ಫೈನಲ್​ನಲ್ಲಿ ಆಡ್ತಾರೆ ಬಿಡಿ: ವಿರಾಟ್ ಕೊಹ್ಲಿಗೆ ಬೆಂಬಲ ಸೂಚಿಸಿದ ರೋಹಿತ್

|

Updated on: Jun 28, 2024 | 8:01 AM

T20 World Cup 2024: ಈ ಬಾರಿಯ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ 7 ಇನಿಂಗ್ಸ್​ಗಳಿಂದ ಕಲೆಹಾಕಿರುವುದು ಕೇವಲ 75 ರನ್​ಗಳು ಮಾತ್ರ. ಇತ್ತ ಕೊಹ್ಲಿ ಓಪನರ್ ಆಗಿ ಆಡುತ್ತಿರುವ ಕಾರಣ ಅತ್ತ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬೆಂಚ್ ಕಾಯುತ್ತಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿಯ ಆಟಕ್ಕೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೆಂಬಲ ಸೂಚಿಸಿದ್ದಾರೆ.

ಫೈನಲ್​ನಲ್ಲಿ ಆಡ್ತಾರೆ ಬಿಡಿ: ವಿರಾಟ್ ಕೊಹ್ಲಿಗೆ ಬೆಂಬಲ ಸೂಚಿಸಿದ ರೋಹಿತ್
Virat Kohli - Rohit Sharma
Follow us on

T20 World Cup 2024: ಟಿ20 ವಿಶ್ವಕಪ್​ನ 2ನೇ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (57) ಅರ್ಧಶತಕ ಬಾರಿಸಿದರೆ, ಸೂರ್ಯಕುಮಾರ್ ಯಾದವ್ 47 ರನ್​ಗಳ ಕೊಡುಗೆ ನೀಡಿದರು. ಈ ಭರ್ಜರಿ ಇನಿಂಗ್ಸ್​ಗಳ ನೆರವಿನಿಂದ ಭಾರತ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

172 ರನ್​ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು 16.4 ಓವರ್​ಗಳಲ್ಲಿ 103 ರನ್​ಗಳಿಗೆ ಆಲೌಟ್​ ಮಾಡುವ ಮೂಲಕ ಟೀಮ್ ಇಂಡಿಯಾ 68 ರನ್​ಗಳ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾರತ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಗೆದ್ದಿರುವುದು ಖುಷಿ ನೀಡಿದೆ. ನಮ್ಮ ಗೆಲುವಿಗೆ ಪ್ರಮುಖ ಕಾರಣ ಸಾಂಘಿಕ ಪ್ರಯತ್ನ. ಇಲ್ಲಿ ಪ್ರತಿಯೊಬ್ಬರೂ ಉತ್ತಮ ಕೊಡುಗೆ ನೀಡಿದ್ದಾರೆ. ನಾವು ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡಿದ್ದೇವೆ ಎಂಬುದು ನನ್ನ ಭಾವನೆ.

ಏಕೆಂದರೆ ಈ ಪಿಚ್​ ಸ್ವಲ್ಪ ಸವಾಲಿನದ್ದಾಗಿತ್ತು. ಇಲ್ಲಿ ಹೊಂದಿಕೊಳ್ಳುವುದು ತುಸು ಕಷ್ಟವಾಗಿತ್ತು. ನಾವು ಪರಿಸ್ಥಿತಿಗೆ ತಕ್ಕಂತೆ ಆಡಿದ್ದೇವೆ. ಬೌಲರ್‌ಗಳು ಮತ್ತು ಬ್ಯಾಟರ್‌ಗಳು ಪರಿಸ್ಥಿತಿಗೆ ಅನುಗುಣವಾಗಿ ಆಡಿದರೆ, ಫಲಿತಾಂಶ ನಮ್ಮ ಪರವಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ಈ ಪಿಚ್​ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿತ್ತು ಎಂದಿರುವ ರೋಹಿತ್ ಶರ್ಮಾ, ಒಂದು ಹಂತದಲ್ಲಿ, ನಾವು 140-150 ರನ್​ಗಳಿಸಿದರೆ ಸಾಕಿತ್ತು ಎಂದೆನಿಸುತ್ತಿತ್ತು. ನಾನು ಮತ್ತು ಸೂರ್ಯ ಉತ್ತಮ ಜೊತೆಯಾಟ ನಿಭಾಯಿಸಿದ್ದೆವು. ಆದರೆ ಆ ಬಳಿಕ ಮತ್ತಷ್ಟು ರನ್ ಬರಬೇಕು ಎಂಬುದು ನನ್ನ ಭಾವನೆಯಾಗಿತ್ತು.

ಈ ಬಗ್ಗೆ ನಾನು ಯಾವುದೇ ಬ್ಯಾಟರ್​ಗೆ ತಿಳಿಸಲಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಅವರದ್ದೇ ಆದ ಆಟ ಆಡುತ್ತಾರೆ. ಹೀಗಾಗಿ ಅವರೆಲ್ಲರೂ ಮುಕ್ತವಾಗಿ ಆಡಬೇಕೆಂದು ನಾನು ಬಯಸುತ್ತೇನೆ. ಇದಾಗ್ಯೂ 150 ರನ್​ಗಳ ಗಡಿದಾಟಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು.

ಅದರಂತೆ ನಾವು 170 ರನ್​ಗಳಿಸಿದಾಗ, ಈ ಪಿಚ್‌ನಲ್ಲಿ ಇದು ಉತ್ತಮ ಸ್ಕೋರ್ ಎಂದು ನಾನು ಭಾವಿಸಿದ್ದೆ. ಆ ಬಳಿಕ ನಮ್ಮ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಸ್ಪಿನ್ನರ್​ಗಳಾದ ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡಿದ್ದರು. ಹೀಗಾಗಿ ಈ ಗೆಲುವಿನಲ್ಲಿ ನಮ್ಮ ಸ್ಪಿನ್ನರ್​ಗಳಿಗೂ ಶ್ರೇಯಸ್ಸು ಸಲ್ಲಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಕ್ಲಾಸ್ ಪ್ಲೇಯರ್:

ಇದೇ ವೇಳೆ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ಅವರು (ಕೊಹ್ಲಿ) ಗುಣಮಟ್ಟದ ಆಟಗಾರ. ಕೊಹ್ಲಿಗೆ ಫಾರ್ಮ್ ಎಂದಿಗೂ ಸಮಸ್ಯೆಯಲ್ಲ. ನೀವು 15 ವರ್ಷಗಳ ಕಾಲ ಕ್ರಿಕೆಟ್ ಆಡಿರುವಾಗ, ಫಾರ್ಮ್ ಎಂದಿಗೂ ಸಮಸ್ಯೆಯಾಗಲ್ಲ.

ಇದನ್ನೂ ಓದಿ: South Africa: ವಿಶ್ವಕಪ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೌತ್ ಆಫ್ರಿಕಾ

ಬಹುಶಃ ವಿರಾಟ್ ಕೊಹ್ಲಿ ತಮ್ಮ ಆಟವನ್ನು ಫೈನಲ್‌ಗಾಗಿ ಉಳಿಸುತ್ತಿದ್ದಾರೆ ಎಂದು ಅಂದ್ಕೋತೀನಿ. ಹೀಗಾಗಿ ಫೈನಲ್ ಚೆನ್ನಾಗಿ ಆಡ್ತಾರೆಂಬ ವಿಶ್ವಾಸವಿದೆ. ಈ ಬಗ್ಗೆ ನಮಗೆ ಯಾವುದೇ ಚಿಂತೆಯಿಲ್ಲ ಎಂದು ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.