IPL 2022 ರ ಪ್ಲೇಆಫ್ ಪಂದ್ಯಗಳು ಶುರುವಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಜಯಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ, ಫೈನಲ್ ಆಡುವ 2ನೇ ತಂಡ ಯಾವುದೆಂದು ನಿರ್ಧಾರವಾಗಲು ಇನ್ನೆರಡು ಪಂದ್ಯಗಳು ಮುಗಿಯಬೇಕಿದೆ. ಅದರಲ್ಲಿ ಎಲಿಮಿನೇಟರ್ ಇಂದು ನಡೆಯಲಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ . ಮೊದಲ ಕ್ವಾಲಿಫೈಯರ್ ಪಂದ್ಯದಂತೆ ಈ ಪಂದ್ಯ ಕೂಡ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ.
ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ಉತ್ತಮ ಮಳೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿಯೇ ಪ್ಲೇ ಆಫ್ ನಡೆಸುವ ನಿರ್ಧಾರದ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ಆದಾಗ್ಯೂ, ಬಿಸಿಸಿಐ ಈ ಬಗ್ಗೆ ಕೆಲವು ಪ್ರಮುಖ ನಿಯಮಗಳನ್ನು ರೂಪಿಸಿ, ಕೊಲ್ಕತ್ತಾದಲ್ಲೇ ಪ್ಲೇ ಆಫ್ ಹಂತದ ಎರಡು ಪಂದ್ಯಗಳನ್ನು ಆಯೋಜಿಸುತ್ತಿದೆ. ಅದರಂತೆ ಮೊದಲ ಕ್ವಾಲಿಫೈಯರ್ ಪಂದ್ಯ ಮುಗಿದಿದ್ದು, ಇದೀಗ ಎಲಿಮಿನೇಟರ್ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಮೈದಾನ ಸಜ್ಜಾಗಿದೆ. ಆದರೆ ಈ ಪಂದ್ಯದ ವೇಳೆ ಮಳೆ ಬರಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಇಂದಿನ ಪಂದ್ಯ ಆರ್‌ಸಿಬಿ ಹಾಗೂ ಲಕ್ನೋ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಯಾವ ತಂಡ ಸೋತರೂ ಆ ಟೀಮ್ ಐಪಿಎಲ್ನಿಂದ ಹೊರಬೀಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇದರ ನಡುವೆ ಪಂದ್ಯಕ್ಕೆ ವರುಣ ಅವಕೃಪೆ ತೋರಲಿದೆಯಾ ಎಂಬ ಪ್ರಶ್ನೆಗೆ ಹವಾಮಾನ ಇಲಾಖೆ ಉತ್ತರ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ ಇಂದಿನ ಪಂದ್ಯದಲ್ಲಿ ಮಳೆಯ ಅಡೆತಡೆ ಇಲ್ಲ. ಮೋಡ ಮುಸುಕಿದ ವಾತಾವರಣ ಇದ್ದರೂ ಸಂಜೆ ಮಳೆಯಾಗುವ ಸಾಧ್ಯತೆ ಇಲ್ಲ. ಹವಾಮಾನವು ಸ್ಪಷ್ಟವಾಗಿರುತ್ತದೆ. ತಾಪಮಾನವು 27 ಡಿಗ್ರಿಗಳಿಂದ 36 ವರೆಗೆ ತಲುಪಬಹುದು. ಹೀಗಾಗಿ ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಹಾಗಾಗಿ ಪಂದ್ಯವು ಯಾವುದೇ ಅಡೆ ತಡೆಯಿಲ್ಲದೆ ಮುಗಿಯಲಿದೆ ಎಂದು ತಿಳಿಸಿದೆ.
ಇನ್ನು ಪ್ಲೇಆಫ್ ಹಂತದ ಪಂದ್ಯಗಳ ವೇಳೆ ಮಳೆಯಾದರೆ ಫಲಿತಾಂಶ ನಿರ್ಧರಿಸಲು ಬಿಸಿಸಿಐ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದರಲ್ಲಿ ಮೊದಲ ಮೂರು ಪಂದ್ಯಗಳಿಗೆ, ಅಂದರೆ ಮೊದಲ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳಿಗೆ ಮೀಸಲು ದಿನದಾಟ ನೀಡಲಾಗಿಲ್ಲ. ಬದಲಾಗಿ ಆಯಾ ದಿನವೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಸಮಯವಕಾಶ ನೀಡಲಾಗಿದೆ.
ಬಿಸಿಸಿಐ ಪ್ರಕಟಿಸಿರುವ ಹೊಸ ಮಾರ್ಗಸೂಚಿ ಹೀಗಿದೆ: – ಪ್ಲೇಆಫ್ ಹಂತದ ಮೊದಲ ಮೂರು ಪಂದ್ಯಗಳಿಗೆ ಹೆಚ್ಚುವರಿ 2 ಗಂಟೆಗಳ ಸಮಯವಕಾಶ ನೀಡಲಾಗುತ್ತದೆ. ಅಂದರೆ ಮೊದಲ 3 ಪಂದ್ಯಗಳು ಮಳೆಯಿಂದ ವಿಳಂಬವಾದರೆ ಓವರ್ ಕಡಿತಗೊಳಿಸದೇ ರಾತ್ರಿ 9.40 ಕ್ಕೆ ಪಂದ್ಯವನ್ನು ಆಯೋಜಿಸಲಾಗುತ್ತದೆ.
– ಈ ವೇಳೆಯೂ ಮಳೆಯಿಂದ ಅಡಚಣೆ ಉಂಟಾದರೆ 5 ಓವರ್ಗಳ ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಒಂದು ತಂಡಕ್ಕೆ 5 ಓವರ್ಗಳ ಇನಿಂಗ್ಸ್ ಇರಲಿದೆ. ಈ ಪಂದ್ಯವನ್ನು ಆಯೋಜಿಸಲು ರಾತ್ರಿ 11.56 ರವರೆಗೆ ಸಮಯ ನಿಗದಿ ಮಾಡಲಾಗಿದೆ.
– 5 ಓವರ್ಗಳ ಪಂದ್ಯ ನಡೆಸಲು ನಿರ್ಧರಿಸಿದರೆ ಟೈಮ್ ಔಟ್ ಇರುವುದಿಲ್ಲ. ಹಾಗೆಯೇ ರಾತ್ರಿ 12.50 ರೊಳಗೆ ಪಂದ್ಯ ಮುಗಿಯಬೇಕು ಎಂದು ತಿಳಿಸಲಾಗಿದೆ.
– ರಾತ್ರಿ 12.50 ರೊಳಗೆ ಪಂದ್ಯ ಮುಗಿಸಲು ಸಾಧ್ಯವಾಗದ ಪರಿಸ್ಥಿತಿಯಿದ್ದರೆ, ಸೂಪರ್ ಓವರ್ ಆಡಿಸಲಾಗುತ್ತದೆ.
– ಇನ್ನು ಸೂಪರ್ ಓವರ್ ಕೂಡ ಆಡುವಂತಹ ಪರಿಸ್ಥಿತಿ ಇರದಿದ್ದರೆ, ಆ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಅಲ್ಲದೆ ಇಲ್ಲಿ ಪಾಯಿಂಟ್ಸ್ ಟೇಬಲ್ ಲೆಕ್ಕಚಾರ ಬರಲಿದೆ. ಅಂದರೆ ಲೀಗ್ ಹಂತದಲ್ಲಿ ಅತೀ ಹೆಚ್ಚು ಪಾಯಿಂಟ್ಸ್ ಪಡೆದಿರುವ ತಂಡವು ಕ್ವಾಲಿಫೈಯರ್ ಆಗಲಿದೆ.
ಉದಾಹರಣೆಗೆ: ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಮಳೆ ಬಂದು, ಅಂತಿಮವಾಗಿ ಸೂಪರ್ ಓವರ್ ಕೂಡ ಆಡಲು ಸಾಧ್ಯವಾಗದಿದ್ದರೆ, ಪಾಯಿಂಟ್ಸ್ ಟೇಬಲ್ನಲ್ಲಿ ಮೇಲಿರುವ ತಂಡ ಮುಂದಿನ ಹಂತಕ್ಕೇರಲಿದೆ. ಅಂದರೆ ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದೆ. ಹಾಗೆಯೇ ಆರ್‌ಸಿಬಿ 4ನೇ ಸ್ಥಾನದಲ್ಲಿದೆ. ಇಲ್ಲಿ ಆರ್ಸಿಬಿಗಿಂತ ಹೆಚ್ಚಿನ ಪಾಯಿಂಟ್ಸ್ (18) ಲಕ್ನೋ ತಂಡಕ್ಕಿದ್ದು, ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ 2ನೇ ಕ್ವಾಲಿಫೈಯರ್ಗೆ ಏರಲಿದೆ. ಹಾಗೆಯೇ ಆರ್‌ಸಿಬಿ ತಂಡವು ಪಂದ್ಯವಾಡದೆ ಐಪಿಎಲ್ನಿಂದ ಹೊರಬೀಳಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.