ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದಿದ್ದು, ಆತಿಥೇಯರಿಂದ ದಿಟ್ಟ ಪ್ರದರ್ಶನ ಕಂಡುಬಂದಿದೆ. ಇದೇ ವೇಳೆ ವಿಕೆಟ್ಗಾಗಿ ಕಾಯ್ದು ಕಾಯ್ದು ಹೈರಾಣಾಗಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮಾಡಿದ ತಪ್ಪಿಗೆ ಮೈದಾನದಲ್ಲೇ ಕೋಪಗೊಂಡಿದ್ದಾರೆ. ಲೈವ್ ಪಂದ್ಯದ ವೇಳೆ ಕೋಪಗೊಂಡಿರುವ ನಾಯಕ ರೋಹಿತ್, ಜೈಸ್ವಾಲ್ ವಿರುದ್ಧ ಗರಂ ಆಗಿ ಆಡಿರುವ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ರೋಹಿತ್, ಜೈಸ್ವಾಲ್ ಅವರನ್ನು ಬೀದಿ ಕ್ರಿಕೆಟ್ ಆಡುತ್ತಿದ್ದೀಯಾ ಎಂದು ಗದರಿರುವುದನ್ನು ನಾವು ನೋಡಬಹುದಾಗಿದೆ.
ವಾಸ್ತವವಾಗಿ, ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್, ಜೈಸ್ವಾಲ್ರನ್ನು ಸಿಲ್ಲಿ ಪಾಯಿಂಟ್ ಹಾಗೂ ಸಿಲ್ಲಿ ಮಿಡ್ ಆಫ್ ನಡುವೆ ಫಿಲ್ಡಿಂಗ್ಗೆ ನಿಯೋಜಿಸಿದ್ದರು. ಆದರೆ ಈ ವೇಳೆ ಕೊಂಚ ಎಚ್ಚರ ತಪ್ಪಿದ್ದ ಜೈಸ್ವಾಲ್, ಚೆಂಡು ಅವರ ಬಳಿ ಬರುವ ಮೊದಲೇ ಮೇಲಕ್ಕೆ ಜಿಗಿದರು. ಇದನ್ನು ನೋಡಿದ ರೋಹಿತ್ ಶರ್ಮಾ ಜೈಸ್ವಾಲ್‌ಗೆ, ‘ಹೇ ಜಸ್ಸು, ನೀನು ಬೀದಿ ಕ್ರಿಕೆಟ್ ಆಡುತ್ತಿದ್ದೀಯಾ? ಬ್ಯಾಟ್ಸ್‌ಮನ್ ಆಡುವವರೆಗೆ ಮೇಲೆ ಎದ್ದೇಳಬೇಡ ಎಂದಿದ್ದಾರೆ. ರೋಹಿತ್ ಈ ರೀತಿಯಾಗಿ ಹೇಳಿರುವುದು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದ್ದು, ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
Stump Mic Gold ft. THE BEST, @ImRo45! 🎙️😂
The Indian skipper never fails to entertain when he’s near the mic! 😁#AUSvINDOnStar 👉 4th Test, Day 1 LIVE NOW pic.twitter.com/1fnc6X054a
— Star Sports (@StarSportsIndia) December 26, 2024
ವಾಸ್ತವವಾಗಿ, ಸಿಲ್ಲಿ ಪಾಯಿಂಟ್ ಹಾಗೂ ಸಿಲ್ಲಿ ಮಿಡ್ ಆಫ್ನಲ್ಲಿ ಫಿಲ್ಡಿಂಗ್ ಮಾಡುವ ಆಟಗಾರರು ತನ್ನ ಮೊಣಕಾಲಿನ ಮೇಲೆ ತನ್ನ ಕೈಯಿಟ್ಟು ಕೆಳಗೆ ಬಾಗಿ ನಿಲ್ಲುತ್ತಾರೆ. ಅಥವಾ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವುದನ್ನು ನಾವು ಕಾಣಬಹುದು. ಇದರಿಂದಾಗಿ ಚೆಂಡನ್ನು ಡಿಫೆಂಡ್ ಮಾಡುವ ಯತ್ನದಲ್ಲಿ ಬ್ಯಾಟ್ಸ್ಮನ್ಗಳು ಕ್ಯಾಚ್ ನೀಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಫಿಲ್ಡರ್ಗಳು ಈ ಭಂಗಿಯಲ್ಲಿ ನಿಲ್ಲುವುದರಿಂದ ಸುಲಭವಾಗಿ ಚೆಂಡನ್ನು ಹಿಡಿಯಬಹುದು. ಆದರೆ ಜೈಸ್ವಾಲ್, ಚೆಂಡು ಬರುವ ಮೊದಲೇ ಮೇಲಕ್ಕೆ ಎದ್ದಿದ್ದು ರೋಹಿತ್ ಕೋಪಕ್ಕೆ ಕಾರಣವಾಯಿತು.
ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ಸ್ಟೀವ್ ಸ್ಮಿತ್ 68 ರನ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ 8 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ತಂಡದ ಪರ ಸ್ಯಾಮ್ ಕಾನ್‌ಸ್ಟಾಸ್ 65 ಎಸೆತಗಳಲ್ಲಿ 60 ರನ್ ಗಳಿಸಿದರೆ, ಉಸ್ಮಾನ್ ಖವಾಜಾ 121 ಎಸೆತಗಳಲ್ಲಿ 57 ರನ್, ಮಾರ್ನಸ್ ಲಬುಶೇನ್ 145 ಎಸೆತಗಳಲ್ಲಿ 72 ಮತ್ತು ಸ್ಟೀವ್ ಸ್ಮಿತ್ ಅಜೇಯ 68 ರನ್ ಕಲೆಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ