ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ (IND vs WI 3rd ODI) ತಂಡ ಕ್ಲೀನ್ಸ್ವೀಪ್ ಮಾಡಿದ ಸಾಧನೆ ಗೈದಿದೆ. ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಮೂರನೇ ಏಕದಿನದಲ್ಲೂ ಟೀಮ್ ಇಂಡಿಯಾ (Team India) 96 ರನ್‌ಗಳ ಅಮೋಘ ಗೆಲುವು ಕಾಣುವ ಮೂಲಕ 3-0 ಅಂತರದಿಂದ ಎದುರಾಳಿಯನ್ನು ವೈಟ್ವಾಷ್ ಮಾಡಿದೆ. ಬ್ಯಾಟಿಂಗ್ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಮಿಂಚಿದರೆ, ಬೌಲಿಂಗ್ನಲ್ಲಿ ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಕಿತ್ತು ಕೆರಿಬಿಯನ್ನರನ್ನು ಮತ್ತೊಮ್ಮೆ 200ರ ಗಡಿ ದಾಟಲು ಬಿಡದೆ ಆಲೌಟ್ ಮಾಡಿದರು. ಪರಿಪೂರ್ಣ ನಾಯಕನಾಗಿ ಚೊಚ್ಚಲ ಏಕದಿನ ಸರಣಿಯಲ್ಲೇ ಕ್ಲೀನ್ಸ್ವೀಪ್ ಸಾಧನೆ ಮಾಡಿರುವ ರೋಹಿತ್ ಶರ್ಮಾ (Rohit Sharma) ವಿಶೇಷ ದಾಖಲೆಯನ್ನೂ ಬರೆದರು. 50 ಓವರ್ಗಳ ಪಂದ್ಯದಲ್ಲಿ ಈ ಸಾಧನೆ ಗೈದ ಭಾರತದ ಎಂಟನೇ ನಾಯಕ ಹಿಟ್ಮ್ಯಾನ್ ಆಗಿದ್ದಾರೆ. ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ವೈಟ್ವಾಷ್ ಮಾಡಿದ ಮೊದಲ ನಾಯಕನಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ನಾಯಕ ರೋಹಿತ್ ಶರ್ಮಾ 13 ರನ್‌ಗಳಿಸಿದ್ದ ವೇಳೆ ಅಲ್ಜಾರಿ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಅದೇ ಓವರ್‌ನಲ್ಲಿ ಕ್ರೀಸ್‌ಗಿಳಿದಿದ್ದ ವಿರಾಟ್ ಕೊಹ್ಲಿ ತಾನು ಎದುರಿಸಿದ ಎರಡನೇ ಎಸೆತದಲ್ಲೇ ಡಕೌಟ್ ಆದರೆ ಈ ಸರಣಿಯ ಚೊಚ್ಚಲ ಪಂದ್ಯವಾಡಿದ ಶಿಖರ್ ಧವನ್ ಕೂಡ ಉತ್ತಮ ಆಟವಾಡುವಲ್ಲಿ ಎಡವಿದರು. ಕೇವಲ 10 ರನ್‌ಗೆ ಓಡಿಯನ್ ಸ್ಮಿತ್ ಗೆ ವಿಕೆಟ್ ಒಪ್ಪಿಸಿದರು. ಹೀಗೆ ಭಾರತ 50 ರನ್ಗೂ ಮುನ್ನವೇ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು.
ಆದರೆ, ನಾಲ್ಕನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಜೋಡಿ ಶತಕದ ಜೊತೆಯಾಟದ ಮೂಲಕ ಕುಸಿದಿದ್ದ ತಂಡಕ್ಕೆ ಆಧಾರವಾದರು. ಪಂತ್ 54 ಎಸೆತಗಳಲ್ಲಿ 50 ರನ್ ಕಲೆಹಾಕಿ ಹೇಡನ್ ವಾಲ್ಷ್‌ಗೆ ವಿಕೆಟ್ ಒಪ್ಪಿಸಿದರಯ. ಪಂತ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಇವರಿಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 111 ಎಸೆತಗಳಲ್ಲಿ 80 ರನ್‌ಗಳಿಸಿ ಔಟಾದರು.
ಇವರಿಬ್ಬರ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ 6 ರನ್‌ಗೆ ಇನ್ನಿಂಗ್ಸ್ ಮುಗಿಸಿದರು. ಆಲ್‌ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ 33 ರನ್ ಮತ್ತು ದೀಪಕ್ ಚಹಾರ್ 38 ರನ್‌ಗಳ ಅಮೂಲ್ಯ ಕೊಡುಗೆಯಿಂದ ಭಾರತ 250ರ ಗಡಿದಾಟಿತು. ದೀಪಕ್ ಚಹಾರ್ 38 ಎಸೆತಗಳಲ್ಲಿ 38 ರನ್ ಕಲೆಹಾಕಿದ್ದು, 4 ಬೌಂಡರಿ ಜೊತೆಗೆ ಎರಡು ಸಿಕ್ಸರ್ ಸಿಡಿಸಿದರು. ಸುಂದರ್ ಎರಡು ಬೌಂಡರಿ ಮತ್ತು ಒಂದು ಅಮೋಘ ಸಿಕ್ಸರ್ ಸಿಡಿಸಿದರು. ಭಾರತ 10 ವಿಕೆಟ್ ನಷ್ಟಕ್ಕೆ 265 ಕಲೆಹಾಕಿತು. ವಿಂಡೀಸ್ ಪರ ಜೇಸನ್ ಹೋಲ್ಡರ್ 4 ವಿಕೆಟ್ ಕಿತ್ತರೆ ಅಲ್ಜಾರಿ ಜೋಸೆಫ್ ಹಾಗೂ ಹೈಡನ್ ವಾಲ್ಷ್ ತಲಾ 2 ವಿಕೆಟ್ ಪಡೆದರು.
ಗೆಲ್ಲಲು 266 ರನ್ ಗುರಿ ಬೆನ್ನಟ್ಟಿದ್ದ ವೆಸ್ಟ್‌ಇಂಡೀಸ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ 37.1 ಓವರ್‌ಗಳಲ್ಲಿ ಕೇವಲ 169 ರನ್‌ಗೆ ಗಂಟುಮೂಟೆ ಕಟ್ಟಿತು. ವಿಂಡೀಸ್ ಪರ ಕೆಳ ಕ್ರಮಾಂಕದಲ್ಲಿ ಒಡಿಯನ್ ಸ್ಮಿತ್(36) ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಪೂರನ್ 34 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕ ಕೀರನ್ ಪೊಲಾರ್ಡ್ ಈ ಪಂದ್ಯದಿಂದಲೂ ಹೊರಗುಳಿದದ್ದು ವಿಂಡೀಸಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು. ಅಲ್ಜಾರಿ ಜೋಸೆಫ್ 29 ರನ್ ಹೊಡೆದರು. ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್, ದೀಪಕ್ ಚಹರ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕೆಡವಿದರು. ಪಂದ್ಯಶ್ರೇಷ್ಠ ಶ್ರೇಯಸ್ ಬಾಜಿಕೊಂಡರೆ, ಪ್ರಸಿದ್ಧ್ ಕೃಷ್ಣ ಸರಣಿಶ್ರೇಷ್ಠ ತಮ್ಮದಾಗಿಸಿದರು.
IPL 2022 Auction: ಪ್ರತಿ ಐಪಿಎಲ್ ಹರಾಜಿನಲ್ಲೂ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ