
ಚಾಂಪಿಯನ್ಸ್ ಟ್ರೋಫಿಯ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಭಾರತ ಫೈನಲ್ಗೆ ಪ್ರವೇಶಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 49.3 ಓವರ್ಗಳಲ್ಲಿ 264 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 84 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದ ಭಾರತ ತಂಡವು 4 ವಿಕೆಟ್ಗಳ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಹೊಗಳಿದ ಹಿಟ್ಮ್ಯಾನ್, ಅವರು ಹಲವು ವರ್ಷಗಳಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದ್ದಾರೆ.
ನಾವು ಬ್ಯಾಟಿಂಗ್ ಮಾಡುವಾಗ, ತುಂಬಾ ಶಾಂತವಾಗಿದ್ದೆವು. ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಕಡೆಯಿಂದ ದೊಡ್ಡ ಪಾಲುದಾರಿಕೆಯನ್ನು ಬಯಸಿದ್ದೆವು. ಇಬ್ಬರು ಅದ್ಭುತವಾಗಿ ಇನಿಂಗ್ಸ್ ಕಟ್ಟಿದರು. ತದನಂತರ, ಅಕ್ಷರ್ ಮತ್ತು ವಿರಾಟ್ ನಡುವಿನ ಸಣ್ಣ ಪಾಲುದಾರಿಕೆ ಕೂಡ ಟೀಮ್ ಇಂಡಿಯಾ ಪಾಲಿಗೆ ವರವಾಯಿತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇನ್ನು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಡುವಣ ಜೊತೆಯಾಟ ಮುಖ್ಯವಾಗಿತ್ತು. ಇದರ ನಡುವೆ ಹಾರ್ದಿಕ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್ ಬಹಳ ನಿರ್ಣಾಯಕವಾಗಿದ್ದವು. ನಾವು ನಿರೀಕ್ಷಿಸಿದ್ದಂತೆ ಎಲ್ಲವೂ ಜರುಗಿತು.
ಒಂದು ತಂಡವು ಫೈನಲ್‌ನಲ್ಲಿರುವಾಗ ಎಲ್ಲಾ ಆಟಗಾರರು ಫಾರ್ಮ್‌ನಲ್ಲಿರಬೇಕೆಂದು ಬಯಸುತ್ತೀವಿ. ಈ ಎಲ್ಲಾ ಆಟಗಾರರು ಅವಕಾಶ ಸಿಕ್ಕಾಗಲೆಲ್ಲಾ ಪ್ರಭಾವ ಬೀರಿದ್ದಾರೆ. ಇದು ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇನ್ನು ಫೈನಲ್ನಲ್ಲಿ ಯಾರನ್ನು ಎದುರಿಸುತ್ತೀರಿ ಎಂಬ ಪ್ರಶ್ನೆಗೆ, ನಾವು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಎರಡೂ ತಂಡಗಳು (ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್) ಉತ್ತಮ ತಂಡಗಳು. ಅದಕ್ಕಾಗಿಯೇ ಅವರು ಸೆಮಿಸ್‌ನಲ್ಲಿದ್ದಾರೆ. ನಾವು ಅವರ ಮೇಲೆ ಕಣ್ಣಿಡುತ್ತೇವೆ. ಇದಾಗ್ಯೂ ನಮ್ಮ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದರು.
ನಮ್ಮ ಆಟಗಾರರಿಗೆ ಬಿಡುವು ಮತ್ತು ವಿಶ್ರಾಂತಿ ನೀಡಬೇಕೆಂದು ನಾನು ಬಯಸುತ್ತೇನೆ. ಇದು ತುಂಬಾ ಹೆಚ್ಚಿನ ಒತ್ತಡದ ಪಂದ್ಯಾವಳಿ. ನೀವು ಆಟದೊಂದಿಗೆ ಭಾವನೆಗಳನ್ನು ಎದುರಿಸುತ್ತೀರಿ. ಸ್ವಲ್ಪ ಸಮಯ ಬಿಡುವು ಮತ್ತು ವಿಶ್ರಾಂತಿ ಪಡೆಯುವುದು ಯಾವಾಗಲೂ ಒಳ್ಳೆಯದು. ನಂತರ ಫೈನಲ್ ಬಗ್ಗೆ ಯೋಚಿಸುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ.
ಹೀಗಾಗಿ ಟೀಮ್ ಇಂಡಿಯಾ ಆಟಗಾರರಿಗೆ ಕೆಲ ದಿನಗಳ ಕಾಲ ವಿಶ್ರಾಂತಿ ನೀಡಲು ಬಯಸುತ್ತೇನೆ. ಆ ಬಳಿಕ ನಾವು ಏನು ಮಾಡಬೇಕೆಂದು ಯೋಚಿಸುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ
ಇನ್ನು ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಈ ಪಂದ್ಯಕ್ಕೆ ಇನ್ನೂ 4 ದಿನಗಳಿವೆ. ಹೀಗಾಗಿ ಭಾರತ ತಂಡದ ಆಟಗಾರರು 2 ದಿನ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.