ಅಭಿಮಾನಿಗಳಿಗಾಗಿ ವಿಶೇಷ ಪ್ರಣಾಳಿಕೆ ಮುಂದಿಟ್ಟ RCB
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ‘ಕಪ್’ಚುಕ್ಕೆ. ಜೂನ್ 4, 2025 ರಂದು ಬೆಂಗಳೂರಿನಲ್ಲಿ ನಡೆದ RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು. ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ಆರ್‌ಸಿಬಿ ಇದೀಗ ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿವಹಿಸಲು ಮುಂದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಅಂಟಿಕೊಂಡಿರುವ ‘ಕಪ್’ಚುಕ್ಕೆಯನ್ನು ತೊಡೆದು ಹಾಕಲು ಆರ್‌ಸಿಬಿ ಫ್ರಾಂಚೈಸಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅದು ಕೂಡ ಅಭಿಮಾನಿಗಳಿಗಾಗಿ ಎಂಬುದು ವಿಶೇಷ. ಕೆಲ ದಿನಗಳ ಹಿಂದೆಯಷ್ಟೇ ಆರ್‌ಸಿಬಿ ಕೇರ್ಸ್ (RCB Cares) ಮೂಲಕ ಅಭಿಮಾನಿಗಳ ಪರ ನಿಲ್ಲುವುದಾಗಿ ಘೋಷಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದೀಗ ಒಂದಷ್ಟು ಗುರಿಗಳೊಂದಿಗೆ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಆರ್‌ಸಿಬಿ ಕೇರ್ಸ್ನ ಮುಖ್ಯ ಗುರಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು “ಆರ್‌ಸಿಬಿ ಕೇರ್ಸ್” ಮೂಲಕ ಒಂದಷ್ಟು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಲಿದೆ. ಇದು ಕೇವಲ ಅಲ್ಪಾವಧಿಯ ಅಭಿಯಾನವಲ್ಲ. ಬದಲಾಗಿ ದೀರ್ಘಾವಧಿಯ ಭರವಸೆ ಎಂದು ಆರ್‌ಸಿಬಿ ಹೇಳಿಕೊಂಡಿದೆ. ಈ ಅಭಿಯಾನಕ್ಕಾಗಿ ಆರ್‌ಸಿಬಿ 6 ಅಂಶಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಮುಂದಿಟ್ಟಿದೆ. ಆ ಪ್ರಣಾಳಿಕೆಯ ಸಾರಾಂಶ ಈ ಕೆಳಗಿನಂತಿದೆ…
ಅಗತ್ಯ ಬೆಂಬಲ ಒದಗಿಸುವುದು: ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಬಾಧಿತ ಕುಟುಂಬಗಳಿಗೆ ತ್ವರಿತ, ಪಾರದರ್ಶಕ ಮತ್ತು ಮಾನವೀಯ ರೀತಿಯಲ್ಲಿ ಸಹಾಯವನ್ನು ತಲುಪಿಸುವುದು.
ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು: ಉತ್ತಮ ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ವಿನ್ಯಾಸಗೊಳಿಸಲು ಕ್ರೀಡಾಂಗಣದ ಅಧಿಕಾರಿಗಳು, ಕ್ರೀಡಾ ಸಂಸ್ಥೆಗಳು ಮತ್ತು ಲೀಗ್ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ನಿರ್ವಹಿಸುವುದು.
ಸಮುದಾಯ ಸಬಲೀಕರಣ: ಗ್ರಾಮೀಣ ಕರ್ನಾಟಕದಲ್ಲಿ, ವಿಶೇಷವಾಗಿ ಸಿದ್ದಿ ಸಮುದಾಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು.
ಸ್ವತಂತ್ರ ಸಂಶೋಧನೆ ಮತ್ತು ಸುರಕ್ಷತಾ ಹೂಡಿಕೆಗಳು: ಅಭಿಮಾನಿ-ಸುರಕ್ಷತಾ ಲೆಕ್ಕಪರಿಶೋಧನಾ ಚೌಕಟ್ಟನ್ನು ರಚಿಸಿ ಮತ್ತು ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಯ ಕುರಿತು ಸ್ಥಳೀಯ ತಂಡಗಳಿಗೆ ತರಬೇತಿ ನೀಡುವುದು.
ಅಭಿಮಾನಿಗಳ ಸ್ಮರಣೆ: ಆರ್‌ಸಿಬಿಯ ಅತ್ಯಂತ ಉತ್ಸಾಹಭರಿತ ಅಭಿಮಾನಿಗಳ ಕಥೆಗಳು ಮತ್ತು ಹೆಸರುಗಳನ್ನು ಗೌರವಿಸಲು ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ಸ್ಥಳವನ್ನು ರಚಿಸುವುದು.
ಕ್ರೀಡಾ ಭವಿಷ್ಯ ನಿರ್ಮಾಣ: ಈ ತಂಡದ ಮೇಲಿನ ನಂಬಿಕೆ ಕ್ರೀಡಾಂಗಣಗಳಿಗೆ ಮಾತ್ರ ಸೀಮಿತವಾಗಿರಬಾರದು. ಕ್ರೀಡಾಂಗಣಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ಸ್ಥಳೀಯ ಪ್ರತಿಭೆಗಳನ್ನು ಪೋಷಿಸಿ ಮತ್ತು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಂಬಲಿಸುವುದು.
𝗥𝗖𝗕 𝗖𝗮𝗿𝗲𝘀: 𝗔 𝗟𝗼𝗻𝗴-𝗧𝗲𝗿𝗺 𝗖𝗼𝗺𝗺𝗶𝘁𝗺𝗲𝗻𝘁 𝘁𝗼 𝗢𝘂𝗿 𝟭𝟮𝘁𝗵 𝗠𝗮𝗻 𝗔𝗿𝗺𝘆
RCB Cares is our long-term commitment to support, empower and elevate our 12th Man Army, through meaningful action.
▪ Provide support that goes beyond financial aid ▪ Build safe… pic.twitter.com/ceNbzPk0dz
— Royal Challengers Bengaluru (@RCBTweets) September 1, 2025
ಈ ಆರು ಉಪಕ್ರಮಗಳ ಮೂಲಕ ಆರ್‌ಸಿಬಿ ಕೇರ್ಸ್ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದೆ. ಈ ನಡೆಯು ಆರ್‌ಸಿಬಿ ಕೇವಲ ಕ್ರಿಕೆಟ್ ತಂಡವಲ್ಲ, ಜವಾಬ್ದಾರಿಯುತ ಸಂಸ್ಥೆಯಾಗಿ ಸಮಾಜಕ್ಕೆ ಬದ್ಧವಾಗಿದೆ ಎಂದು ತೋರಿಸುತ್ತದೆ.
ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಾಲ್ತುಳಿತದಿಂದ ಮೃತಪಟ್ಟ 11 ಅಭಿಮಾನಿಗಳ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿರುವುದಾಗಿ ತಿಳಿಸಿತ್ತು. ಇದೀಗ ಹೊಸ ಪ್ರಣಾಳಿಕೆಯೊಂದಿಗೆ ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಮತ್ತಷ್ಟು ಕಾಳಜಿವಹಿಸುವ ಭರವಸೆ ನೀಡಿದ್ದಾರೆ.
Published On - 1:27 pm, Mon, 1 September 25
