರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿದೆ. ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಸಿರಾಜ್ ಅವರನ್ನು ಹೊರಗಿಟ್ಟಿರುವುದು ತಂಡದ ಆಯ್ಕೆ ತಂತ್ರದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿರಾಜ್ ಅವರನ್ನು ಕೈಬಿಟ್ಟು ಯುವ ವೇಗಿ ಅಂಶುಲ್ ಕಾಂಬೋಜ್‌ಗೆ ಅವಕಾಶ ನೀಡಿರುವುದು ಪಂದ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ.
ನಾಲ್ವರು ವೇಗದ ಬೌಲರ್‌ಗಳು
ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಹಾಗೂ ಆಕಾಶ್ ದೀಪ್ ಜೊತೆಗೆ ಕಾಂಬೋಜ್ ಕೂಡ ವೇಗದ ಬೌಲಿಂಗ್ ಪಡೆಯ ಭಾಗವಾಗಿದ್ದಾರೆ. ಈ ಮೂಲಕ ಭಾರತ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿದಿದೆ. ಆದರೆ, ಪ್ರಸಕ್ತ WTC ಚಕ್ರದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅನುಭವಿ ಸಿರಾಜ್ ಬೆಂಚ್ ಕಾಯುವಂತಾಗಿದೆ. ಆದರೆ, ಸಿರಾಜ್ ಅವರನ್ನು ಕೈಬಿಟ್ಟ ನಿರ್ಧಾರವನ್ನು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸಮರ್ಥಿಸಿಕೊಂಡಿದ್ದಾರೆ. ನಾಯಕ ಹಾಗೂ ತಂಡದ ಆಡಳಿತ ಮಂಡಳಿ ಅತ್ಯುತ್ತಮ ಸಂಯೋಜನೆ ಎಂದು ಭಾವಿಸಿದ ಆಟಗಾರರನ್ನೇ ಆಡುವ ಬಳಗಕ್ಕೆ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
ಅತ್ಯುತ್ತಮ ಎಂದು ಎಲ್ಲರೂ ಭಾವಿಸಿದ್ದಾರೆ
‘ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವ ಜವಾಬ್ದಾರಿ ತಂಡದ ಆಡಳಿತ ಮಂಡಳಿ ಮತ್ತು ನಾಯಕನ ಮೇಲಿದೆ. ಅವರ ದೃಷ್ಟಿಯಲ್ಲಿ ಯಾವ ಸಂಯೋಜನೆ ಅತ್ಯುತ್ತಮವಾಗಿರುತ್ತದೆಯೋ ಅದನ್ನೇ ಆಯ್ಕೆ ಮಾಡುತ್ತಾರೆ. ಈ ತಂಡವೇ ಅತ್ಯುತ್ತಮ ಎಂದು ಎಲ್ಲರೂ ಭಾವಿಸಿದ್ದಾರೆ. ಹೀಗಾಗಿ ಆ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಕಣಕ್ಕಿಳಿಸಲು ಸಾಧ್ಯವಿರುವ ಅತ್ಯುತ್ತಮ ಹನ್ನೊಂದು ಆಟಗಾರರನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದೆ’ ಎಂದು ಮೊದಲ ದಿನದಾಟದ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಕ್ ತಿಳಿಸಿದ್ದಾರೆ.
25 ಟೆಸ್ಟ್ ಪಂದ್ಯ, ಕೇವಲ 5 ಗೆಲುವು; ನ್ಯೂಜಿಲೆಂಡ್‌ನಲ್ಲಿ ಭಾರತದ ಹಣೆಬರಹವೇನು?
ನಾಲ್ವರು ಎಡಗೈ ಬ್ಯಾಟರ್‌ಗಳು
ಇದೇ ವೇಳೆ ವಾಷಿಂಗ್ಟನ್ ಸುಂದರ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿರುವುದಕ್ಕೂ ಕೋಟಕ್ ಕಾರಣ ನೀಡಿದ್ದಾರೆ. ನ್ಯೂಜಿಲೆಂಡ್ ತಂಡದ ಅಗ್ರ ಕ್ರಮಾಂಕದ ನಾಲ್ವರು ಎಡಗೈ ಬ್ಯಾಟರ್‌ಗಳಾಗಿರುವುದರಿಂದ ಸುಂದರ್ ಅವರ ಆಫ್‌ಸ್ಪಿನ್ ಬೌಲಿಂಗ್ ತಂಡಕ್ಕೆ ನೆರವಾಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ‘ನ್ಯೂಜಿಲೆಂಡ್ ತಂಡದ ಅಗ್ರ ಕ್ರಮಾಂಕದಲ್ಲಿ ನಾಲ್ವರು ಎಡಗೈ ಬ್ಯಾಟರ್‌ಗಳಿರುವುದರಿಂದ ವಾಷಿಂಗ್ಟನ್ ಸುಂದರ್‌ಗೆ ಆದ್ಯತೆ ನೀಡಿದ್ದೇವೆ. ಈ ಪಂದ್ಯಕ್ಕೆ ಇದೇ ಅತ್ಯುತ್ತಮ ಬೌಲಿಂಗ್ ಸಂಯೋಜನೆ ಎಂದು ನಾವು ಭಾವಿಸಿದ್ದೇವೆ’ ಎಂದು ಕೋಟಕ್ ಹೇಳಿದ್ದಾರೆ.




