ಗಾಯದಿಂದಾಗಿ ಪ್ರಸ್ತುತ ಭಾರತ ವಿಶ್ವಕಪ್ (ICC World Cup 2023) ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ (Rishabh Pant) ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಇಂದು ಮುಂಜಾನೆ ಅಂದರೆ ಶುಕ್ರವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನ (Lord Balaji) ದರ್ಶನ ಪಡೆದಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಈ ಇಬ್ಬರು ಆಟಗಾರರು ಶ್ರೀವಾರಿ ಸೇವೆಯಲ್ಲಿ ಪಾಲ್ಗೊಂಡರು. ಇಂಜುರಿಯಿಂದ ಚೇತರಿಸಿಕೊಂಡು ಆದಷ್ಟು ಬೇಗ ಭಾರತ ತಂಡವನ್ನು ಸೇರಿಕೊಳ್ಳುವ ತವಕದಲ್ಲಿರುವ ಪಂತ್ ಮತ್ತು ಅಕ್ಷರ್ ಪಟೇಲ್ ತಿಮ್ಮಪ್ಪನ ಸನ್ನಿದಾನದಲ್ಲಿ ಕಾಣಿಸಿಕೊಂಡಿರುವ ವೀಡಿಯೊ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅಕ್ಷರ್ ಪಟೇಲ್ ಮತ್ತು ರಿಷಬ್ ಪಂತ್ ಬಿಳಿ ಶರ್ಟ್ ಮತ್ತು ಧೋತಿ ಧರಿಸಿದ್ದು, ಇಬ್ಬರ ಹೆಗಲ ಮೇಲೆ ಕೆಂಪು ಬಣ್ಣದ ಟವೆಲ್ ಕಾಣಬಹುದಾಗಿದೆ. ಈ ಇಬ್ಬರು ಸ್ಟಾರ್ ಕ್ರಿಕೆಟಿಗರನ್ನು ನೋಡಿದ ತಕ್ಷಣ ಅಭಿಮಾನಿಗಳ ದಂಡು ಅವರ ಸುತ್ತವರೆದಿದೆ. ಬಳಿಕ ಕೆಲ ಸಮಯ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಇಬ್ಬರೊಂದಿಗೆ ಅಲ್ಲಿದ್ದ ಪೊಲೀಸರು ಕೂಡ ಫೋಟೋ ತೆಗೆಸಿಕೊಂಡರು.
#WATCH | Tirupati, Andhra Pradesh: Cricketers Rishabh Pant and Axar Patel visit Lord Balaji Temple. pic.twitter.com/aZVv8SX9gL
— ANI (@ANI) November 3, 2023
ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ 2023ರ ಏಷ್ಯಾಕಪ್ ವೇಳೆ ಗಾಯಗೊಂಡಿದ್ದರು. ಅಂದಿನಿಂದ ಅವರು ಕ್ರಿಕೆಟ್ನಿಂದ ದೂರ ಉಳಿದು ಚೇತರಿಸಿಕೊಳ್ಳುತ್ತಿದ್ದಾರೆ. ಅಕ್ಷರ್ ಭಾರತದ ವಿಶ್ವಕಪ್ ತಂಡದ ಭಾಗವಾಗಿದ್ದರು. ಆದರೆ ಸಮಯ ಕಳೆದಂತೆ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಅವರ ಬದಲಿಗೆ ಅನುಭವಿ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಪ್ರಸ್ತುತ ಅಕ್ಷರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸರಣಿಯಲ್ಲಿ ಗುಜರಾತ್ ತಂಡದ ಪರ ಆಡುತ್ತಿದ್ದಾರೆ.
ಇವರಲ್ಲದೆ, ನಾವು ರಿಷಬ್ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾದ ಈ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕಳೆದ ಡಿಸೆಂಬರ್ (2022) ನಲ್ಲಿ ಭೀಕರ ಕಾರು ಅಪಘಾತಕ್ಕೊಳಗಾಗಿದ್ದರು. ಆ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ನಂತರ ಪಂತ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ ಮುಂದಿನ ವರ್ಷದ ಆರಂಭದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Fri, 3 November 23