ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂತ್ಯಕಂಡು ಕೊಂಚ ಸಮಯದ ಬಳಿಕ ಇದೀಗ ಭಾರತೀಯ ಅಭಿಮಾನಿಗಳಿಗೆ ಕ್ರಿಕೆಟ್ ಮತ್ತೆ ಒಲಿದುಬಂದಿದೆ. ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಸರಣಿಗೆ ಚಾಲನೆ ಸಿಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಯಂಗ್ ಇಂಡಿಯಾವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ವಿಶ್ರಾಂತಿಯ ಮೊರೆ ಹೋದರೆ ನಾಯಕನ ಸ್ಥಾನ ಅಲಂಕರಿಸಿದ್ದ ಕೆಎಲ್ ರಾಹುಲ್ (KL Rahul) ನಿನ್ನೆ ಇಂಜುರಿಯಿಂದಾಗಿ ಸರಣಿಯಿಂದ ಹೊರ ನಡೆದಿದ್ದಾರೆ. ಹೀಗಾಗಿ ರಿಷಭ್ ಪಂತ್ ಕ್ಯಾಪ್ಟನ್ ಪಟ್ಟ ತೊಟ್ಟಿದ್ದು ಉಪ ನಾಯಕನ ಜವಾಬ್ದಾರಿ ಹಾರ್ದಿಕ್ ಪಾಂಡ್ಯಗೆ ಒಲಿದುಬಂದಿದೆ. ಒಟ್ಟಾರೆ ಭಾರತೀಯ ಯುವ ಪಡೆ ಹೊಸ ಸವಾಲಿಗೆ ಸಜ್ಜಾಗುತ್ತಿದ್ದು ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ರಾಹುಲ್ ಅಲಭ್ಯರಾಗಿರುವ ಕಾರಣ ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕ ಹಾಗೂ ನಾಲ್ಕನೇ ಸ್ಥಾನದಲ್ಲಿ ರಿಷಭ್ ಪಂತ್ ಆಡಲಿದ್ದಾರೆ. ನಂತರದ ಬ್ಯಾಟಿಂಗ್ ಕ್ರಮಾಂಕವೇ ತಂಡಕ್ಕೆ ತಲೆನೋವಾಗಿದೆ. ಹಾರ್ದಿಕ್ ಪಟೇಲ್ ಮರಳಿರುವುದರಿಂದ ಅವರನ್ನು ಆಲ್ ರೌಂಡರ್ ಮತ್ತು ಫಿನಿಷರ್ ಪಾತ್ರದಲ್ಲಿ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಆದರೆ, ಆರ್‌ಸಿಬಿಯಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿದ್ದಾರೆ. ಈ ಬಳಗವನ್ನು ಸಮರ್ಥವಾಗಿ ದುಡಿಸಿಕೊಳ್ಳುವತ್ತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚಿತ್ತ ನೆಟ್ಟಿದ್ದಾರೆ.
ಸೌತ್ ಆಫ್ರಿಕಾ ಸರಣಿಯಿಂದ ಕೊನೇ ಕ್ಷಣದಲ್ಲಿ ಹೊರ ನಡೆದ ಕನ್ನಡಿಗ ರಾಹುಲ್; ಪಂತ್ಗೆ ನಾಯಕತ್ವ
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಉಮ್ರಾನ್ ಮಲಿಕ್ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಸ್ಪಿನ್ ತಾರೆಯರಾದ ಯುಜ್ವೇಂದ್ರ ಚಹಲ್ ಒಂದುಕಡೆಯಿದ್ದರೆ ಕುಲ್ದೀಪ್ ಯಾದವ್ ಇಂಜುರಿಯಿಂದ ಹೊರಬಿದ್ದ ಕಾರಣ ರವಿ ಬಿಷ್ಣೋಯಿ ಅಥವಾ ಅಕ್ಷರ್ ಪಟೇಲ್ಗೆ ಸ್ಥಾನ ಸಿಗಬಹುದು. ಒಟ್ಟಾರೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡದ ರಚನೆ ಮಾಡಲು ಈ ದ್ವಿಪಕ್ಷೀಯ ಸರಣಿಗಳಲ್ಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯುವ ಆಟಗಾರರ ಸತ್ವ ಪರೀಕ್ಷೆ ಮಾಡಲಿದೆ.
ಇತ್ತ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡಕ್ಕೂ ಇದು ಪ್ರಮುಖ ಸರಣಿಯಾಗಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಕ್ವಿಂಟನ್ ಡಿಕಾಕ್, ಡೇವಿಡ್ ಮಿಲ್ಲರ್, ಮರ್ಕರಂ, ಕಗಿಸೊ ರಬಾಡ ಅವರು ತಂಡದ ಶಕ್ತಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ಗಳು ಭಾರತದ ನೆಲದಲ್ಲಿ ಆಡಿದ ಸಾಕಷ್ಟು ಅನುಭವ ಹೊಂದಿರುವುದರಿಂದ ಈ ಪಂದ್ಯ ಕುತೂಹಲ ಮೂಡಿಸಿದೆ.
ಭಾರತ ತಂಡ ಸತತ 12 ಟಿ-20 ಪಂದ್ಯಗಳನ್ನು ಗೆದ್ದು ಅತೀ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಆಫ್ಘಾನಿಸ್ತಾನ ತಂಡದ ಜೊತೆ ಅಗ್ರಸ್ಥಾನ ಹಂಚಿಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಭಾರತ ಅತೀ ಹೆಚ್ಚು ಸತತ ಟಿ-20 ಪಂದ್ಯಗಳನ್ನು ಗೆದ್ದ ವಿಶ್ವದಾಖಲೆ ಬರೆಯಲಿದೆ.
ಜೂನ್ 9 ರಿಂದ ಆರಂಭಗೊಳ್ಳುವ ಮೊದಲ ಟಿ20 ಪಂದ್ಯವು ದೆಹಲಿಯಲ್ಲಿ ನಡೆಯಲಿದ್ದು, ಜೂನ್ 12 ಎರಡನೇ ಟಿ20 ಕಟಕ್, ಜೂನ್ 14 ಮೂರನೇ ಟಿ20 ವಿಶಾಖಪಟ್ಟಣಂ, ಜೂನ್ 17 ನಾಲ್ಕನೇ ಟಿ20 ರಾಜ್‌ಕೋಟ್, ಜೂನ್ 19 ಐದನೇ ಟಿ20 ಬೆಂಗಳೂರಿನಲ್ಲಿ ನಡೆಯಲಿದೆ.
ಭಾರತ ತಂಡ: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಟಬ್ರೈಜ್ ಶಂಸಿ, ಟ್ರಿಸ್ಟನ್ ಸ್ಟಬ್ಸ್, ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:53 am, Thu, 9 June 22