AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಟ್ರೋಫಿ, ನನ್ನ ಇಷ್ಟ… ಭಾರತವನ್ನು ಎದುರಾಕಿ ಮುಖಭಂಗಕ್ಕೊಳಗಾದ ನಖ್ವಿ

Mohsin Naqvi: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಖ್ವಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವುದು. ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ಆಟಗಾರರೊಂದಿಗೆ ಹ್ಯಾಂಡ್​ಶೇಕ್ ಮಾಡದಿದ್ದ ಟೀಮ್ ಇಂಡಿಯಾ ಆಟಗಾರರು, ಅಂತಿಮವಾಗಿ ಪಿಸಿಬಿ ಅಧ್ಯಕ್ಷರಿಂದ ಪ್ರಶಸ್ತಿ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.

ನನ್ನ ಟ್ರೋಫಿ, ನನ್ನ ಇಷ್ಟ... ಭಾರತವನ್ನು ಎದುರಾಕಿ ಮುಖಭಂಗಕ್ಕೊಳಗಾದ ನಖ್ವಿ
Mohsin Naqvi
ಝಾಹಿರ್ ಯೂಸುಫ್
|

Updated on:Sep 29, 2025 | 2:31 PM

Share

ಏಷ್ಯಾಕಪ್ ಫೈನಲ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಹೋರಾಟದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಮೈದಾನದಲ್ಲಿ ಹೈಡ್ರಾಮಾ ನಡೆಯಿತು. ಪಂದ್ಯ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು.

ಇದಾಗ್ಯೂ ಭಾರತ ತಂಡ ಟ್ರೋಫಿ ಪಡೆಯುವುದಿಲ್ಲ ಎಂದೂ ಹೇಳಿರಲಿಲ್ಲ. ಮೊಹ್ಸಿನ್ ನಖ್ವಿ ಬದಲಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿಯನ್ನು ಹಸ್ತಾಂತರಿಸುವಂತೆ ವಿನಂತಿಸಿತ್ತು, ಆದರೆ ಮೊಹ್ಸಿನ್ ನಖ್ವಿ ಇದಕ್ಕೆ ಒಪ್ಪಿರಲಿಲ್ಲ.

ನಾನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ. ಇಲ್ಲಿ ನನ್ನ ತೀರ್ಮಾನವೇ ಮುಖ್ಯ. ನನ್ನ ಟ್ರೋಫಿ, ನನ್ನ ಇಷ್ಟ ಎಂಬ ವಾದವನ್ನು ಮುಂದಿಟ್ಟರು. ಅಲ್ಲದೆ ಕೆಲ ಕಾಲ ಯಾರೊಂದಿಗೊ ಫೋನ್​ನಲ್ಲಿ ಮಾತನಾಡಿದರು. ಇದಾಗ್ಯೂ ಟೀಮ್ ಇಂಡಿಯಾ ಆಟಗಾರರು ತಮ್ಮ ನಿರ್ಧಾರವನ್ನು ಬದಲಿಸಿರಲಿಲ್ಲ.

ಇದರಿಂದ ಮತ್ತಷ್ಟು ಮುಖಭಂಗಕ್ಕೆ ಒಳಗಾದ ಮೊಹ್ಸಿನ್ ನಖ್ವಿ ಕೆಲ ಕಾಲ ವೇದಿಕೆಯಲ್ಲಿದ್ದರು. ಇದಾಗ್ಯೂ ಭಾರತೀಯ ಆಟಗಾರರು ತನ್ನಿಂದ ಟ್ರೋಫಿ ಸ್ವೀಕರಿಸಲ್ಲ ಎಂಬುದು ದೃಢವಾಗುತ್ತಿದ್ದಂತೆ, ಏಷ್ಯಾಕಪ್ ಅನ್ನು ಹೊಟೇಲ್​ಗೆ ಕೊಂಡೊಯ್ಯುವಂತೆ ನಖ್ವಿ ಸೂಚಿಸಿದ್ದಾರೆ. ಅಲ್ಲದೆ ಫೋಟೋಶೂಟ್​ಗಾಗಿ ಚಾಂಪಿಯನ್ಸ್ ತಂಡದ ಮುಂದೆ ಇಡಲಾಗುವ ಚಾಂಪಿಯನ್ಸ್ ಬೋರ್ಡ್ ಅನ್ನು ಹಿಂದಕ್ಕೆ ಕೊಂಡೊಯ್ಯುವಂತೆ ಆಜ್ಞಾಪಿಸಿದ್ದಾರೆ.

ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಟೀಮ್ ಇಂಡಿಯಾ ಆಟಗಾರರು ಇತರೆ ಪ್ರಶಸ್ತಿಗಳನ್ನು ಸ್ವೀಕರಿಸಿದ ಬಳಿಕ, ಚಾಂಪಿಯನ್ಸ್ ಸಂಭ್ರಮವನ್ನು ಆಚರಿಸಿದ್ದಾರೆ. ಈ ಮೂಲಕ ಟ್ರೋಫಿ ಇಲ್ಲದಿದ್ದರೂ ನಮ್ಮ ಸಂಭ್ರಮಕ್ಕೆ ಅಡ್ಡಿಯಿಲ್ಲ ಎಂಬುದನ್ನು ಭಾರತೀಯ ಆಟಗಾರರು ಸಾರಿ ಹೇಳಿದ್ದಾರೆ.

ಇದೀಗ ಟೀಮ್ ಇಂಡಿಯಾವನ್ನು ಎದುರಾಕಿಕೊಂಡು ಟ್ರೋಫಿ ಎತ್ತಿಕೊಂಡು ಹೋದ ಮೊಹ್ಸಿನ್ ನಖ್ವಿ ವಿರುದ್ಧ ಬಿಸಿಸಿಐ, ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್​ಗೆ (ಐಸಿಸಿ) ದೂರು ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಮುಂಬರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಲಿದೆ.

ಅಲ್ಲದೆ ಭಾರತ ಸೇರಿದಂತೆ ಕೆಲ ಕ್ರಿಕೆಟ್ ಮಂಡಳಿ ಮೊಹ್ಸಿನ್ ನಖ್ವಿ ಅವರನ್ನು ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸುವುದು ಖಚಿತ.

ಇದನ್ನೂ ಓದಿ: Asia Cup 2025: ಏಷ್ಯಾಕಪ್​ನಲ್ಲಿ ಕಾರ್ ಸಿಕ್ಕಿದ್ದು ಯಾರಿಗೆ?

ಒಟ್ಟಿನಲ್ಲಿ ಭಾರತವನ್ನು ಎದುರಾಕಿಕೊಂಡ ಮೊಹ್ಸಿನ್ ನಖ್ವಿಗೆ ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ಹುದ್ದೆಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅತ್ತ ಐಸಿಸಿ ಕೂಡ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹುದ್ದೆಯನ್ನು ಸಹ ತ್ಯಜಿಸಬೇಕಾಗಿ ಬರಬಹುದು.

ಎಕ್ಸ್​ ಖಾತೆ ಬ್ಯಾನ್:

ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಎಕ್ಸ್​ ಖಾತೆಯನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ. ಏಷ್ಯಾಕಪ್ ಮುಕ್ತಾಯದ ಬೆನ್ನಲ್ಲೇ ನಖ್ವಿ ಖಾತೆಯನ್ನು ಭಾರತದಲ್ಲಿ ತಡೆ ಹಿಡಿಯಲಾಗಿರುವುದು ವಿಶೇಷ. ಹೀಗಾಗಿ ಮುಂಬರುವ ದಿನಗಳಲ್ಲಿ ಎಸಿಸಿ ಮುಖ್ಯಸ್ಥ ಸ್ಥಾನದಲ್ಲಿ ನಖ್ವಿ ಅವರು ಮುಂದುವರೆಯುವುದನ್ನು ಬಿಸಿಸಿಐ ವಿರೋಧಿಸುವುದು ಖಚಿತ ಎಂದೇ ಹೇಳಬಹುದು.

Published On - 2:24 pm, Mon, 29 September 25

Follow Us