Rishabh Pant: ಫೈನಲ್ಗೇರಲು ಡೆಲ್ಲಿ ವಿಫಲ: ಕೆಕೆಆರ್ ವಿರುದ್ಧ ಸೋತ ಬಳಿಕ ರಿಷಭ್ ಪಂತ್ ಏನಂದ್ರು ಕೇಳಿ
IPL 2021 Qualifier 2, DC vs KKR: ಕೆಕೆಆರ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯ ಮುಗಿದ ಬಳಿಕ ಮಾತನಾಡಿದ ರಿಷಭ್ ಪಂತ್ ತುಂಬಾನೇ ಭಾವುಕರಾದರು. ಈ ಸಂದರ್ಭದಲ್ಲಿ ನನ್ನ ಬಳಿ ಹೇಳಲು ಯಾವುದೇ ಮಾತುಗಳಿಲ್ಲ ಎಂದು ಬೇಸರಗೊಂಡರು.
ಕೊನೆಯ ಓವರ್ ವರೆಗೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ 3 ವಿಕೆಟ್‌ಗಳಿಂದ ಜಯಿಸಿ 7 ವರ್ಷಗಳ ಬಳಿಕ ಫೈನಲ್‌ಗೇರಿದ ಸಾಧನೆ ಮಾಡಿತು. ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ನ (Delhi Capitals) ಚೊಚ್ಚಲ ಐಪಿಎಲ್ ಗೆಲ್ಲುವ ಕನಸು ಭಗ್ನವಾಯಿತು. ಟೂರ್ನಿ ಆರಂಭದಿಂದಲೂ ಭರ್ಜರಿ ಆಟ ಪ್ರದರ್ಶಿಸಿಕೊಂಡ ಬಂದ ಡೆಲ್ಲಿ ಅಂತಿಮ ಗೆಲ್ಲಲೇ ಬೇಕಾದ ಎರಡೂ ಪಂದ್ಯದಲ್ಲಿ ಸೋಲು ಕಂಡಿತು. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲೇ ಡೆಲ್ಲಿ ಉಳಿದುಕೊಂಡಿತು. ಆದರೆ, ಪ್ಲೇ ಆಫ್ ಪಂದ್ಯದಲ್ಲಿ ಮಾತ್ರ ಹಿನ್ನಡೆ ಅನುಭವಿಸಿತು. ಕೆಕೆಆರ್ ವಿರುದ್ಧ ಸೋತು ಫೈನಲ್ಗೇರಲು ವಿಫಲವಾದ ಬಗ್ಗೆ ತಂಡದ ನಾಯಕ ರಿಷಭ್ ಪಂತ್ (Rishabh Pant) ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ರಿಷಭ್ ಪಂತ್ ತುಂಬಾನೇ ಭಾವುಕರಾದರು. ಈ ಸಂದರ್ಭದಲ್ಲಿ ನನ್ನ ಬಳಿ ಹೇಳಲು ಯಾವುದೇ ಮಾತುಗಳಿಲ್ಲ ಎಂದು ಬೇಸರಗೊಂಡರು. “ನಾವು ನಂಬಿಕೆಯೊಂದಿಗೆ ಕಣಕ್ಕಿಳಿದೆವು. ಕೊನೆಯ ಹಂತದ ವರೆಗೂ ಪಂದ್ಯದಲ್ಲಿ ಇರಲು ಪ್ರಯತ್ನ ಪಟ್ಟೆವು. ಬೌಲರ್ಗಳು ತಮ್ಮಲ್ಲಿರುವ ಎಲ್ಲ ಸಾಮರ್ಥ್ಯವನ್ನು ತೋರ್ಪಡಿಸಿದರು. ಆದರೆ, ಅಂತಿಮವಾಗಿ ಅದು ನಮ್ಮ ಕಡೆ ಆಗಲಿಲ್ಲ. ಕೆಕೆಆರ್ ಮಧ್ಯಮ ಓವರ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ನಾವು ಅಲ್ಲೇ ಸ್ಟ್ರಕ್ ಆದೆವು, ಸ್ಟ್ರೈಕ್ ರೊಟೇಲ್ ಮಾಡಲು ಸಾಧ್ಯವಾಗಲೇಯಿಲ್ಲ. ಮುಂದಿನ ಸೀಸನ್ನಲ್ಲಿ ಇನ್ನಷ್ಟು ಉತ್ತಮವಾಗಿ ಕಮ್ಬ್ಯಾಕ್ ಮಾಡುತ್ತೇವೆ” ಎಂದು ಹೇಳಿದರು.
“ನಾವು ಇಲ್ಲಿ ಉತ್ತಮ ಕ್ರಿಕೆಟ್ ಆಡಿದ್ದೇವೆ. ಆಟ ಅಂದಮೇಲೆ ಅಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಪಾಸಿಟಿವ್ನಿಂದ ಮುಂದೆ ನಡೆಯಬೇಕು ಅಷ್ಟೆ. ನಮ್ಮ ಎಲ್ಲ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಖಂಡಿತಾ ಮುಂದಿನ ಸೀಸನ್ನಲ್ಲಿ ಕಮ್ಬ್ಯಾಕ್ ಮಾಡುತ್ತೇವೆ” ಎಂದು ಪಂತ್ ಹೇಳಿದ್ದಾರೆ.
ಇನ್ನೂ ಗೆಲುವಿನ ತಂಡದ ನಾಯಕ ಇಯಾನ್ ಮಾರ್ಗನ್ ಮಾತನಾಡಿ, “ನಮ್ಮ ಓಪನರ್ಗಳು ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದಕ್ಕಾಗಿ ನಾವು ಜಯ ಸಾಧಿಸಿದೆವು ಮತ್ತು ಫೈನಲ್ ತಲುಪಿದೆವು. 2 ಎಸೆತಗಳಲ್ಲಿ 6 ರನ್ ಬೇಕು ಎಂದಾಗ ಹೆಚ್ಚಿನ ಪಂದ್ಯ ಬೌಲರ್ಗಳ ಕಡೆ ಇರುತ್ತದೆ. ಆದರೆ, ರಾಹುಲ್ ತ್ರಿಪಾಠಿ ಅದನ್ನು ನಮ್ಮ ಕಡೆ ವಾಲಿಸಿದರು” ಎಂದು ಹೇಳಿದರು.
ಶಾರ್ಜಾ ಸ್ಟೇಡಿಯಂನಲ್ಲಿ ಬುಧವಾರ ನಡೆದ ‘ಸೆಮಿಫೈನಲ್’ ಮಾದರಿಯ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ವರುಣ್ ಚಕ್ರವರ್ತಿ (26ಕ್ಕೆ 2) ಸ್ಪಿನ್ ದಾಳಿಯ ನಡುವೆ 5 ವಿಕೆಟ್‌ಗೆ 135 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಕೆಕೆಆರ್ ತಂಡ ನಾಟಕೀಯ ಕುಸಿತದ ಹೊರತಾಗಿಯೂ 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 136 ರನ್ ಗಳಿಸಿ ಜಯಿಸಿತು.
(Rishabh Pant said that he has no words to express how he feels after DC vs KKR Qualifier 2 IPL 2021 Match)