ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ (Rohit Sharma) ಇದೀಗ ಮಾಜಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ತಂಡದ ಹೊಸ ನಾಯಕನಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೇಮಕವಾಗಿದ್ದಾರೆ. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಹಿಟ್ಮ್ಯಾನ್ ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. 2013 ರಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಾ ಬಂದಿರುವ ರೋಹಿತ್ ಶರ್ಮಾ 5 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರು. ಈ ಮೂಲಕ ಐಪಿಎಲ್ ಇತಿಹಾಸ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದರು. ಇದಾಗ್ಯೂ ಹಿಟ್ಮ್ಯಾನ್ರನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಸಲು ಕಾರಣವೇನು? ಎಂಬುದೇ ಈಗ ಯಕ್ಷ ಪ್ರಶ್ನೆ.
ಏಕೆಂದರೆ ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕರಾಗಿ ಮುಂದುವರೆದಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಸ್ವರೂಪದ ಕ್ರಿಕೆಟ್ನಿಂದಲೂ ನಿವೃತ್ತಿ ಹೊಂದಿಲ್ಲ. ಅದರಲ್ಲೂ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಮ್ಮ ಫಾರ್ಮ್ ಅನ್ನು ಕೂಡ ಖಚಿತಪಡಿಸಿದ್ದಾರೆ. ಇದಾಗ್ಯೂ ರೋಹಿತ್ ಶರ್ಮಾ ಇರುವಾಗಲೇ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಪಟ್ಟ ಕಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಇತ್ತ ಏಕಾಏಕಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಅವರ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ಮೇಲ್ನೋಟಕ್ಕೆ ಗಮನಿಸಿದರೆ ಇದು ಮುಂಬೈ ಇಂಡಿಯನ್ಸ್ ತಂಡದ ಪೂರ್ವ ನಿಯೋಜಿತ ನಡೆ ಎನ್ನಬಹುದು.
ಹೌದು, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿದಾಗಲೇ ನಾಯಕತ್ವದ ಬದಲಾವಣೆ ಬಗ್ಗೆ ಗುಸು ಗುಸು ಶುರುವಾಗಿತ್ತು. ಆದರೆ ರೋಹಿತ್ ಶರ್ಮಾ ತಂಡದಲ್ಲಿರುವಾಗ ಮುಂಬೈ ಫ್ರಾಂಚೈಸಿ ಇಂತಹದೊಂದು ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು.
ಹೀಗಾಗಿಯೇ ರೋಹಿತ್ ಶರ್ಮಾ ನಿವೃತ್ತಿ ಬಳಿಕ ಹಾರ್ದಿಕ್ ಪಾಂಡ್ಯಗೆ ಕಪ್ತಾನನ ಪಟ್ಟ ದೊರೆಯಲಿದೆ ಎನ್ನಲಾಗಿತ್ತು. ಆದರೀಗ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಸ್ಟರ್ ಪ್ಲ್ಯಾನ್ನಲ್ಲಿ ರೋಹಿತ್ ಶರ್ಮಾ ಅವರೇ ಸಿಲುಕಿದ್ದಾರೆ.
ಏಕೆಂದರೆ ಈ ಬಾರಿಯ ಐಪಿಎಲ್ ಟ್ರೇಡ್ ವಿಂಡೋ ಡಿಸೆಂಬರ್ 12 ರವರೆಗೆ ಓಪನ್ ಇತ್ತು. ಇದೇ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಡವಾಗಿ ಹೊಸ ನಾಯಕನನ್ನು ಘೋಷಿಸಿದೆ. ಅಂದರೆ ಡಿಸೆಂಬರ್ 12 ಕ್ಕೂ ಮುಂಚಿತವಾಗಿ ಮುಂಬೈ ಹೊಸ ನಾಯಕನನ್ನು ಘೋಷಿಸಿದ್ದರೆ, ಅತ್ತ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಬೇರೆ ತಂಡಗಳು ಟ್ರೇಡ್ ವಿಂಡೋ ಮೂಲಕ ಬಿಗ್ ಆಫರ್ ನೀಡುವ ಸಾಧ್ಯತೆಗಳಿದ್ದವು.
ಇದನ್ನು ಮುಂಗಡವಾಗಿ ಮನಗಂಡಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಟ್ರೆಂಡ್ ವಿಂಡೋ ಕ್ಲೋಸ್ ಆದ ಬಳಿಕ ಹಾರ್ದಿಕ್ ಪಾಂಡ್ಯರನ್ನು ಹೊಸ ನಾಯಕ ಎಂದು ಘೋಷಿಸಿದೆ. ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ರೋಹಿತ್ ಶರ್ಮಾ ಸೌತ್ ಆಫ್ರಿಕಾಗೆ ತೆರಳುವ ಸಮಯದಲ್ಲೇ ಹೊಸ ನಾಯಕನ ಹೆಸರು ಘೋಷಣೆಯಾಗಿರುವುದು.
ಅಂದರೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ರೋಹಿತ್ ಶರ್ಮಾ ಶುಕ್ರವಾರ ಪ್ರಯಾಣ ಬೆಳೆಸಿದ್ದಾರೆ. ಈ ಪ್ರಯಾಣಕ್ಕೂ ಕೆಲ ಹೊತ್ತು ಮುಂಚಿತವಾಗಿ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯರಿಗೆ ನಾಯಕತ್ವ ನೀಡಲಾಗಿದೆ ಎಂದು ಘೋಷಿಸಿದೆ.
ಇವೆಲ್ಲವನ್ನೂ ಗಮನಿಸಿದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪೂರ್ವನಿಯೋಜಿತವಾಗಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿತ್ತು ಎಂದೇ ಹೇಳಬಹುದು. ಈ ಪ್ಲ್ಯಾನ್ನಂತೆ ಇದೀಗ ಈ ವರ್ಷ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲೇ ಆಡಬೇಕಾಗಿ ಬಂದಿದೆ.
ಅದರಲ್ಲೂ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಹಿಟ್ಮ್ಯಾನ್ ಇದೀಗ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ರೋಹಿತ್ ಶರ್ಮಾ ಅವರ ಮುಂದಿನ ನಡೆಯೇನು ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?
ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಕ್ಯಾಮರೂನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್‌ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್.
Published On - 7:00 am, Sat, 16 December 23