ಹೊಸ ನಾಯಕ, ಹೊಸ ಕೋಚ್ ರಣತಂತ್ರ: ಮೊದಲ ಪಂದ್ಯಕ್ಕೂ ಮುನ್ನ ರಾಹುಲ್-ರೋಹಿತ್ ಹೇಳಿದ್ದೇನು?
India vs New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ನವೆಂಬರ್ 17 ರಿಂದ ಆರಂಭವಾಗಲಿದೆ. ಮೊದಲ ಟಿ20 ಜೈಪುರದಲ್ಲಿ ನಡೆಯಲಿದ್ದು, ಎರಡನೇ ಟಿ20 ನವೆಂಬರ್ 19 ರಂದು ರಾಂಚಿಯಲ್ಲಿ ಮತ್ತು ಮೂರನೇ ಟಿ20 ನವೆಂಬರ್ 21 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ಟಿ20 ತಂಡದ ನಾಯಕನಾಗಿ ರೋಹಿತ್ ಶರ್ಮಾ ಹಾಗೂ ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನಾಳೆ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ನ್ಯೂಜಿಲೆಂಡ್ ವಿರುದ್ದ ಬುಧವಾರ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿದ್ದರು. ಇದೇ ವೇಳೆ ಹಲವು ವಿಷಯಗಳ ಬಗ್ಗೆ ಮುಕ್ತಾಯವಾಗಿ ಮಾತನಾಡಿದ್ದು, ಅದರ ಪ್ರಮುಖಾಂಶಗಳು ಇಲ್ಲಿವೆ.
ತಂಡದಲ್ಲಿ ವಿರಾಟ್ ಕೊಹ್ಲಿಯ ಅಲಭ್ಯತೆ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು? ವಿರಾಟ್ ಕೊಹ್ಲಿ ಏನೇ ಮಾಡಿದರೂ ಅವರ ಪಾತ್ರ ಒಂದೇ ಆಗಿರುತ್ತದೆ. ಏಕೆಂದರೆ ಅವರು ತಂಡದ ಅತ್ಯಂತ ಪ್ರಮುಖ ಆಟಗಾರ. ನಾವು ಆಡುವ ಆಟಗಳ ಆಧಾರದ ಮೇಲೆ, ಪಾತ್ರಗಳು ಬದಲಾಗುತ್ತಲೇ ಇರುತ್ತವೆ. ಅವರು ಮರಳಿ ಬಂದರೆ ಅದು ತಂಡವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಆಟಗಾರರಿಗೆ ವಿಶ್ರಾಂತಿ ಬಗ್ಗೆ ಟೀಮ್ ಇಂಡಿಯಾ ನಾಯಕ ಅಭಿಪ್ರಾಯ: ಕೆಲಸದ ಹೊರೆ ನಿರ್ವಹಣೆ ನಮಗೆ ಬಹಳ ಮುಖ್ಯ. ಆಟಗಾರರು ಯಂತ್ರವಲ್ಲ. ಬಿಡುವು ತೆಗೆದುಕೊಳ್ಳುವುದು ಅವಶ್ಯಕ. ಆಟಗಾರರ ರಿಫ್ರೆಶ್ ಬಹಳ ಮುಖ್ಯ. ಮುಂಬರುವ ಸವಾಲುಗಳಿಗೆ ಎಲ್ಲಾ ಆಟಗಾರರು ರಿಫ್ರೆಶ್ ಆಗಬೇಕೆಂದು ಬಯಸುತ್ತೇವೆ. ಹೀಗಾಗಿ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಹಿಟ್ಮ್ಯಾನ್ ಹೇಳಿದರು.
ವಿವಿಧ ಸ್ವರೂಪಗಳಿಗೆ ಪ್ರತ್ಯೇಕ ತಂಡದ ಬಗ್ಗೆ ಕೋಚ್ ಹೇಳಿದ್ದೇನು? ನಾವು ವಿಭಿನ್ನ ಸ್ವರೂಪಗಳಲ್ಲಿ ಪ್ರತ್ಯೇಕ ತಂಡಗಳನ್ನು ಹುಡುಕುವ ಹಂತದಲ್ಲಿಲ್ಲ. ಈ ಸಮಯದಲ್ಲಿ ನಾವು ಆಟಗಾರರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಗೌರವಿಸಬೇಕು. ಆಟಗಾರರು ರಿಫ್ರೆಶ್ ಮತ್ತು ಸ್ವಿಚ್ ಆನ್ ಆಗಬೇಕೆಂದು ನಾನು ಬಯಸುತ್ತೇನೆ. ಇದು ಸವಾಲಿನ ಸಮಯವಾಗಿದೆ. ಆದ್ದರಿಂದ ನಾನು ಆಟಗಾರರೊಂದಿಗೆ ಕೆಲಸ ಮಾಡಲು ಮತ್ತು ಅವರು ಚೆನ್ನಾಗಿ ವಿಶ್ರಾಂತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ಎಲ್ಲಾ ಫಾರ್ಮ್ಯಾಟ್‌ಗಳನ್ನು ಆಡುವ ಆಟಗಾರರು ಈಗ ಆಡದೇ ಇರಬಹುದು. ಅದು ಇತರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಾಗಲಿದೆ. ಈ ಹಂತದಲ್ಲಿ ನಾನು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರತ್ಯೇಕ ತಂಡಗಳನ್ನು ಹುಡುಕುತ್ತಿಲ್ಲ ಎಂದು ರಾಹುಲ್ ದ್ರಾವಿಡ್ ತಿಳಿಸಿದರು.
ಭಾರತ ಇತರ ತಂಡಗಳ ಟೆಂಪ್ಲೇಟ್ ಅನುಸರಿಸುವುದಿಲ್ಲ ಎಂದ ರೋಹಿತ್! ನಾವು ತುಂಬಬೇಕಾದ ಹಲವು ಪಾತ್ರಗಳಿವೆ. ಅದು ನಮಗೆ ದೊಡ್ಡ ಸವಾಲಾಗಲಿದೆ. ನಾವು ಇತರ ತಂಡಗಳ ಮಾದರಿಯನ್ನು ಅನುಸರಿಸುತ್ತೇವೆ ಎಂದು ನಾನು ಹೇಳಲು ಹೋಗುವುದಿಲ್ಲ. ನಮಗೆ ಯಾವುದು ಸೂಕ್ತವೋ ಅದನ್ನು ಮಾಡುತ್ತೇವೆ. ಸೈಯದ್ ಮುಷ್ತಾಕ್ ಅಲಿ, ಫ್ರಾಂಚೈಸಿ ಲೀಗ್ ಮತ್ತು ರಾಷ್ಟ್ರೀಯ ತಂಡದಲ್ಲಿ ಆಟಗಾರರು ವಿಭಿನ್ನ ಪಾತ್ರವನ್ನು ವಹಿಸುತ್ತಾರೆ. ಅಂತಹ ಆಟಗಾರರಿಗೆ ನಾವು ನಿರ್ದಿಷ್ಟ ಪಾತ್ರವನ್ನು ವ್ಯಾಖ್ಯಾನಿಸಬೇಕಾಗಿದೆ ಎಂದು ರೋಹಿತ್ ಶರ್ಮಾ ತಿಳಿಸಿದರು.
ಆಟಗಾರರಿಗೆ ನಿರ್ಭಯವಾಗಿ ಆಡಲು ಅವಕಾಶ ನೀಡುತ್ತೇನೆ: ರೋಹಿತ್! ಭರವಸೆಯನ್ನು ಹೊಂದಿರುವ ಆಟಗಾರರಿಗೆ ಅವಕಾಶಗಳನ್ನು ನೀಡುವುದು ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ. ಅದು ಉತ್ತಮವಾಗಿ ಮೂಡಿ ಬಂದರೆ ಸಮಸ್ಯೆ ಇಲ್ಲ. ಅಂತಹ ಆಟಗಾರರಿಗೆ ನಿರ್ಭೀತಿಯಿಂದ ಆಡಲು ಬಿಡುವಲ್ಲಿ ನಮ್ಮ ಪಾತ್ರ ಮಹತ್ವದ್ದಾಗಿದೆ. ನಾವು ಅವರಿಗೆ ಭರವಸೆ ನೀಡಬೇಕು. ಅಂತಹ ಅವಕಾಶವನ್ನು ನಾನು ನೀಡುತ್ತೇನೆ ಎಂದಿದ್ದಾರೆ ರೋಹಿತ್ ಶರ್ಮಾ.
ಟೀಮ್ ಇಂಡಿಯಾದ ಮುಂದಿನ ಪ್ಲ್ಯಾನ್? ನಾವು ಎಲ್ಲಕ್ಕೂ ಆದ್ಯತೆ ನೀಡುವುದಿಲ್ಲ. ಎಲ್ಲಾ ಮೂರು ಸ್ವರೂಪಗಳು ನಮಗೆ ಸಮಾನವಾಗಿ ಮುಖ್ಯವಾಗಿದೆ. ನಿಸ್ಸಂಶಯವಾಗಿ, ICC ಟೂರ್ನಮೆಂಟ್‌ಗಳು ಬರುತ್ತಿರುವುದರಿಂದ ನಾವು ಅದಕ್ಕಾಗಿ ತಯಾರಿ ಮಾಡಬೇಕಾಗುತ್ತದೆ. ದೂರದೃಷ್ಟಿಗೆ ಸಂಬಂಧಿಸಿದಂತೆ ನಾವು ಒಟ್ಟಾರೆ ಸುಧಾರಿಸಲು ನೋಡುತ್ತೇವೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದರು.
ಪ್ರಸ್ತುತ ತಂಡಕ್ಕೆ ಆಲ್‌ರೌಂಡರ್‌ನ ಪ್ರಾಮುಖ್ಯತೆ ಇಲ್ಲವೇ? ತಂಡವು ಕೇವಲ ಒಬ್ಬ ಅಥವಾ ಇಬ್ಬರು ವ್ಯಕ್ತಿಗಳ ಮೇಲೆ ಕಣ್ಣಿಟ್ಟಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಯಶಸ್ವಿ ತಂಡವಾಗಲು ನಮಗೆ ಏನು ಬೇಕು, ನಾವು ಅದನ್ನು ಮಾಡುತ್ತೇವೆ ಎಂದು ರೋಹಿತ್ ಶರ್ಮಾ ತಿಳಿಸಿದರು.
ಟೀಮ್ ಇಂಡಿಯಾ ಜೊತೆ ಈ ಹಿಂದೆಯೇ ಸಂಪರ್ಕದಲ್ಲಿದ್ರಾ? ಇಲ್ಲ, ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ನಿರತರಾಗಿದ್ದರಿಂದ ಅವರಿಗೆ ತೊಂದರೆ ಕೊಡಲು ಬಯಸಲಿಲ್ಲ ಎಂದು ರಾಹುಲ್ ದ್ರಾವಿಡ್ ತಿಳಿಸಿದರು.
ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವ ಬಗ್ಗೆ? ಕೆಲಸದ ಹೊರೆ ನಿರ್ವಹಣೆಯು ಒಂದು ಪ್ರಮುಖ ವಿಷಯವಾಗಿದೆ. ಫುಟ್‌ಬಾಲ್‌ನಲ್ಲಿಯೂ ಸಹ, ದೊಡ್ಡ ಆಟಗಾರರು ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲ. ಆಟಗಾರನ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವು ಮುಖ್ಯವಾಗಿರುತ್ತದೆ. ಇದು ಸಮತೋಲನದ ಕಾರ್ಯವಾಗಿದೆ. ಎಲ್ಲರೂ ಫಿಟ್ ಆಗಲು ಮತ್ತು ದೊಡ್ಡ ಪಂದ್ಯಾವಳಿಗಳಿಗೆ ಸಿದ್ಧರಾಗಲು ಕೆಲಸ ಮಾಡುತ್ತದೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ವಿವರಿಸಿದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ನವೆಂಬರ್ 17 ರಿಂದ ಆರಂಭವಾಗಲಿದೆ. ಮೊದಲ ಟಿ20 ಜೈಪುರದಲ್ಲಿ ನಡೆಯಲಿದ್ದು, ಎರಡನೇ ಟಿ20 ನವೆಂಬರ್ 19 ರಂದು ರಾಂಚಿಯಲ್ಲಿ ಮತ್ತು ಮೂರನೇ ಟಿ20 ನವೆಂಬರ್ 21 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ಟಿ20 ಸರಣಿಗಾಗಿ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: 8 ವರ್ಷದಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ: ಆತಿಥ್ಯವಹಿಸಲಿರುವ ದೇಶಗಳ ಪಟ್ಟಿ ಪ್ರಕಟ
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
(Rohit Sharma, Rahul Dravid Press Conference, Highlights)