MI vs PBKS: ಬ್ರೆವಿಸ್ 4 ಸಿಕ್ಸ್ ಸಿಡಿಸಿದ ನಂತರ ಮೈದಾನದಲ್ಲಿ ನಡೆಯಿತು ಅಚ್ಚರಿ ಘಟನೆ: ನೀವೇ ನೋಡಿ

Dewald Brevis: ಡೆವಾಲ್ಡ್ ಬ್ರೆವಿಸ್ ಈ ರೀತಿ ಆರ್ಭಟಿಸಿದ ನಂತರ ಮೈದಾನದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಈ ಸ್ಫೋಟಕ ಆಟದ ಬಳಿಕ ಮುಂಬೈ ಇಂಡಿಯನ್ಸ್ ಟೈಮ್​​ಔಟ್ ತೆಗೆದುಕೊಂಡಿತು. ಈ ಸಂದರ್ಭ ಏನಾಯಿತು ನೋಡಿ.

MI vs PBKS: ಬ್ರೆವಿಸ್ 4 ಸಿಕ್ಸ್ ಸಿಡಿಸಿದ ನಂತರ ಮೈದಾನದಲ್ಲಿ ನಡೆಯಿತು ಅಚ್ಚರಿ ಘಟನೆ: ನೀವೇ ನೋಡಿ
Rohit Sharma Sachin and Dewald Brevis
Follow us
TV9 Web
| Updated By: Vinay Bhat

Updated on: Apr 14, 2022 | 11:47 AM

ಐಪಿಎಲ್ 2022 (IPL 2022) ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡದ ಹೀನಾಯ ಪ್ರದರ್ಶನ ಮುಂದುವರಿದಿದೆ. ಬುಧವಾರ ನಡೆದ ಪಂಜಾಬ್ ಕಿಂಗ್ಸ್ (MI vs PBKS)​ ವಿರುದ್ಧದ ತನ್ನ ಐದನೇ ಪಂದ್ಯದಲ್ಲೂ 12 ರನ್‌ಗಳ ಸೋಲುಂಡು ಅಂಕಪಟ್ಟಿಯ ಪಾತಾಳದಲ್ಲೇ ಉಳಿಯುವಂತಾಗಿದೆ. ಗೆಲ್ಲಲು 199 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡ ಒಂದು ಹಂತದಲ್ಲಿ ಜಯ ದಕ್ಕಿಸಿಕೊಳ್ಳುತ್ತದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ನಿರ್ಣಾಯಕ ಘಟ್ಟಗಳಲ್ಲಿ ಮಾಡಿದ ಕೆಲವು ತಪ್ಪುಗಳಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 186 ರನ್‌ ಮಾತ್ರವೇ ಗಳಿಸಲು ಶಕ್ತವಾಗಿ ಸೋಲುಂಡಿತು. ಈಗಾಗಲೇ ಹೇಳಿರುವಂತೆ ಮುಂಬೈ ಒಂದು ಹಂತದಲ್ಲಿ ಸುಲಭ ಗೆಲುವು ಸಾಧಿಸುತ್ತೆ ಎಂದೇ ನಂಬಲಾಗಿತ್ತು. ಅಷ್ಟರ ಮಟ್ಟಿಗೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಜೂನಿಯರ್ ಎಬಿಡಿ, ಬೇಬಿ ಎಬಿಡಿ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ (Dewald Brevis).

ಹೌದು, ಪಂಜಾಬ್ ನೀಡಿದ್ದ 199 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಹೊರಟ ಮುಂಬೈ ಇಂಡಿಯನ್ಸ್ ಪರ ಆರಂಭದ ಎರಡು ವಿಕೆಟ್ ಪತನದ ಬಳಿಕ ಡೆವಾಲ್ಡ್ ಬ್ರೆವಿಸ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದರು. ಇವರು ಕೇವಲ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಅಮೋಘ ಸಿಕ್ಸ್ ಸಿಡಿಸಿ 49 ರನ್ ಚಚ್ಚಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅದರಲ್ಲೂ ರಾಹುಲ್ ಚಹರ್ ಅವರ ಒಂದು ಓವರ್​ನಲ್ಲಿ ಬರೋಬ್ಬರಿ 29 ರನ್ ಸಿಡಿಸಿ ಆರ್ಭಟಿಸಿದರು. 9ನೇ ಓವರ್​​ನ​ ರಾಹುಲ್ ಚಹರ್ ಮೊದಲ ಎಸೆತದಲ್ಲಿ ತಿಲಕ್ ವರ್ಮಾ ಸಿಂಗಲ್ ರನ್ ಕಲೆಹಾಕಿದರು. ಎರಡನೇ ಎಸೆತದಲ್ಲಿ ಬ್ರೆವಿಸ್ ಚೆಂಡನ್ನು ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ ಸಿಕ್ಸ್, ನಾಲ್ಕನೇ ಎಸೆತದಲ್ಲಿ ವೈಡ್ ಲಾಂಗ್​ಆನ್​ನಲ್ಲಿ ಸಿಕ್ಸ್, ಐದನೇ ಎಸೆತದಲ್ಲೂ ಸಿಕ್ಸ್ ಮತ್ತು ಕೊನೆಯ ಆರನೇ ಎಸೆತದಲ್ಲಿ ಕೂಡ ಲಾಂಗ್ ಆನ್​ನಲ್ಲಿ ಸಿಕ್ಸ್ ಸಿಡಿಸಿ ಒಂದೇ ಓವರ್​​ನಲ್ಲಿ 28 ರನ್ ಚಚ್ಚಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಡೆವಾಲ್ಡ್ ಬ್ರೆವಿಸ್ ಈ ರೀತಿ ಆರ್ಭಟಿಸಿದ ನಂತರ ಮೈದಾನದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಈ ಸ್ಫೋಟಕ ಆಟದ ಬಳಿಕ ಮುಂಬೈ ಇಂಡಿಯನ್ಸ್ ಟೈಮ್​​ಔಟ್ ತೆಗೆದುಕೊಂಡಿತು. ಈ ಸಂದರ್ಭ ಮೈದಾನಕ್ಕೆ ನಾಯಕ ರೋಹಿತ್ ಶರ್ಮಾ, ಮಹೇಲ ಜಯವರ್ಧನೆ ಹಾಗೂ ಸಚಿನ್ ತೆಂಡೂಲ್ಕರ್ ಕಾಲಿಟ್ಟಿದ್ದಾರೆ. ಬ್ರೆವಿಸ್ ಜೊತೆ ವಿಶೇಷವಾಗಿ ಮಾತುಕತೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಮೊದಲು ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಮತ್ತು ಶಿಖರ್ ಧವನ್ 97 ರನ್‌ಗಳ ಅಮೂಲ್ಯ ಜತೆಯಾಟವಾಡಿದರು. ಅಗರ್ವಾಲ್ 52 ರನ್ ಗಳಿಸಿ ಔಟ್ ಆದರೆ, ಧವನ್ 70 ರನ್ ಗಳಿಸಿ ಅಬ್ಬರಿಸಿದರು. ಜಿತೇಶ್ ಶರ್ಮಾ 15 ಎಸೆತಗಳಲ್ಲಿ ಅಜೇಯ 30 ರನ್ ಬಾರಿಸಿದರು. ಹೀಗೆ ಪಂಜಾಬ್ ಮೊದಲ ವಿಕೆಟ್ ಕಳೆದುಕೊಂಡ ನಂತರ ರನ್ ಗಳಿಸುವ ವೇಗ ಕಳೆದುಕೊಂಡು 198 ರನ್ ಮಾತ್ರ ಕಲೆಹಾಕುವಲ್ಲಿ ಶಕ್ತವಾಯಿತು. ಪಂಜಾಬ್‌ ನೀಡಿದ 199 ರನ್‌ಗಳ ಸವಾಲು ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ಪರ ಡೆವಾಲ್ಡ್‌ ಬ್ರೆವಿಸ್‌ 49 ರನ್‌(25 ಬಾಲ್‌, 4 ಬೌಂಡರಿ, 5 ಸಿಕ್ಸ್‌) ಹಾಗೂ ಸೂರ್ಯಕುಮಾರ್‌ ಯಾದವ್‌ 43 ರನ್‌(30 ಬಾಲ್‌, 1 ಬೌಂಡರಿ, 4 ಸಿಕ್ಸ್‌) ಅಬ್ಬರದ ಆಟವಾಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.