AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ನೆಲದಲ್ಲಿ ಯಾರು ಬೆಸ್ಟ್? ರೋಹಿತ್ ಮುಂದೆ ಉಳಿದವರ ಆಟ ಮಂಕು

ನ್ಯೂಜಿಲೆಂಡ್‌ನಲ್ಲಿ ಭಾರತದ ಬ್ಯಾಟಿಂಗ್ ಕುಸಿತ, ವಿದೇಶಿ ಪಿಚ್‌ಗಳಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನವನ್ನು ಎತ್ತಿ ತೋರಿಸಿದೆ. ತವರು ನೆಲದಲ್ಲಿ ಮಾತ್ರ ಮಿಂಚುವ ಭಾರತೀಯ ಬ್ಯಾಟ್ಸ್‌ಮನ್‌ಗಳು ವಿದೇಶಿ ಪಿಚ್‌ಗಳಲ್ಲಿ ಪರದಾಡುತ್ತಿದ್ದಾರೆ. ಆದರೆ, ಈ ಸಂಕಷ್ಟದ ನಡುವೆಯೂ, ರೋಹಿತ್ ಶರ್ಮಾ SENA ರಾಷ್ಟ್ರಗಳಲ್ಲಿ ಅತ್ಯುತ್ತಮ ODI ದಾಖಲೆ ಹೊಂದಿದ್ದಾರೆ. 2023ರ ವಿಶ್ವಕಪ್ ನಂತರ, ಅವರ ಬ್ಯಾಟಿಂಗ್ ಸ್ಥಿರತೆ ತಂಡಕ್ಕೆ ಭರವಸೆಯಾಗಿದೆ. ವಿರಾಟ್, ಗಿಲ್ ಸಹಿತ ಇತರರ ಪ್ರದರ್ಶನ ರೋಹಿತ್‌ಗೆ ಹೋಲಿಸಿದರೆ ಕಡಿಮೆಯಾಗಿದೆ.

ವಿದೇಶಿ ನೆಲದಲ್ಲಿ ಯಾರು ಬೆಸ್ಟ್? ರೋಹಿತ್ ಮುಂದೆ ಉಳಿದವರ ಆಟ ಮಂಕು
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on: Nov 14, 2026 | 5:04 PM

Share

ನ್ಯೂಜಿಲೆಂಡ್‌ನ ಮೌಂಟ್ ಮೌಂಗನುಯಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಕುಸಿದುಬಿತ್ತು. ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು. ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮೊದಲ ಓವರ್‌ನಲ್ಲೇ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಈ ಹೀನಾಯ ಪ್ರದರ್ಶನ ಭಾರತೀಯ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ತವರಿನ ಪಿಚ್‌ಗಳಲ್ಲಿ ಮಾತ್ರ ಈ ಆಟಗಾರರು ಮಿಂಚುತ್ತಾರೆಯೇ? ವಿದೇಶಿ ನೆಲದಲ್ಲಿ ಇವರನ್ನು ನಂಬಲು ಸಾಧ್ಯವಿಲ್ಲವೇ ಎಂಬ ಚರ್ಚೆ ಶುರುವಾಗಿದೆ.

ಇತ್ತೀಚಿನ ಪಂದ್ಯಗಳ ಪ್ರದರ್ಶನ ಗಮನಿಸಿದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಮಳೆಯಿಂದಾಗಿ ಪಂದ್ಯಗಳು ಅಡಚಣೆಗೆ ಒಳಗಾದರೂ ಭಾರತ ಗೆಲುವು ಸಾಧಿಸಿತ್ತು. ಆದರೆ, ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟುವಾಗಲೂ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ತಿಣುಕಾಡಿದ್ದರು. ಇನ್ನು ಬೇ ಓವಲ್‌ನಲ್ಲಿ ಬ್ಯಾಟಿಂಗ್‌ಗೆ ಪೂರಕವಾದ ಪರಿಸ್ಥಿತಿ ಇದ್ದರೂ ಭಾರತೀಯ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಕೈಕೊಟ್ಟಿತು. ಪರಿಣಾಮ ತಂಡ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು.

ಸೆನಾ ರಾಷ್ಟ್ರಗಳಲ್ಲಿ ಯಾರ ದಾಖಲೆ ಉತ್ತಮ?

ಇತ್ತೀಚಿನ ಪ್ರದರ್ಶನಗಳನ್ನು ಗಮನಿಸಿದರೆ ವಿದೇಶಿ ನೆಲದಲ್ಲಿ, ಅದರಲ್ಲೂ ಸೆನಾ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿರುವುದು ಸ್ಪಷ್ಟವಾಗುತ್ತದೆ. ಆದರೆ, ಇಂತಹ ಕಠಿಣ ಪರಿಸ್ಥಿತಿಗಳಲ್ಲೂ ಉತ್ತಮ ಪ್ರದರ್ಶನ ನೀಡಿರುವ ಒಬ್ಬ ಆಟಗಾರನಿದ್ದಾನೆ. ಅವರೇ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಆರಂಭಿಕ ಆಟಗಾರ ರೋಹಿತ್ ಶರ್ಮಾ.

ನಿರಂತರ ಟೀಕೆಗಳನ್ನು ಎದುರಿಸುತ್ತಿರುವ ರೋಹಿತ್ ಶರ್ಮಾ ಅವರ ಅಂಕಿಅಂಶಗಳು ಮಾತ್ರ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. 2023ರ ಏಕದಿನ ವಿಶ್ವಕಪ್ ಬಳಿಕದ ಅಂಕಿಅಂಶಗಳನ್ನು ಗಮನಿಸಿದರೆ, ಸೆನಾ ರಾಷ್ಟ್ರಗಳಲ್ಲಿ ರೋಹಿತ್ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಈ ನಾಲ್ಕು ರಾಷ್ಟ್ರಗಳಲ್ಲಿ ಆಡಿರುವ 10 ಏಕದಿನ ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಒಟ್ಟು 400 ರನ್ ಗಳಿಸಿದ್ದಾರೆ. 50ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರು ಎರಡು ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನೆಲದಲ್ಲಿ ಅವರ ಶತಕಗಳು ದಾಖಲಾಗಿವೆ. ಆದರೆ, ಪ್ರಸ್ತುತ ನ್ಯೂಜಿಲೆಂಡ್ ಸರಣಿಯಲ್ಲಿ ಮಾತ್ರ ರೋಹಿತ್ ಎರಡು ಬಾರಿ ಶೂನ್ಯಕ್ಕೆ ಔಟಾಗಿರುವುದು ಗಮನಾರ್ಹ.

ಟೀಂ ಇಂಡಿಯಾವನ್ನು ಧೂಳೀಪಟ ಮಾಡಿದ ಹೆನ್ರಿಗೆ ಕೊಹ್ಲಿಯಿಂದ ಸರ್ಪ್ರೈಸ್ ಗಿಫ್ಟ್

ವಿರಾಟ್, ಗಿಲ್ ಮತ್ತು ಅಯ್ಯರ್ ಪ್ರದರ್ಶನ ಹೇಗಿದೆ?

ಇನ್ನು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಹೇಳಲಾಗುವ ವಿರಾಟ್ ಕೊಹ್ಲಿ ಕೂಡ ಸೆನಾ ರಾಷ್ಟ್ರಗಳಲ್ಲಿ ನಿರೀಕ್ಷಿತ ಮಟ್ಟದ ರನ್ ಗಳಿಸಲು ಸಾಧ್ಯವಾಗಿಲ್ಲ. ಆಡಿರುವ 9 ಇನ್ನಿಂಗ್ಸ್‌ಗಳಲ್ಲಿ 37ರ ಸರಾಸರಿಯಲ್ಲಿ 299 ರನ್ ಗಳಿಸಿರುವ ಅವರು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ನಾಯಕ ಶುಭಮನ್ ಗಿಲ್ ಕೂಡ ದೊಡ್ಡ ಮಟ್ಟದ ಪ್ರದರ್ಶನ ನೀಡಿಲ್ಲ. ಗಿಲ್ 8 ಇನ್ನಿಂಗ್ಸ್‌ಗಳಲ್ಲಿ 38ರ ಸರಾಸರಿಯಲ್ಲಿ 268 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ 9 ಇನ್ನಿಂಗ್ಸ್‌ಗಳಲ್ಲಿ 30ರ ಸರಾಸರಿಯಲ್ಲಿ 270 ರನ್ ಗಳಿಸಿದ್ದಾರೆ.

ಈ ಅಂಕಿಅಂಶಗಳನ್ನು ಗಮನಿಸಿದರೆ ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಶರ್ಮಾ ಸದ್ಯ ಭಾರತೀಯ ತಂಡದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿ ಕಾಣಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ಭಾರತದ ಉಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೂಡ ಆದಷ್ಟು ಬೇಗ ತಮ್ಮ ಲಯ ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ವಿದೇಶಿ ಪಿಚ್‌ಗಳಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಸಂಕಷ್ಟ ಎದುರಿಸುವ ಸಾಧ್ಯತೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More