ಐಸಿಸಿ ಟೆಸ್ಟ್ ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿ ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್ ಇದ್ದು, ತೃತೀಯ ಸ್ಥಾನದಲ್ಲಿ ಡೇರಿಲ್ ಮಿಚೆಲ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ದಾಂಡಿಗ ಸ್ಟೀವ್ ಸ್ಮಿತ್ ಈ ಬಾರಿ 4ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.
ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ಆರು ಆಟಗಾರರು ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಮೂವರು ಸ್ಥಾನ ಪಡೆದರೆ, ಬೌಲಿಂಗ್ ಶ್ರೇಯಾಂಕದಲ್ಲಿ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಯಶಸ್ವಿ ಜೈಸ್ವಾಲ್ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಈ ಬಾರಿ 7ನೇ ಸ್ಥಾನಕ್ಕೇರಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ಕಳೆದ ಫೆಬ್ರವರಿ ಬಳಿಕ ಟೀಮ್ ಇಂಡಿಯಾ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. ಇದಾಗ್ಯೂ ಐಸಿಸಿ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಹತ್ತರದಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!
ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೂವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಬೌಲರ್ಗಳ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಅಗ್ರ ಹತ್ತರಲ್ಲಿ ಕಾಣಿಸಿಕೊಳ್ಳುವಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಯಶಸ್ವಿಯಾಗಿದ್ದಾರೆ.
Published On - 8:50 am, Thu, 12 September 24