ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ರನ್ ಪ್ರವಾಹವೇ ಹರಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ರನ್ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಕಾಣಿಸಿಕೊಂಡಿರುವುದು.
ಇಲ್ಲಿ ವಿರಾಟ್ ಕೊಹ್ಲಿ 711 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 550 ರನ್ ಪೇರಿಸಿರುವ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ 526 ರನ್ಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 386 ರನ್ ಕಲೆಹಾಕಿರುವ ಕೆಎಲ್ ರಾಹುಲ್ 14ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಟೀಮ್ ಇಂಡಿಯಾದ ಈ ರನ್ ಸರದಾರರ ಪಟ್ಟಿಯಲ್ಲಿ ಎಲ್ಲರದ್ದೂ ಒಂದು ಲೆಕ್ಕವಾದರೆ, ಹಿಟ್ಮ್ಯಾನ್ ರೋಹಿತ್ ಶರ್ಮಾದ್ದು ಮತ್ತೊಂದು ಲೆಕ್ಕ. ಏಕೆಂದರೆ ಈ ಬಾರಿಯ ವಿಶ್ವಕಪ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ರೋಹಿತ್ ಶರ್ಮಾ 10 ಇನಿಂಗ್ಸ್ಗಳಲ್ಲಿ 1 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ 3 ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ 2 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಇತರೆ ಬ್ಯಾಟರ್ಗಳ ನಡುವೆ ರೋಹಿತ್ ಶರ್ಮಾ ಅವರು ವಿಭಿನ್ನವಾಗಿ ನಿಲ್ಲುವುದು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ಎಂಬುದು ವಿಶೇಷ.
ಏಕೆಂದರೆ ಈ ಬಾರಿಯ ವಿಶ್ವಕಪ್ನಲ್ಲಿ ಹಿಟ್ಮ್ಯಾನ್ ಕಲೆಹಾಕಿರುವ 550 ರನ್ಗಳಲ್ಲಿ 416 ರನ್ಗಳು ಬೌಂಡರಿಗಳಿಂದಲೇ ಮೂಡಿಬಂದಿವೆ.
ರೋಹಿತ್ ಶರ್ಮಾ 10 ಇನಿಂಗ್ಸ್ಗಳಲ್ಲಿ ಒಟ್ಟು 62 ಫೋರ್ಗಳನ್ನು ಹಾಗೂ 28 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಮೂಲಕವೇ 416 ರನ್ ಪೇರಿಸಿ ಅಬ್ಬರಿಸಿದ್ದಾರೆ. ಅಂದರೆ ಗಳಿಸಿದ ಒಟ್ಟು ರನ್ಗಳ ಶೇ.75 ಕ್ಕಿಂತ ಹೆಚ್ಚಿನ ರನ್ಗಳು ಬೌಂಡರಿಗಳಿಂದಲೇ ಕಲೆಹಾಕಿರುವುದು ವಿಶೇಷ.
ಇದೇ ವೇಳೆ 711 ರನ್ ಪೇರಿಸಿರುವ ವಿರಾಟ್ ಕೊಹ್ಲಿ 9 ಸಿಕ್ಸ್ ಹಾಗೂ 64 ಫೋರ್ಗಳನ್ನು ಬಾರಿಸಿದ್ದಾರೆ. ಹಾಗೆಯೇ ಶ್ರೇಯಸ್ ಅಯ್ಯರ್ 24 ಸಿಕ್ಸ್ ಹಾಗೂ 36 ಫೋರ್ಗಳನ್ನು ಸಿಡಿಸಿದ್ದಾರೆ.
ಇದನ್ನೂ ಓದಿ: Virat Kohli: ಸಚಿನ್ ಅವರ 3 ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ಇತ್ತ ಟೀಮ್ ಇಂಡಿಯಾಗೆ ಸಿಡಿಲಬ್ಬರದ ಆರಂಭ ಒದಗಿಸುವ ಮೂಲಕ ರೋಹಿತ್ ಶರ್ಮಾ ಉಳಿದ ಬ್ಯಾಟರ್ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿರುವುದು ಸ್ಪಷ್ಟ. ಇದೇ ಕಾರಣದಿಂದಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದು ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗಲಾರದು.