Asia Cup 2025: ರಿಷಭ್ ಪಂತ್ ಟ್ರಿಕ್ಸ್ ಬಳಸಲು ಹೋಗಿ ಮಂಗನಾದ ಪಾಕಿಸ್ತಾನ ವೇಗಿ

Asia Cup Final 2025: 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ರಿಷಭ್ ಪಂತ್ ಬಳಸಿದ ಚಾಣಾಕ್ಷ ತಂತ್ರ ಭಾರತಕ್ಕೆ ಗೆಲುವು ತಂದುಕೊಟ್ಟಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಂತ್ ನಟನೆಯಿಂದ ಎದುರಾಳಿ ಬ್ಯಾಟರ್‌ಗಳ ಲಯ ತಪ್ಪಿ ಭಾರತ ಚಾಂಪಿಯನ್ ಆಗಿತ್ತು. ಆದರೆ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಫಹೀಮ್ ಅಶ್ರಫ್ ಇದೇ ತಂತ್ರ ಅನುಕರಿಸಲು ಯತ್ನಿಸಿ ವಿಫಲರಾದರು. ಭಾರತದ ಗೆಲುವನ್ನು ತಡೆಯುವ ಅವರ ಪ್ರಯತ್ನ ಫಲ ನೀಡಲಿಲ್ಲ, ಪಾಕ್ ತಂಡ ತೀವ್ರ ಮುಖಭಂಗ ಅನುಭವಿಸಿತು.

Asia Cup 2025: ರಿಷಭ್ ಪಂತ್ ಟ್ರಿಕ್ಸ್ ಬಳಸಲು ಹೋಗಿ ಮಂಗನಾದ ಪಾಕಿಸ್ತಾನ ವೇಗಿ
Faheem Ashraf

Updated on: Sep 29, 2025 | 5:04 PM

2024 ರ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯವನ್ನು ನೋಡಿದವರಿಗೆಲ್ಲ ಅದೊಂದು ಘಟನೆ ಈಗಲೂ ನೆನಪಿನಲ್ಲಿ ಇದ್ದೆ ಇರುತ್ತದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಟೀಂ ಇಂಡಿಯಾ ಕೈನಿಂದ ಜಾರುವುದರಲ್ಲಿತ್ತು. ಪಂದ್ಯದ ಕೊನೆಯ ಹಂತದವರೆಗೂ ಗೆಲುವನ್ನು ತಮ್ಮ ಕೈನಲ್ಲೇ ಇಟ್ಟುಕೊಂಡಿದ್ದ ಆಫ್ರಿಕಾ ತಂಡ ಕೊನೆಯಲ್ಲಿ ಮುಗ್ಗರಿಸಿ, ಚಾಂಪಿಯನ್ ಪಟ್ಟವನ್ನು ಕಳೆದುಕೊಂಡಿತ್ತು. ಭಾರತದ ಕೈನಿಂದ ಜಾರಿದ್ದ ವಿಜಯಲಕ್ಷ್ಮೀಯನ್ನು ಮತ್ತೆ ತಮ್ಮತ್ತ ವಾಲುವಂತೆ ಮಾಡುವಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಮಾಡಿದ ತಂತ್ರ ಸರಿಯಾಗಿ ಕೆಲಸ ಮಾಡಿತ್ತು. ಇದೀಗ ಏಷ್ಯಾಕಪ್‌ (Asia Cup) ಫೈನಲ್‌ನಲ್ಲಿ ರಿಷಭ್ ಪಂತ್ ತಂತ್ರವನ್ನು ಕಾಪಿ ಮಾಡಲು ಯತ್ನಿಸಿದ ಪಾಕಿಸ್ತಾನ ಇಂಗು ತಿಂದ ಮಂಗನಂತ್ತಾಗಿದೆ.

ಫಲಿಸಿತ್ತು ಪಂತ್ ತಂತ್ರ

ವಾಸ್ತವವಾಗಿ 2024 ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಫ್ರಿಕಾ ತಂಡದ ಗೆಲುವಿಗೆ 30 ಎಸೆತಗಳಲ್ಲಿ 30 ರನ್ ಬೇಕಾಗಿತ್ತು. ಹೀಗಾಗಿ ಪಂದ್ಯ ಭಾಗಶಃ ಭಾರತದ ಕೈನಿಂದ ಜಾರಿ ಹೋಗಿತ್ತು. ಆದರೆ ಆ ಸಮಯದಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ ರಿಷಭ್ ಪಂತ್, ಆಫ್ರಿಕಾ ಆಟಗಾರರ ಲಯವನ್ನು ಕೆಡಿಸುವ ಕೆಲಸಕ್ಕೆ ಕೈಹಾಕಿದರು. ಕ್ರೀಸ್​​ನಲ್ಲಿದ್ದ ಹೆನ್ರಿಚ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಒಬ್ಬರಾದ ಮೇಲೆ ಒಬ್ಬರಂತೆ ಬೌಂಡರಿ ಸಿಕ್ಸರ್​ಗಳ ಮಳೆಗರೆಯುತ್ತ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು.

ಇದನ್ನು ಗಮನಿಸಿದ ಪಂತ್, ಇವರಿಬ್ಬರ ಲಯವನ್ನು ಕೆಡಿಸುವ ಸಲುವಾಗಿ ಇಂಜುರಿಗೊಂಡವರಂತೆ ಮೈದಾನದಲ್ಲೇ ಅಂಗಾತ ಮಲಗಿ ನೋವಿನಿಂದ ನರಳಲಾರಂಭಿಸಿದರು. ಇದನ್ನು ಗಮನಿಸಿದ ತಂಡದ ಫಿಸಿಯೋ ಕೂಡಲೇ ಮೈದಾನಕ್ಕೆ ಬಂದು ಪಂತ್​ಗೆ ಚಿಕಿತ್ಸೆ ನೀಡಲಾರಂಭಿಸಿದರು. ಇದಕ್ಕೆ ನಾಲ್ಕೈದು ನಿಮಿಷ ಸಮಯ ತೆಗೆದುಕೊಂಡಿತು. ಇದರಿಂದ ಪಂದ್ಯದ ಮೊಮೆಂಟಮ್ ಬದಲಾಯಿತು. ಆಫ್ರಿಕಾದ ಬ್ಯಾಟರ್​​ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಕೈಚೆಲ್ಲಿ ಪೆವಿಲಿಯನ್ ಸೇರಿಕೊಂಡರು. ಪರಿಣಾಮವಾಗಿ ಭಾರತ ಸೋಲುವ ಪಂದ್ಯವನ್ನು ಗೆದ್ದುಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಪಂದ್ಯ ಮುಗಿದ ಎಷ್ಟೋ ದಿನಗಳ ಬಳಿಕ ಅಂದು ನಾನು ಮಾಡಿದ್ದು ನಾಟಕ ಎಂಬುದನ್ನು ಸ್ವತಃ ರಿಷಭ್ ಪಂತ್ ಅವರೇ ಹೇಳಿದ್ದರು.

ಪಂತ್ ಟ್ರಿಕ್ಸ್ ಕಾಪಿ ಮಾಡಿದ ಪಾಕ್ ವೇಗಿ

ಇದೀಗ ಭಾರತ ವಿರುದ್ಧದ ಏಷ್ಯಾಕಪ್‌ ಫೈನಲ್ ಪಂದ್ಯದಲ್ಲಿ ಪಂದ್ಯ ಕೈ ಜಾರುತ್ತಿರುವುದನ್ನು ಗಮನಿಸಿದ ಪಾಕಿಸ್ತಾನದ ವೇಗಿ ಫಹೀಮ್ ಅಶ್ರಫ್, ಇಂಜುರಿಗೊಂಡವರಂತೆ ಇದ್ದಕ್ಕಿದ್ದಂತೆ ಮೈದಾನದಲ್ಲಿ ಮಲಗಿದರು. ವಾಸ್ತವವಾಗಿ ಕೊನೆಯ ಎರಡು ಓವರ್​ಗಳಲ್ಲಿ ಭಾರತದ ಗೆಲುವಿಗೆ 17 ರನ್ ಬೇಕಿತ್ತು. ಇದು ಸಾಲದೆಂಬಂತೆ 18ನೇ ಓವರ್​ನ ಕೊನೆಯ ಎಸೆತದಲ್ಲಿ ಶಿವಂ ದುಬೆ ಭರ್ಜರಿ ಸಿಕ್ಸರ್ ಬೇರೆ ಬಾರಿಸಿದ್ದರು. ಇದರಿಂದ ಕಂಗಾಲಾಗಿದ್ದ ಪಾಕಿಸ್ತಾನ, ರಿಷಭ್ ಪಂತ್ ತಂತ್ರವನ್ನು ಇಲ್ಲಿ ಬಳಸುವ ಯೋಚನೆ ಮಾಡಿತು. ಅದರಂತೆ 19ನೇ ಓವರ್ ಬೌಲ್ ಮಾಡಲು ಬಂದ ಫಹೀಮ್ ಅಶ್ರಫ್, ಕಾಲಿನ ನೋವಿನಿಂದ ಬಳಲುತ್ತಿರುವವರಂತೆ ನಾಟಕವನ್ನು ಆರಂಭಿಸಿ ಮೈದಾನದಲ್ಲೇ ಮಲಗಿದರು. ಇದನ್ನು ಗಮನಿಸಿದ ಪಾಕಿಸ್ತಾನದ ಫಿಸಿಯೋ ಕೂಡಲೇ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಲು ಆರಂಭಿಸಿದರು.

ಇದರಿಂದ ಪಂದ್ಯ ಶುರುವಾಗಲು ಐದಾರು ನಿಮಿಷ ತೆಗೆದುಕೊಂಡಿತು. ಆದಾಗ್ಯೂ ಫಹೀಮ್ ಅಶ್ರಫ್ ಅವರ ತಂತ್ರ ನಿರೀಕ್ಷಿತ ಯಶಸ್ಸು ಕೊಡಲಿಲ್ಲ. ಈ ಓವರ್​ನಲ್ಲಿ ಟೀಂ ಇಂಡಿಯಾ 7 ರನ್ ಕಲೆಹಾಕಿದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಶಿವಂ ದುಬೆ ಕ್ಯಾಚಿತ್ತು ಔಟಾದರು. ಆದರೆ ಕೊನೆಯ ಓವರ್​ನಲ್ಲಿ ತಿಲಕ್ ವರ್ಮಾ 1 ಸಿಕ್ಸರ್ ಹಾಗೂ ರಿಂಕು ಸಿಂಗ್ 1 ಬೌಂಡರಿ ಬಾರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Mon, 29 September 25

Follow Us