IND vs ENG: ‘ಮೈದಾನಕ್ಕಿಳಿಯುವುದಿಲ್ಲ’ ; ಪಂತ್ ಗಾಯದ ಬಗ್ಗೆ ಆಘಾತಕ್ಕಾರಿ ಮಾಹಿತಿ ನೀಡಿದ ಬಿಸಿಸಿಐ

Rishabh Pant's Finger Injury: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನ ರಿಷಭ್ ಪಂತ್ ಅವರು ಕೈ ಬೆರಳಿಗೆ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಎರಡನೇ ದಿನದಾಟದಲ್ಲೂ ಅವರು ಆಡಲಾರರು ಎಂದು ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಪಂತ್ ಅವರ ಗಾಯದಿಂದಾಗಿ ಭಾರತ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಧ್ರುವ್ ಜುರೇಲ್ ಕೀಪಿಂಗ್ ಮಾಡುತ್ತಿದ್ದಾರೆ. ಪಂತ್ ಅವರ ಚೇತರಿಕೆಗೆ ವೈದ್ಯಕೀಯ ತಂಡ ನಿಗಾ ವಹಿಸಿದೆ.

IND vs ENG: ‘ಮೈದಾನಕ್ಕಿಳಿಯುವುದಿಲ್ಲ’ ; ಪಂತ್ ಗಾಯದ ಬಗ್ಗೆ ಆಘಾತಕ್ಕಾರಿ ಮಾಹಿತಿ ನೀಡಿದ ಬಿಸಿಸಿಐ
Rishabh Pant

Updated on: Jul 11, 2025 | 4:21 PM

ಲಾರ್ಡ್ಸ್‌ ಟೆಸ್ಟ್​ನ ಮೊದಲ ದಿನದಾಟದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡು ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಮತ್ತು ಟೆಸ್ಟ್ ಉಪನಾಯಕ ರಿಷಭ್ ಪಂತ್ (Rishabh Pant), ಎರಡನೇ ದಿನದಾಟದಲ್ಲೂ ಮೈದಾನಕ್ಕಿಳಿದಿಲ್ಲ. ಇದನ್ನು ಗಮನಿಸಿದರೆ ಪಂತ್ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದನ್ನು ಇಲ್ಲಿ ನಾವು ಊಹಿಸಬಹುದು. ಇದೀಗ ಬಿಸಿಸಿಐ (BCCI) ಪಂತ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿದ್ದು, ಇದು ಭಾರತೀಯ ಅಭಿಮಾನಿಗಳಿಗೆ ಮತ್ತು ಟೀಮ್ ಇಂಡಿಯಾಕ್ಕೆ ಆಘಾತ ನೀಡಿದೆ. ಲಾರ್ಡ್ಸ್ ಟೆಸ್ಟ್‌ನ (Lords Test) ಎರಡನೇ ದಿನವೂ ರಿಷಭ್ ಪಂತ್ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಒಂದು ದಿನದ ಮಟ್ಟಿಗೆ ರಿಷಭ್ ಪಂತ್ ಔಟ್

ವಾಸ್ತವವಾಗಿ ಎರಡನೇ ದಿನದಾಟ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಅಭ್ಯಾಸದ ವೇಳೆ ರಿಷಭ್ ಪಂತ್ ಬ್ಯಾಟ್ ಹಿಡಿದು ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಕೈ ಬೆರಳಿನ ನೋವಿನಿಂದ ಪಂತ್​ಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಅವರು ಎರಡನೇ ದಿನದಾಟದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಸಿಸಿಐ ನೀಡಿರುವ ಮಾಹಿತಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಎರಡನೇ ದಿನದಾಟ ಆರಂಭವಾದ ಕೂಡಲೇ ಪಂತ್ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ‘ರಿಷಭ್ ಪಂತ್ ಕೈ ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ. ಹೀಗಾಗಿ 2ನೇ ದಿನದಾಟದಲ್ಲೂ ಧೃವ್ ಜುರೇಲ್ ಕೀಪಿಂಗ್ ಮುಂದುವರೆಸಲಿದ್ದಾರೆ’ ಎಂದಿದೆ.

ಬಿಸಿಸಿಐ ನೀಡಿರುವ ಮಾಹಿತಿ

ಪಂತ್ ಗಾಯಗೊಂಡಿರುವುದು ಭಾರತದ ಬ್ಯಾಟಿಂಗ್‌ ವಿಭಾಗಕ್ಕೆ ದೊಡ್ಡ ಹೊಡೆತ ಎನ್ನಬಹುದು. ಏಕೆಂದರೆ ಪ್ರಸ್ತುತ ಪಂತ್ ಉತ್ತಮ ಫಾರ್ಮ್‌ನಲ್ಲಿದ್ದು, ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಅಲ್ಲದೆ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿದ್ದರು. ಈಗ ಪಂತ್ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೆ, ಇದು ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ.

IND vs ENG: ಭಾರತದ ವಿರುದ್ಧ ಶತಕ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಜೋ ರೂಟ್

ರಿಷಭ್ ಪಂತ್ ಗಾಯಗೊಂಡಿದ್ದು ಹೇಗೆ?

ಮೊದಲ ದಿನದಾಟದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ ರಿಷಭ್ ಪಂತ್ ಗಾಯಗೊಂಡರು. ಬುಮ್ರಾ ಅವರ ಲೆಗ್ ಸೈಡ್ ಹೊರಗೆ ಹೋಗುತ್ತಿದ್ದ ಚೆಂಡನ್ನು ತಡೆಯಲು ಪ್ರಯತ್ನಿಸುವಾಗ, ಚೆಂಡು ಪಂತ್ ಅವರ ಬೆರಳಿಗೆ ತಗುಲಿತು. ದುರಾದೃಷ್ಟವೆಂಬಂತೆ ಚೆಂಡು ಪಂತ್ ಅವರ ಎಡಗೈ ಬೆರಳಿಗೆ ತಗುಲಿದೆ. ಹೀಗಾಗಿ ಪಂತ್ ಫಿಟ್ ಆಗಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ. ಏಕೆಂದರೆ ಪಂತ್ ಚೇತರಿಸಿಕೊಳ್ಳದಿದ್ದರೆ, ಟೀಂ ಇಂಡಿಯಾ ಕೇವಲ 10 ಆಟಗಾರರೊಂದಿಗೆ ಬ್ಯಾಟಿಂಗ್ ಮಾಡಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Fri, 11 July 25