GT vs PBKS: ಆರ್​ಸಿಬಿಗೆ ಕಂಟಕವಾದ ಪಂಜಾಬ್ ಗೆಲುವು: ಫಾಫ್ ಪಡೆಗೆ ಮಯಾಂಕ್​ನಿಂದ ದೊಡ್ಡ ಪೆಟ್ಟು

Royal Challengers Bangalore, IPL 2022: ಗುಜರಾತ್ ಟೈಟಾನ್ಸ್​ ವಿರುದ್ಧದ ಪಂಜಾಬ್ ಕಿಂಗ್ಸ್ ತಂಡದ ಈ ಅಮೋಘ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಫಾಫ್ ಪಡೆಯ ಮುಂದಿನ ಹಾದಿ ಸಂಕಷ್ಟದಲ್ಲಿದೆ.

GT vs PBKS: ಆರ್​ಸಿಬಿಗೆ ಕಂಟಕವಾದ ಪಂಜಾಬ್ ಗೆಲುವು: ಫಾಫ್ ಪಡೆಗೆ ಮಯಾಂಕ್​ನಿಂದ ದೊಡ್ಡ ಪೆಟ್ಟು
RCB and GT vs PBKS
Follow us
TV9 Web
| Updated By: Vinay Bhat

Updated on:May 04, 2022 | 7:45 AM

ಸತತವಾಗಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ 2022 ರಲ್ಲಿ ಎರಡನೇ ಸೋಲು ಕಂಡಿದೆ. ಮಂಗಳವಾರ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ (Punjab Kings)​ ವಿರುದ್ಧದ ಪಂದ್ಯದಲ್ಲಿ ಜಿಟಿ ತಂಡ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಪಂಜಾಬ್ ಕಿಂಗ್ಸ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮೂರೂ ವಿಭಾಗದಿಂದ ಶ್ರೇಷ್ಠ ಪ್ರದರ್ಶನ ನೀಡಿತು. ಕಗಿಸೊ ರಬಾಡ ಬೌಲಿಂಗ್​ನಲ್ಲಿ ಮಾರಕ ದಾಳಿ ಸಂಘಟಿಸಿದರೆ ಬ್ಯಾಟಿಂಗ್​ನಲ್ಲಿ ಶಿಖರ್ ಧವನ್, ಭನುಕಾ ರಾಜಪಕ್ಷ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಸ್ಫೋಟಕ ಆಟವಾಡಿ ತಂಡಕ್ಕೆ  8 ವಿಕೆಟ್​ಗಳ ಜಯ ತಂದಿಟ್ಟರು. ಇದೀಗ ಮಯಾಂಕ್ ಪಡೆಯ ಈ ಅಮೋಘ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಫಾಫ್ ಪಡೆಯ ಮುಂದಿನ ಹಾದಿ ಸಂಕಷ್ಟದಲ್ಲಿದೆ.

ಗುಜರಾತ್ ವಿರುದ್ಧದ ಗೆಲುವಿನ ಬಳಿಕ ಪಂಜಾಬ್ ಕಿಂಗ್ಸ್​​ ಆಡಿದ 10 ಪಂದ್ಯಗಳಲ್ಲಿ ತಲಾ ಐದರಲ್ಲಿ ಗೆಲುವು ಹಾಗೂ ಸೋಲು ಕಂಡು 10 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. -0229 ರನ್​ರೇಟ್ ಹೊಂದಿದೆ. ಇತ್ತ ಆರ್​ಸಿಬಿ ಕೂಡ ಇದೇ ಸ್ಥಿತಿಯಲ್ಲಿದ್ದು -0.558 ರನ್​ರೇಟ್ ಹೊಂದಿ ಆರನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೆ ಉಳಿದಿರುವುದು ನಾಲ್ಕು ಪಂದ್ಯ. ಆರ್​ಸಿಬಿ ಮೇಲೇರಲು ಈ ನಾಲ್ಕು ಪಂದ್ಯವನ್ನು ಕೇವಲ ಗೆದ್ದರೆ ಸಾಲದು. ದೊಡ್ಡ ಅಂತರದ ಗೆಲುವಿನ ಅಗತ್ಯವಿದೆ. ಯಾಕೆಂದರೆ ಅತ್ತ ಪಂಜಾಬ್ ಕೂಡ ಉಳಿದ ಎಲ್ಲ ಪಂದ್ಯ ಗೆದ್ದರೆ ಆರ್​​ಸಿಬಿ ಪ್ಲೇ ಆಫ್ ಹಾದಿ ಮುಚ್ಚಿದಂತೆ. ಹೀಗಾಗಿ ಬೆಂಗಳೂರು ತಂಡದ ಮುಂದಿನ ಹಾದಿ ಕಬ್ಬಿಣಡ ಕಡಲೆಯಂತಾಗಿದೆ. ಇದರ ನಡುವೆ ಆರ್​​ಸಿಬಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಜಿಟಿ ಹಾಗೂ ಪಂಜಾಬ್ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಪಂಜಾಬ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್‌ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾಯಿತು. ಆರಂಭಿಕರಾದ ಶುಭ್ಮನ್ ಗಿಲ್‌ ಮತ್ತು ವೃದ್ಧಿಮಾನ್‌ ಸಾಹಾ 4 ಓವರ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. 7 ಎಸೆತಗಳಿಂದ ಕೇವಲ ಒಂದು ರನ್‌ ಮಾಡಿ ಧವನ್‌ಗೆ ವಿಕೆಟ್‌ ಒಪ್ಪಿಸಿದರು. ಡೆವೀಡ್‌ ಮಿಲ್ಲರ್‌ ಮೇಲಿನ ನಿರೀಕ್ಷೆಯೂ ಹುಸಿಯಾಯಿತು. 14 ಎಸೆತ ಎದುರಿಸಿದ ಅವರು 11 ರನ್‌ ಮಾಡಿ ಲಿವಿಂಗ್‌ಸ್ಟೋನ್‌ ಎಸೆತದಲ್ಲಿ ಔಟಾದರು.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಚಾಂಪಿಯನ್​ಶಿಪ್ ಗೆದ್ದುಕೊಂಡ ಜೈನ್​ ವಿವಿ; ಅತಿ ಹೆಚ್ಚು ಪದಕ ಗೆದ್ದ ಶಿವ ಶ್ರೀಧರ್

ಆದರೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಸಾಯಿ ಸುದರ್ಶನ್‌ ಗುಜರಾತ್‌ ಇನ್ನಿಂಗ್ಸ್‌ ಬೆಳೆಸಲು ಗರಿಷ್ಠ ಪ್ರಯತ್ನ ಮಾಡುತ್ತ ಉಳಿದರು. ಜತೆಯಲ್ಲಿ ಬಿಗ್‌ ಹಿಟ್ಟರ್‌ ರಾಹುಲ್‌ ತೆವಾಟಿಯ ಇದ್ದರು. ಆದರೆ ಈ ಕಾಂಬಿನೇಶನ್‌ ಯಶಸ್ಸು ಕಾಣಲಿಲ್ಲ. ರಬಾಡ ಎಸೆತಗಳಿಗೆ ತೆವಾಟಿಯ ಮತ್ತು ರಶೀದ್‌ ಖಾನ್‌ ಔಟಾದರು. ಇತ್ತ ಸುದರ್ಶನ್‌ ಅರ್ಧ ಶತಕ ತಂಡಕ್ಕೆ ಸಹಕಾರಿ ಆಯಿತು. ರಬಾಡ 4 ವಿಕೆಟ್ ಕಿತ್ತು ಮಿಂಚಿದರು. 144 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಆರಂಭಿಸಿದ ಪಂಜಾಬ್ ಕಿಂಗ್ಸ್ ಪರವಾಗಿ ಜಾನಿ ಬೈರ್‌ಸ್ಟೋವ್ 1 ರನ್‌ಗೆ ವಿಕೆಟ್ ಕಳೆದುಕೊಂಡರು.

ಆದರೆ ಎರಡನೇ ವಿಕೆಟ್‌ಗೆ ಶಿಖರ್ ಧವನ್ ಹಾಗೂ ರಾಜಪಕ್ಷ 87 ರನ್‌ಗಳ ಜೊತೆಯಾಟ ನಿಡುವ ಮೂಲಕ ಗೆಲುವಿನ ಸನಿಹ ತಂದಿಟ್ಟರು. 40 ರನ್‌ಗಳಿಸಿ ರಾಜಪಕ್ಷೆ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಲಿಯಾಮ್ ಲಿವಿಂಗ್​ಸ್ಟೋನ್ ಸ್ಫೋಟಕ ಆಟವಾಡಿ ಕೇವಲ 10 ಎಸೆತಗಳಲ್ಲಿ 30 ರನ್ ಸಿಡಿಸಿದರು. ಅದರಲ್ಲೂ ಶಮಿ ಅವರ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಚಚ್ಚಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ ಇನ್ನೂ 4 ಓವರ್‌ಗಳು ಬಾಕಿಯಿರುವಂತೆಯೇ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಲು ಸಾಧ್ಯವಾಯಿತು. ಆರಂಭಿಕ ಆಟಗಾರ ಶಿಖರ್ ಧವನ್ ಅಜೇಯ 62 ರನ್‌ಗಳಿಸಿ ಮಿಂಚಿದರು.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:45 am, Wed, 4 May 22