IND vs SA: ನಾಲ್ವರು ಆರಂಭಿಕರು: ಇನಿಂಗ್ಸ್ ಆರಂಭಿಸುವವರು ಯಾರು?
IND vs SA: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಜೊತೆಗೆ ಆರಂಭಿಕನಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ 15 ಪಂದ್ಯಗಳಿಂದ 612 ರನ್ ಕಲೆಹಾಕಿದ್ದರು.
ಭಾರತ-ದಕ್ಷಿಣ ಆಫ್ರಿಕಾ (India vs South Africa 1st T20) ನಡುವಣ 5 ಪಂದ್ಯಗಳ ಟಿ20 ಸರಣಿ ಗುರುವಾರದಿಂದ (ಜೂ.9) ಆರಂಭವಾಗಲಿದೆ. ಮೊದಲ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪರ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಟೀಮ್ ಇಂಡಿಯಾದ ಖಾಯಂ ಆರಂಭಿಕ ಆಟಗಾರ ರೋಹಿತ್ ಶರ್ಮಾ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಮತ್ತೋರ್ವ ಅನುಭವಿ ಓಪನರ್ ಶಿಖರ್ ಧವನ್ ಈ ಸರಣಿಗೆ ಆಯ್ಕೆಯಾಗಿಲ್ಲ. ಹೀಗಾಗಿ ಟೀಮ್ ಇಂಡಿಯಾ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎಂಬುದೇ ಪ್ರಶ್ನೆ. ಏಕೆಂದರೆ ತಂಡದಲ್ಲಿ ನಾಲ್ವರು ಓಪನರ್ಗಳಿದ್ದಾರೆ. ಅವರೆಂದರೆ…ಕೆಎಲ್ ರಾಹುಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಹಾಗೂ ವೆಂಕಟೇಶ್ ಅಯ್ಯರ್.
ಇಲ್ಲಿ ಟೀಮ್ ಇಂಡಿಯಾ ನಾಯಕನಾಗಿ ತಂಡದಲ್ಲಿರುವ ಕೆಎಲ್ ರಾಹುಲ್ ಒಂದು ಬದಿಯಲ್ಲಿ ಆರಂಭಿಕನಾಗಿ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು. ಹಾಗೆಯೇ ಮತ್ತೊಂದು ಬದಿಯಲ್ಲಿ ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಅಥವಾ ವೆಂಕಟೇಶ್ ಅಯ್ಯರ್ ಸ್ಥಾನ ಪಡೆಯಬಹುದು. ಆದರೆ ಈ ಮೂವರು ಆಟಗಾರರು ಈ ಬಾರಿಯ ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ ಎಂಬುದೇ ವಿಶೇಷ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯಾರಿಗೆ ಮಣೆಹಾಕಲಿದೆ ಎಂಬುದೇ ಕುತೂಹಲ.
ಏಕೆಂದರೆ ಈ ಸಲ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಜೊತೆಗೆ ಆರಂಭಿಕನಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ 15 ಪಂದ್ಯಗಳಿಂದ 612 ರನ್ ಕಲೆಹಾಕಿದ್ದರು. ಈ ವೇಳೆ ರಾಹುಲ್ ಬ್ಯಾಟ್ನಿಂದ 2 ಶತಕ ಹಾಗೂ 4 ಅರ್ಧಶತಕಗಳು ಮೂಡಿಬಂದಿದ್ದವು.
ಆದರೆ ಸಿಎಸ್ಕೆ ಪರ ಆರಂಭಿಕನಾಗಿ 14 ಪಂದ್ಯವಾಡಿದ್ದ ರುತುರಾಜ್ ಗಾಯಕ್ವಾಡ್ ಕಲೆಹಾಕಿದ್ದು ಕೇವಲ 368 ರನ್ ಮಾತ್ರ. ಈ ವೇಳೆ 3 ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.
ಹಾಗೆಯೇ ಮುಂಬೈ ಇಂಡಿಯನ್ಸ್ ಪರ ಓಪನರ್ ಆಗಿ 14 ಪಂದ್ಯವಾಡಿದ್ದ ಇಶಾನ್ ಕಿಶನ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾಗಿದ್ದರು. ಅದರಂತೆ ಈ ಬಾರಿ 3 ಅರ್ಧಶತಕದೊಂದಿಗೆ 418 ರನ್ ಮಾತ್ರ ಗಳಿಸಿದ್ದರು.
ಇನ್ನು ವೆಂಕಟೇಶ್ ಅಯ್ಯರ್ ಈ ಬಾರಿ ಕೆಕೆಆರ್ ಪರ 12 ಪಂದ್ಯವಾಡಿದ್ದರು. ಈ ವೇಳೆ ಕಲೆಹಾಕಿದ್ದು ಕೇವಲ 182 ರನ್ ಮಾತ್ರ. ಅಲ್ಲದೆ ಕೇವಲ ಒಂದು ಅರ್ಧಶತಕ ಮಾತ್ರ ಬಾರಿಸಿದ್ದರು.
ಇಲ್ಲಿ ವೆಂಕಟೇಶ್ ಅಯ್ಯರ್ ಫಾರ್ಮ್ನಲ್ಲಿ ಇಲ್ಲದಿರುವುದು ಸ್ಪಷ್ಟ. ಹೀಗಾಗಿ ಅಯ್ಯರ್ ಆರಂಭಿಕನಾಗಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಬಹುದು. ಇದಾಗ್ಯೂ ಇಶಾನ್ ಕಿಶನ್ ಹಾಗೂ ರುತುರಾಜ್ ಗಾಯಕ್ವಾಡ್ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೆ ಇಲ್ಲಿ ಇಶಾನ್ ಕಿಶನ್ ಎಡಗೈ ಆಟಗಾರನಾಗಿರುವ ಕಾರಣ ಬಲಗೈ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಜೊತೆ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚು. ಹೀಗಾಗಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದರೆ ಅಚ್ಚರಿಪಡಬೇಕಿಲ್ಲ.
ಟೀಮ್ ಇಂಡಿಯಾ ಟಿ20 ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.