ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ ನೀಡಿರದ ಅತ್ಯಂತ ಕಳಪೆ ಆಟವನ್ನು ಈ ಬಾರಿ ಆಡಿದೆ. ಐಪಿಎಲ್ 2022ರ (IPL 2022) ಐದು ಪಂದ್ಯಗಳ ಪೈಕಿ ಐದರಲ್ಲೂ ಸೋಲು ಕಂಡಿರುವ ರೋಹಿತ್ ಪಡೆ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಮುಂಬೈ ಇಂಡಿಯನ್ಸ್ (MI vs PBKS) 12 ರನ್‌ಗಳಿಂದ ಶರಣಾಯಿತು. ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಕಾದಾಟದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್‌ಗೆ ಇಳಿದ ಪಂಜಾಬ್‌ಗೆ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ (70 ರನ್, 50 ಎಸೆತ, 5 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಮಯಾಂಕ್ ಅಗರ್ವಾಲ್ ಜೋಡಿ ಮೊದಲ ವಿಕೆಟ್‌ಗೆ 97 ರನ್ ಸೇರಿಸಿದ ಕಾರಣ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗೆ 198 ರನ್ ಪೇರಿಸಿತು. ಮುಂಬೈ 9 ವಿಕೆಟ್‌ಗೆ 186 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಎಂಐ ನಾಯಕ ರೋಹಿತ್ ಶರ್ಮಾ (Rohit Sharma) ಏನು ಹೇಳಿದರು ಕೇಳಿ.
“ನಮ್ಮ ಬಗ್ಗೆ ನೆಗಟಿವ್ ವಿಚಾರವನ್ನು ಕಂಡು ಹಿಡಿಯುವುದು ದೊಡ್ಡ ವಿಚಾರವೇನಲ್ಲ. ಆದರೆ, ಇಂದು ನಾವು ಉತ್ತಮ ಆಟ ಆಡಿದ್ದೇವೆ. ಪಂದ್ಯದ ಅಂತಿಮ ಹಂತದ ವರೆಗೂ ನಾವು ತಲುಪಿದ್ದೇವೆ. ಒಂದೆರಡು ರನೌಟ್ ನಮಗೆ ಸಹಾಯ ಮಾಡಲಿಲ್ಲ. ಒಂದು ಹಂತದಲ್ಲಿ ನಾವು ಉತ್ತಮ ಆಟ ಆಡುತ್ತಿದ್ದೆವು. ಕೊನೆಯ ವರೆಗೂ ಅದನ್ನು ಕಾಪಾಡಿಕೊಳ್ಳಲು ಆಗಲಿಲ್ಲ. ಈ ಕ್ರೆಡಿಟ್ ಪಂಜಾಬ್ ಕಿಂಗ್ಸ್ ಬೌಲರ್ಗಳಿಗೆ ಸಲ್ಲಬೇಕು. ದ್ವಿತೀಯಾರ್ಧದಲ್ಲಿ ಅವರು ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ನಾವು ಹೊಸ ಯೋಜನೆಯೊಂದಿಗೆ ಆಡಲು ಪ್ರಯತ್ನಿಸಿದೆವು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ,” ಎಂದು ಹೇಳಿದ್ದಾರೆ.
“ನಾವು ಉತ್ತಮ ಕ್ರಿಕೆಟ್ ಅನ್ನು ಆಡಲಿಲ್ಲ. ನಾವು ಕೆಲವು ಸಂದರ್ಭವನ್ನು ಪಂದ್ಯವನ್ನ ಇನ್ನಷ್ಟು ಚೆನ್ನಾಗಿ ಅರ್ಥಹಿಸಬೇಕಿದೆ. ನಂತರ ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಯೋಚಿಸಬೇಕಿದೆ. ಪಂಜಾಬ್ ತಂಡ ಬ್ಯಾಟಿಂಗ್‌ಗೆ ಇಳಿದು ನಮ್ಮ ಬೌಲರ್ಗಳ ಮೇಲೆ ಒತ್ತಡ ಹೇರಿದರು. ಪಿಚ್ ಬ್ಯಾಟಿಂಗ್‌ಗೆ ತುಂಬಾನೆ ಚೆನ್ನಾಗಿತ್ತು. 198 ರನ್ ಇಲ್ಲಿ ಚೇಸ್ ಮಾಡಬಹುದೆಂದು ನಾನು ಅಂದುಕೊಂಡಿದ್ದೆ. ಈಗಾಗಲೇ ಹೇಳಿರುವಂತೆ ಈ ಸೋಲಿನ ಬಗ್ಗೆ ಚರ್ಚಿಸಿ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಕಮ್ಬ್ಯಾಕ್ ಮಾಡುತ್ತೇವೆ,” ಎಂಬುದು ರೋಹಿತ್ ಮಾತು.
ಗೆದ್ದ ತಂಡದ ನಾಯಕ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಮಯಾಂಕ್ ಅಗರ್ವಾಕ್ ಮಾತನಾಡಿ, “ಗೆಲುವಿಗಾಗಿ ತಂಡಕ್ಕೆ ಸಹಾಯ ಮಾಡಿದ್ದು ಖುಷಿ ತಂದಿದೆ. ನಮ್ಮ ಕೈಯಲ್ಲಿ ರನ್ ಇತ್ತು ನಿಜ. ಆದರೆ, ಈ ಪಂದ್ಯ ಸಾಕಷ್ಟು ಒತ್ತಡದಿಂದ ಕೂಡಿತ್ತು. ಯಾವಾಗ ಪಂದ್ಯ 50-50 ಆಗಿರುತ್ತದೊ ಅದರಲ್ಲಿ ನಾವು ಗೆದ್ದಾಗ ಸಂತಸವಾಗುತ್ತದೆ. ನಾವು ಅಗ್ರೆಸಿವ್ನಿಂದ ಆಡಿದೆವು. ಉತ್ತಮ ಮೈಂಡ್ಸೆಟ್ನೊಂದಿಗೆ ಕಣಕ್ಕಿಳಿದೆವು. ಕಳೆದ ಪಂದ್ಯದಲ್ಲಿ ನಾವು ಗುಜರಾತ್ ವಿರುದ್ಧ ಅನಗತ್ಯವಾಗಿ ರಶೀದ್ಗೆ ವಿಕೆಟ್ ಒಪ್ಪಿಸಿದೆವು. ಈ ಬಾರಿ ಆರೀತಿ ಮಾಡಬಾರದೆಂಬ ಪ್ಲಾನ್ನಲ್ಲಿದ್ದೆವು. ಪ್ರಮುಖ ಬೌಲರ್ಗಳ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಳ್ಳಬಾರದೆಂದು ಅಂದುಕೊಂಡಿದ್ದೆವು. ರಾಹುಲ್ ಅನ್ನು ಬ್ರೆವಿಸ್ ಟಾರ್ಗೆಟ್ ಮಾಡಿದರು. ಆದರೆ, ನಂತರ ಚಹರ್ ಉತ್ತಮ ಕಮ್ಬ್ಯಾಕ್ ಮಾಡಿದರು. ಅವರು ಮುಂದಿನ ಮೂರು ಓವರ್ಗಳನ್ನು ಕಠಿಣವಾಗಿ ಹಾಕಿದರು. ತಿಲಕ್ ಮತ್ತು ಬ್ರೆವಿಸ್ ಆಟವಾಡುತ್ತಿದ್ದಾಗ ನಾವು ಗೇಮ್ ಪ್ಲಾನ್ನಲ್ಲಿ ಬದಲಾವಣೆ ಮಾಡಿದೆವು. ಮೈನ್ ಬೌಲರ್ಗೆ ಬೌಲಿಂಗ್ ಮಾಡಲು ನೀಡಿದೆ. ಅದು ಚೆನ್ನಾಗಿ ಕೆಲಸ ಮಾಡಿತು,” ಎಂದು ಮಯಾಂಕ್ ಹೇಳಿದ್ದಾರೆ.
RR vs GT, IPL 2022: ಐಪಿಎಲ್ನಲ್ಲಿಂದು ಹಾರ್ದಿಕ್ ಪಡೆಗೆ ರಾಜಸ್ಥಾನ್ ರಾಯಲ್ಸ್ ಸವಾಲು
Dewald Brevis: 4,6,6,6,6: ಒಂದೇ ಓವರ್ನಲ್ಲಿ ಬರೋಬ್ಬರಿ 29 ರನ್ ಚಚ್ಚಿದ ಜೂನಿಯನ್ ಎಬಿಡಿ: ವಿಡಿಯೋ