ಫ್ಲೋರಿಡಾದ ಸೆಂಟ್ರಲ್ ಬೋರ್ಡ್ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಐದನೇ ಟಿ20 ಪಂದ್ಯದಲ್ಲೂ ಭಾರತ (India vs West Indies) ಅಮೋಘ ಗೆಲುವು ಕಾಣುವ ಮೂಲಕ ಪರಾಕ್ರಮ ಮೆರೆದಿದೆ. ಶ್ರೇಯಸ್ ಅಯ್ಯರ್ (Shreyas Iyer) ಆಕರ್ಷಕ ಅರ್ಧಶತಕದ ಜೊತೆ ಸ್ಪಿನ್ನರ್ಗಳ ಸಂಘಟಿತ ಪ್ರದರ್ಶನದ ಫಲದಿಂದ ಟೀಮ್ ಇಂಡಿಯಾ 88 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟಿ20 ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ. ರೋಹಿತ್ ಶರ್ಮಾ (Rohit Sharma), ರಿಷಭ್ ಪಂತ್ ಸೇರಿದಂತೆ ಪ್ರಮುಖ ಆಟಗಾರರು ವಿಶ್ರಾಂತಿ ಮೊರೆ ಹೋಗಿ ತನ್ನ ಬೆಂಚ್ ಸ್ಟ್ರೆಂತ್ ಅನ್ನು ಪರೀಕ್ಷೆಗೆ ಒಳಪಡಿಸಿದ ಭಾರತ ಎಲ್ಲ ವಿಭಾಗಗಳಲ್ಲಿ ತೇರ್ಗಡೆಯಾಯಿತು. ರೋಹಿತ್ ಶರ್ಮಾ ಬದಲು ನಾಯಕನ ಸ್ಥಾನ ಅಲಂಕರಿಸಿದ ಹಾರ್ದಿಕ್ ಪಾಂಡ್ಯ ಕೂಡ ಅದ್ಭುತವಾಗಿ ತಮಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದರು.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಟೀಮ್ ಇಂಡಿಯಾ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ಅದರಲ್ಲೂ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಹಾಗೂ ದಿನೇಶ್ ಕಾರ್ತಿಕ್ ಮೆಡಲ್ ಕಾರ್ಯಕ್ರಮಕ್ಕೆ ವಾಹನದಲ್ಲಿ ಸಂಭ್ರಮಿಸುತ್ತಾ ಆಗಮಿಸಿದರು. ನಂತರ ಭಾರತದ ಆಟಗಾರರು ಟ್ರೋಫಿ ಹಿಡಿದುಕೊಂಡು ಅದೇ ವಾಹನದಲ್ಲಿ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಇದರ ವಿಡಿಯೋವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Sharma, DK & Ashwin arrive to the medal presentation in style. Congratulations to @BCCI on the series win. #WIvIND pic.twitter.com/HDwGkImaiT
— Windies Cricket (@windiescricket) August 7, 2022
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಜಾಗದಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಓಪನರ್ಗಳಾಗಿ ಕಣಕ್ಕಿಳಿದರು. ಕಿಶನ್ 13 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಆದರೆ, ಎರಡನೇ ವಿಕೆಟ್ಗೆ ಅಯ್ಯರ್ ಹಾಗೂ ದೀಪಕ್ ಹೂಡ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 76 ರನ್ಗಳ ಕಾಣಿಕೆ ನೀಡಿತು. ಹೂಡ 25 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ನೊಂದಿಗೆ 38 ರನ್ ಬಾರಿಸಿದರು.
ನಂತರ ಸಂಜು ಸ್ಯಾಮ್ಸನ್ (15) ಜೊತೆಗೂಡಿ ಶ್ರೇಯಸ್ ಅಯ್ಯರ್ ಕೂಡ ಅರ್ಧಶತಕ ಸಿಡಿಸಿ ಔಟಾದರು. 40 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ನೊಂದಿಗೆ ಅಯ್ಯರ್ 64 ರನ್ ಚಚ್ಚಿದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಬಾರಿಸಿ 28 ರನ್ ಗಳಿಸಿದರು. ದಿನೇಶ್ ಕಾರ್ತಿಕ್ 12 ರನ್ಗಳ ಕೊಡುಗೆ ನೀಡಿದರು. ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಕಲೆಹಾಕಿತು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ವಿಂಡೀಸ್ಗೆ ಭಾರತದ ಸ್ಪಿನ್ನರ್ಗಳು ದುಸ್ವಪ್ನವಾದರು. ಶಮ್ರಾಹ್ ಬ್ರೂಕ್ಸ್ ಜೊತೆ ಇನಿಂಗ್ಸ್ ಆರಂಭಿಸಿದ ಜಾಸನ್ ಹೋಲ್ಡರ್ಗೆ(0) 3ನೇ ಎಸೆತದಲ್ಲಿಯೇ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡ್ ಆದರು. ಇದಾದ ಬಳಿಕ ಶಮ್ರಾಹ್ ಬ್ರೂಕ್ಸ್ (13), ಡೆವೋನ್ ಥಾಮಸ್ (10) ರನ್ನೂ ಅಕ್ಸರ್ ಪೆವಿಲಿಯನ್ಗೆ ಅಟ್ಟಿದರು.
ಅತ್ತ ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಶಿಮ್ರಾನ್ ಹೆಟ್ಮಾಯಿರ್ ಇನಿಂಗ್ಸ್ ಕಟ್ಟುತ್ತಿದ್ದರು. ಭರ್ಜರಿ ಬ್ಯಾಟ್ ಬೀಸಿದ ವಿಂಡೀಸ್ ದಾಂಡಿಗ 56 ರನ್ ಸಿಡಿಸಿದರು. ತಂಡವನ್ನು ಗೆಲ್ಲಿಸಲು ಹೆಟ್ಮಾಯಿರ್ಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. 54 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಬಳಿಕ 50 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಪತನವಾದವು. 5 ಬ್ಯಾಟ್ಸ್ಮನ್ಗಳು ಸೊನ್ನೆ ಸುತ್ತಿದರು. ಎಲ್ಲ ಹತ್ತು ವಿಕೆಟ್ಗಳಲ್ಲಿ ಅಕ್ಸರ್ ಪಟೇಲ್ 3, ರವಿ ಬಿಷ್ಣೋಯಿ 4, ಕುಲದೀಪ್ ಯಾದವ್ 3 ವಿಕೆಟ್ಗಳನ್ನು ಹಂಚಿಕೊಂಡರು. 15.4 ಓವರ್ನಲ್ಲಿ 100 ರನ್ಗ ವೆಸ್ಟ್ ಇಂಡೀಸ್ ಆಲೌಟ್ ಆಯಿತು.
88 ರನ್ಗಳ ಅಮೋಘ ಗೆಲುವಿನೊಂದಿಗೆ ಭಾರತ 4-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಪಂದ್ಯದ ದಿಕ್ಕನ್ನೇ ಬದಲಿಸಿದ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಇದೇ ಮೊದಲ ಬಾರಿಗೆ ಸರಣಿಯಲ್ಲಿ ಎಲ್ಲ ಪಂದ್ಯ ಆಡಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅರ್ಷದೀಪ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Published On - 9:09 am, Mon, 8 August 22