ಏಷ್ಯಾಕಪ್ನ ಸಂಪೂರ್ಣ ದುಡ್ಡು ನೀಡುತ್ತೇನೆ: ಸೂರ್ಯಕುಮಾರ್ ಯಾದವ್ ಘೋಷಣೆ
Asia Cup 2025 Final India vs Pakistan: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಬಿಸಿಸಿಐ ಭಾರತ ತಂಡಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸೂರ್ಯಕುಮಾರ್ ಯಾದವ್ ಇದೀಗ ಮಹತ್ವ ಘೋಷಣೆ ಮಾಡಿದ್ದಾರೆ. ಅದು ಸಹ ತನ್ನ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ಶುಲ್ಕವನ್ನು ಭಾರತೀಯ ಸೇನೆಗೆ ಹಾಗೂ ಪಹಲ್ಗಾಮ್ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ದೇಣಿಗೆ ನೀಡುವುದಾಗಿ ತಿಳಿಸುವ ಮೂಲಕ ಎಂಬುದು ವಿಶೇಷ.
ಟೀಮ್ ಇಂಡಿಯಾ ಏಷ್ಯಾಕಪ್ ಟ್ರೋಫಿ ಗೆದ್ದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೂರ್ಯಕುಮಾರ್ ಯಾದವ್, ಏಷ್ಯಾಕಪ್ ಟೂರ್ನಿಯ ತನ್ನೆಲ್ಲಾ ಪಂದ್ಯದ ಶುಲ್ಕಗಳನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ನೀಡಲು ನಿರ್ಧರಿಸಿದ್ದೇನೆ. ಈ ಮೂಲಕ ಅವರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದಾರೆ.
ಅದರಂತೆ ಏಷ್ಯಾಕಪ್ ಮೂಲಕ ಗಳಿಸಿರುವ 28 ಲಕ್ಷ ರೂ. ಅನ್ನು ಸೂರ್ಯಕುಮಾರ್ ಯಾದವ್ ಭಾರತೀಯ ಸಶಸ್ತ್ರ ಪಡೆಗೆ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಹಂಚಲಿದ್ದಾರೆ. ಇದೀಗ ಟೀಮ್ ಇಂಡಿಯಾ ನಾಯಕನ ಈ ನಿರ್ಧಾರಕ್ಕೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಟೀಮ್ ಇಂಡಿಯಾಗೆ 21 ಕೋಟಿ ರೂ.
ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಏಷ್ಯಾಕಪ್ ಗೆದ್ದಿರುವ ಭಾರತ ತಂಡಕ್ಕೆ ಬಿಸಿಸಿಐ 21 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ. ಈ ಮೊತ್ತವನ್ನು ಭಾರತ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗದವರು ಹಂಚಿಕೊಳ್ಳಲಿದ್ದಾರೆ.
ಈ ಮೊತ್ತದ ಘೋಷಣೆಗೂ ಮುನ್ನ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಪ್ರತಿ ಪಂದ್ಯದ 4 ಲಕ್ಷ ರೂ. ಸಂಭಾವನೆಯನ್ನು ಭಾರತೀಯ ಸೇನೆಗೆ ಹಾಗೂ ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಹಂಚುವುದಾಗಿ ಘೋಷಿಸುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.
ಫೈನಲ್ನಲ್ಲಿ ಭಾರತದ ಪವರ್:
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ.
ಇದನ್ನೂ ಓದಿ: ಹಾರಿಸ್ ರೌಫ್ ಪಾಕಿಸ್ತಾನ್ ತಂಡದ ರನ್ ಮಷಿನ್: ಪಾಕ್ ಕ್ರಿಕೆಟಿಗನಿಂದಲೇ ಟೀಕೆ
ಈ ಗೆಲುವಿನೊಂದಿಗೆ ಭಾರತ ತಂಡವು 9ನೇ ಬಾರಿ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಪಾಕಿಸ್ತಾನ್ ತಂಡವನ್ನು ಏಷ್ಯಾಕಪ್ ಫೈನಲ್ನಲ್ಲಿ ಸೋಲಿಸಿ ಹೊಸ ಇತಿಹಾಸವನ್ನು ನಿರ್ಮಿಸಿದೆ.
