India vs Afghanistan: ದೀಪಾವಳಿಗೆ ಕೊಹ್ಲಿ ಪಡೆಯಿಂದ ಗೆಲುವಿನ ಉಡುಗೊರೆ: ಸೆಮೀಸ್ಗೇರಲು ಭಾರತ ಇನ್ನೇನು ಮಾಡಬೇಕು?
Rohit Sharma and KL Rahul: ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಮತ್ತೆ ಟಾಸ್ ಸೋತಿತು. ಆದರೆ, ಅಫ್ಘಾನ್ ನಾಯಕನ ನಿರ್ಧಾರವನ್ನು ತಲೆಕೆಳಗಾಗಿಸಿದ್ದು ಕೆಎಲ್ ರಾಹುಲ್, ರೋಹಿತ್ ಶರ್ಮಾ ಜೋಡಿ.
ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಟಿ20 ವಿಶ್ವಕಪ್ನ (T20 World Cup) 33ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಭಾರತ ತಂಡ ಅಫ್ಘಾನಿಸ್ತಾನ (India vs Afghanistan) ವಿರುದ್ಧ 66 ರನ್ಗಳ ಭರ್ಜರಿ ಜಯ ಸಾಧಿಸಿತು. ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ಕೆ. ಎಲ್ ರಾಹುಲ್ (K L Rahul) ಅಫ್ಘಾನ್ ಬೌಲರ್ಗಳನ್ನು ಬೆಂಡೆತ್ತಿದರೆ, ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ತನ್ನ ಸೆಮಿ ಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿದೆ. ಈ ಮೂಲಕ ಅಭಿಮಾನಿಗಳಿಗೆ ಕೊಹ್ಲಿ ಪಡೆ ನಿರಾಸೆ ಮೂಡಿಸದೆ ದೀಪಾವಳಿಗೆ ಬೊಂಬಾಟ್ ಉಡುಗೊರೆ (Deepavali Gift) ನೀಡಿದೆ. ಭಾರತ (India) ತಂಡಕ್ಕೆ ಉಳಿದಿರುವುದು ಇನ್ನು ಎರಡು ಪಂದ್ಯ ಮಾತ್ರ. ಹಾಗಾದ್ರೆ ಸೆಮೀಸ್ ತಲುಪಬೇಕಾದರೆ ಏನೆಲ್ಲಾ ಮಾಡಬೇಕು ಎಂಬುದರ ಲೆಕ್ಕಚಾರ ಇಲ್ಲಿದೆ ನೋಡಿ.
ಅಫ್ಘಾನ್ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಮತ್ತೆ ಟಾಸ್ ಸೋತಿತು. ಆದರೆ, ಅಫ್ಘಾನ್ ನಾಯಕನ ನಿರ್ಧಾರವನ್ನು ತಲೆಕೆಳಗಾಗಿಸಿದ್ದು ರಾಹುಲ್-ರೋಹಿತ್ ಜೋಡಿ. ಮನಬಂದಂತೆ ಬ್ಯಾಟ್ ಬೀಸಿದ ಇವರಿಬ್ಬರು ಮೊದಲ ವಿಕೆಟಿಗೆ 14.4 ಓವರ್‌ಗಳಲ್ಲಿ 140 ರನ್ ಪೇರಿಸಿದರು. ಇದು ಟಿ20 ಪಂದ್ಯಗಳಲ್ಲಿ ಭಾರತದ ಮೊದಲ ವಿಕೆಟಿಗೆ ದಾಖಲಾದ ಅತ್ಯಧಿಕ ಮೊತ್ತ. ಇಂಗ್ಲೆಂಡ್ ಎದುರಿನ 2007ರ ಡರ್ಬನ್ ಪಂದ್ಯದಲ್ಲಿ ಸೆಹ್ವಾಗ್-ಗಂಭೀರ್ 136 ರನ್ ಪೇರಿಸಿದ ದಾಖಲೆ ಪತನಗೊಂಡಿತು.
47 ಎಸೆತಗಳಿಂದ 74 ರನ್ ಬಾರಿಸಿದ ರೋಹಿತ್, ನಬಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಸ್ಫೋಟಕ ಬ್ಯಾಟಿಂಗ್ ವೇಳೆ 8 ಫೋರ್, 3 ಸಿಕ್ಸರ್ ಸಿಡಿಯಲ್ಪಟ್ಟಿತು. ರಾಹುಲ್ 49 ಎಸೆತಗಳಿಂದ 69 ರನ್ ಕಾಣಿಕೆ ಸಲ್ಲಿಸಿದರು (6 ಬೌಂಡರಿ, 2 ಸಿಕ್ಸರ್). ಕೊನೆಯ ಹಂತದಲ್ಲಿ ನಡೆದಿದ್ದು ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಸ್ಫೋಟಕ ಆಟ. ಇಬ್ಬರೂ ಆರಂಭಿಕರು ಔಟಾದ ಬಳಿಕ ವಿರಾಟ್ ಕೊಹ್ಲಿಗಿಂತ ಮೊದಲು ಬಂದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಸಿಡಿಲಬ್ಬರದ ಬ್ಯಾಟಿಂಗ್ ಆಡಿ ಭಾರತದ ಸ್ಕೋರು 210 ರನ್ ಗಡಿ ಮುಟ್ಟಿಸಿದರು.
ಪಾಂಡ್ಯ, ಪಂತ್ ತಲಾ 13 ಎಸೆತ ಎದುರಿಸಿದರು. ಪಾಂಡ್ಯ 35 (4 ಬೌಂಡರಿ, 2 ಸಿಕ್ಸರ್), ಪಂತ್ 27 ರನ್ (1 ಬೌಂಡರಿ, 3 ಸಿಕ್ಸರ್) ಹೊಡೆದರು. ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 210 ರನ್ ಚಚ್ಚಿತು. ಈ ವಿಶ್ವಕಪ್ನಲ್ಲಿ ಯಾವುದೇ ತಂಡ ಗಳಿಸಿದ ಗರಿಷ್ಠ ಸ್ಕೋರ್ ಇದಾಗಿದೆ.
ಭಾರತದ ದಾಖಲೆಯ 210 ರನ್ ಮೊತ್ತವನ್ನು ಚೇಸ್ ಮಾಡಲಾಗದೇ ಅಫ್ಘಾನಿಸ್ತಾನ ಹೆಚ್ಚು ಪ್ರತಿರೋಧ ಇಲ್ಲದೇ ಸೋಲಪ್ಪಿತು. ಮೊಹಮ್ಮದ್ ನಬಿ ಮತ್ತು ಕರೀಮ್ ಜನತ್ ಕೊನೆಕೊನೆಯಲ್ಲಿ ಒಂದಷ್ಟು ಸ್ಫೋಟಕ ಆಟವಾಡಿದರಾದರೂ ಸವಾಲು ಬೃಹತ್ ಆಗಿದ್ದರಿಂದ ಗೆಲುವಿನ ಸನಿಹಕ್ಕೆ ಬರಲಾಗಲಿಲ್ಲ. 4 ವರ್ಷಗಳ ಬಳಿಕ ಟಿ20 ಆಡಿದ ಆರ್. ಅಶ್ವಿನ್ ಅಮೋಘ ಯಶಸ್ಸು ಸಾಧಿಸಿದರು. 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿದ ಅವರು 2 ವಿಕೆಟ್ ಉರುಳಿಸಿದರು. ಶಮಿ 32ಕ್ಕೆ 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
ಭಾರತಕ್ಕೆ ಇನ್ನು ಎರಡು ಪಂದ್ಯಗಳು ಉಳಿದಿವೆ. ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧ. ಭಾರತ ಈ ಪಂದ್ಯದಲ್ಲಿ ಕೂಡ ದೊಡ್ಡ ಅಂದಾಜಿನಲ್ಲಿ ಗೆಲುವು ಕಾಣಬೇಕು. ಆಗ ಪಾತಾಳದಲ್ಲಿರುವ ಕೊಹ್ಲಿ ಪಡೆಯ ನೆಟ್ರನ್ರೇಟ್ ಮೇಲೇರಲು ಸಾಧ್ಯ. ಇದರ ಜೊತೆಗೆ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ನ್ಯೂಜಿಲೆಂಡ್‌ಗೆ ಆಘಾತ ನೀಡಿದರೆ, ಭಾರತಕ್ಕೆ ಸೆಮೀಸ್ ಆಸೆ ವೃದ್ಧಿಸಲಿದೆ. ಆಗ ರನ್‌ರೇಟ್ ಲೆಕ್ಕಾಚಾರದಲ್ಲಿ ಭಾರತ ಉಪಾಂತ್ಯಕ್ಕೇರಬಹುದಾಗಿದೆ.
T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Rohit Sharma and KL Rahul shine against Afghanistan and ind won by 66 runs keep their chances to reach semi-final)
Published On - 7:18 am, Thu, 4 November 21