ರೋಹಿತ್ ಶರ್ಮಾ (Rohit sharma) ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಾಗಿನಿಂದ ಅವರ ಕ್ಯಾಪ್ಟನ್ಸಿ ಬಗೆಗಿನ ಹೊಗಳಿಕೆ ಕೇಳಿ ಬರುತ್ತಿತ್ತು. ಏಕೆಂದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಈ ಗೆಲುವಿನ ನಡುವೆ ಮರೆಯಾಗಿದ್ದು ಹಿಟ್ಮ್ಯಾನ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನ. ಹೌದು, ಕಳೆದ ಎರಡು ಟಿ20 ಸರಣಿಯಲ್ಲೂ ರೋಹಿತ್ ಶರ್ಮಾ ಅವರ ಪ್ರದರ್ಶನದಲ್ಲಿ ವಿಶೇಷವೇನಿಲ್ಲ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಕ್ರೀಸ್ ಗೆ ಬಂದ ಕೂಡಲೇ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದರು. ಇದೀಗ ಇದೇ ವಿಚಾರವನ್ನು ಮಾಜಿ ಕ್ರಿಕೆಟಿಗ ಸಾಬಾ ಕರೀಮ್ ಪ್ರಸ್ತಾಪಿಸಿದ್ದಾರೆ. ರೋಹಿತ್ ಶರ್ಮಾ ಅವರು ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು. ಏಕೆಂದರೆ ನಾಯಕತ್ವವು ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿದೆ. ಹೀಗಾಗಿ ಅವರ ಗಮನ ಬ್ಯಾಟಿಂಗ್ ಮೇಲೂ ಕೂಡ ಇರಬೇಕೆಂದು ಸಾಬಾ ಕರೀಮ್ ತಿಳಿಸಿದ್ದಾರೆ.
‘ರೋಹಿತ್ ಶರ್ಮಾ ಅವರು ಆರಂಭಿಕ ಆಟಗಾರ ಎಂಬ ಕಾರಣದಿಂದಾಗಿ ಪ್ಲೇಯಿಂಗ್ XI ನಲ್ಲಿದ್ದಾರೆ. ನಾಯಕತ್ವವು ಹೆಚ್ಚುವರಿ ಜವಾಬ್ದಾರಿಯಾಗಿದೆ. ಅವರು ಬ್ಯಾಟಿಂಗ್‌ನಿಂದ ಗಮನವನ್ನು ಬೇರೆಡೆಗೆ ತಿರುಗಿಸಬಾರದು. ನಾಯಕನಾದ ನಂತರ ಆಟಗಾರರು ತಮ್ಮ ಪ್ರಾಥಮಿಕ ವಿಷಯಗಳಲ್ಲಿ ವಿಫಲರಾಗುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಇದೆಲ್ಲಾ ಆಗಬಾರದು. ಅವರು ಮೊದಲು ಬ್ಯಾಟ್ಸ್ಮನ್ ಆಮೇಲೆ ನಾಯಕ. ಹೀಗಾಗಿ ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೇಲೆ ರೋಹಿತ್ ಶರ್ಮಾ ಹೆಚ್ಚಿನ ಗಮನ ನೀಡಬೇಕೆಂದು ಸಾಬಾ ಕರೀಮ್ ತಿಳಿಸಿದ್ದಾರೆ.
ಬ್ಯಾಟಿಂಗ್‌ನಲ್ಲಿ ಹೆಚ್ಚುವರಿಯಾಗಿ ಶ್ರಮಿಸುವಂತೆ ರೋಹಿತ್ ಶರ್ಮಾಗೆ ಇದೇ ವೇಳೆ ಸಾಬಾ ಕರೀಮ್ ಸಲಹೆ ನೀಡಿದರು. ರೋಹಿತ್ ಅವರ ನಾಯಕತ್ವ ಈಗಷ್ಟೇ ಆರಂಭವಾಗಿದ್ದು, ತಂಡಕ್ಕೆ ಅವರ ಬ್ಯಾಟಿಂಗ್ ಕೊಡುಗೆ ಎಷ್ಟು ಮುಖ್ಯ ಎಂದು ಶೀಘ್ರದಲ್ಲೇ ತಿಳಿಯಲಿದೆ. ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಕೊಡುಗೆ ಬಹಳ ಮುಖ್ಯ, ಆದ್ದರಿಂದ ಅವರು ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಸಬಾ ಕರೀಮ್ ಹೇಳಿದ್ದಾರೆ. ಆಸ್ಟ್ರೇಲಿಯದಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ ಎಷ್ಟು ಮುಖ್ಯ ಎಂದು ಕ್ರಮೇಣ ತಿಳಿಯುತ್ತದೆ. ಆಸ್ಟ್ರೇಲಿಯಾದ ಮೈದಾನಗಳು ದೊಡ್ಡದಾಗಿದ್ದು, ಎದುರಾಳಿಗಳು ಉತ್ತಮ ಗುಣಮಟ್ಟದ ಬೌಲರ್‌ಗಳನ್ನು ಹೊಂದಿರುತ್ತಾರೆ. ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ನಲ್ಲಿ ಕಠಿಣ ಪರಿಶ್ರಮ ಪಡಬೇಕಾಗಿದೆ ಎಂದು ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಕಳಪೆ ಫಾರ್ಮ್:
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ 3 ಪಂದ್ಯಗಳಲ್ಲಿ 50 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇಡೀ ಸರಣಿಯಲ್ಲಿ ಅವರು ಕೇವಲ 3 ಬೌಂಡರಿ ಮತ್ತು ಒಂದು ಸಿಕ್ಸರ್ ಮಾತ್ರ ಬಾರಿಸಿದ್ದರು. ವೆಸ್ಟ್ ಇಂಡೀಸ್ ಸರಣಿಯಲ್ಲೂ ರೋಹಿತ್ ಶರ್ಮಾ 3 ಪಂದ್ಯಗಳಲ್ಲಿ 26ರ ಸರಾಸರಿಯಲ್ಲಿ 78 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಈ ಎರಡು ಸರಣಿಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ವೈಫಲ್ಯ ಮುನ್ನೆಲೆಗೆ ಬಂದಿರಲಿಲ್ಲ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Rohit sharma needs to focus on his batting feels saba karim)