
ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಗಾಯಕ್ಕೆ ತುತ್ತಾದರು. ವೇಗದ ಬೌಲರ್ ಕ್ರಿಸ್ ವೋಕ್ಸ್ ಅವರ ಚೆಂಡು ಪಂತ್ ಅವರ ಶೂಗೆ ತಗುಲಿದ ಪರಿಣಾಮದಿಂದಾಗಿ ಕಾಲಿಗೆ ಗಂಭೀರ ಗಾಯವಾಗಿತ್ತು. ಇದರಿಂದಾಗಿ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಪಂತ್ಗೆ 6 ವಾರಗಳ ಕಾಲ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ವರದಿಯಾಗಿತ್ತು. ಆದರೀಗ ಕೇಳಿಬಂದಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 9 ರಿಂದ ನಡೆಯಲಿರುವ ಏಷ್ಯಾಕಪ್‌ನಿಂದಲೂ (Asia Cup 2025) ರಿಷಭ್ ಪಂತ್ ಹೊರಗುಳಿಯಲಿದ್ದಾರೆ. ಇದರ ಹೊರತಾಗಿ, ಅವರು ತವರಿನಲ್ಲಿ ನಡೆಯಲ್ಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರಗುಳಿಯಬಹುದು ಎಂದು ಹೇಳಲಾಗುತ್ತಿದೆ.
2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಆದರೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಈ ಟೂರ್ನಿಯಲ್ಲಿ ಆಡುವ ಸಾಧ್ಯತೆಗಳಿಲ್ಲ. ಇದಲ್ಲದೆ, ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲ್ಲಿರುವ ಟೆಸ್ಟ್ ಸರಣಿಯಿಂದಲೂ ಅವರು ಹೊರಗುಳಿಯುವ ಸಾಧ್ಯತೆ ಇದೆ. ಟೀಂ ಇಂಡಿಯಾ ಅಕ್ಟೋಬರ್ 2 ರಿಂದ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಆಡುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ತೋರುತ್ತದೆ. ಪಂತ್ ಅವರ ಮುರಿದ ಬೆರಳು ಗುಣವಾಗಲು 6 ವಾರಗಳು ಬೇಕಾಗುತ್ತದೆ ಎಂಬುದು ಮಾಹಿತಿ.
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಪಂತ್ ಕಾಲಿಗೆ ಗಂಭೀರ ಗಾಯವಾಗಿತ್ತು . ಇದಾದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಕಾಲ್ಬೆರಳಿನಲ್ಲಿ ಮುರಿತ ದೃಢಪಟ್ಟಿತು. ಇದರ ಹೊರತಾಗಿಯೂ, ಶಾರ್ದೂಲ್ ಠಾಕೂರ್ ಔಟಾದ ನಂತರ ಪಂದ್ಯದ ಎರಡನೇ ದಿನದಂದು ಅವರು ಬ್ಯಾಟಿಂಗ್ ಮಾಡಲು ಬಂದು ಅದ್ಭುತ ಅರ್ಧಶತಕ ಬಾರಿಸಿದರು.
IND vs ENG: ನೋವಿನಲ್ಲೂ ಅರ್ಧಶತಕ ಬಾರಿಸಿ ಹಲವು ದಾಖಲೆ ನಿರ್ಮಿಸಿದ ರಿಷಭ್ ಪಂತ್
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಂತ್, ಆಡಿದ 4 ಟೆಸ್ಟ್ ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 68.42 ಸರಾಸರಿಯಲ್ಲಿ 479 ರನ್ ಬಾರಿಸಿದರು. ಇದರಲ್ಲಿ 2 ಶತಕಗಳು ಮತ್ತು 3 ಅರ್ಧಶತಕಗಳು ಸೇರಿದ್ದವು. ಈ ಮೂಲಕ ಪಂತ್, ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Thu, 7 August 25