Rohit Sharma: ಮೈದಾನದಲ್ಲೇ ಮೊಹಮ್ಮದ್ ಶಮಿಗೆ ಸಿಟ್ಟಿನಲ್ಲಿ ಬೈದ ರೋಹಿತ್ ಶರ್ಮಾ: ಯಾಕೆ?, ವಿಡಿಯೋ ವೈರಲ್

| Updated By: Vinay Bhat

Updated on: Nov 11, 2022 | 9:50 AM

India vs England, T20 World Cup Semi Final: ಟಾರ್ಗೆಟ್ ಬೆನ್ನಟ್ಟಲು ಬಂದ ಇಂಗ್ಲೆಂಡ್ ತಂಡ ಆರಂಭದಿಂದಲೇ ಸ್ಫೋಟಕ ಆಟವಾಡಿತು. ಅದಾಗಲೇ ಬೇಸರಗೊಂಡಿದ್ದ ರೋಹಿತ್ ಶರ್ಮಾಗೆ ಮೊಹಮ್ಮದ್ ಶಮಿ ಮತ್ತಷ್ಟು ಸಿಟ್ಟುತರಿಸಿದರು.

Rohit Sharma: ಮೈದಾನದಲ್ಲೇ ಮೊಹಮ್ಮದ್ ಶಮಿಗೆ ಸಿಟ್ಟಿನಲ್ಲಿ ಬೈದ ರೋಹಿತ್ ಶರ್ಮಾ: ಯಾಕೆ?, ವಿಡಿಯೋ ವೈರಲ್
Mohammed Shami and Rohit Sharma
Follow us on

ಐಸಿಸಿ ಟಿ20 ವಿಶ್ವಕಪ್ 2022ರ ದ್ವಿತೀಯ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಸೋಲು ಭಾರತ (India vs England) ತಂಡಕ್ಕೆ ದೊಡ್ಡ ಆಘಾತವಾಗಿದೆ. ಇಡೀ ಟೂರ್ನಿಯಲ್ಲಿ ಕೇವಲ ಒಂದು ಸೋಲನ್ನು ಕಂಡು ಸೆಮೀಸ್​ಗೆ ಲಗ್ಗೆಯಿಟ್ಟಿದ್ದ ರೋಹಿತ್ ಪಡೆ ಫೈನಲ್​ಗೇರುವ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿತು. ಬ್ಯಾಟಿಂಗ್​ನಲ್ಲಿ ಹಾರ್ದಿಕ್ ಪಾಂಡ್ಯ (Hrdik Pandya) ಮತ್ತು ವಿರಾಟ್ ಕೊಹ್ಲಿ ಬಿಟ್ಟರೆ ಮತ್ಯಾರು ಅಬ್ಬರಿಸಲಿಲ್ಲ. ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ ಆಂಗ್ಲರ ಒಂದು ವಿಕೆಟ್ ಕೂಡ ಕೀಳಲು ಸಾಧ್ಯವಾಗಲಿಲ್ಲ. 10 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಟಾರ್ಗೆಟ್ ಬೆನ್ನಟ್ಟಲು ಬಂದ ಇಂಗ್ಲೆಂಡ್ ತಂಡ ಆರಂಭದಿಂದಲೇ ಸ್ಫೋಟಕ ಆಟವಾಡಿತು. ಅದಾಗಲೇ ಬೇಸರಗೊಂಡಿದ್ದ ರೋಹಿತ್ ಶರ್ಮಾಗೆ (Rohit Sharma) ಮೊಹಮ್ಮದ್ ಶಮಿ ಮತ್ತಷ್ಟು ಸಿಟ್ಟುತರಿಸಿದರು.

ಭಾರತ ನೀಡಿದ್ದ 169 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಮನಬಂದಂತೆ ಬ್ಯಾಟ್ ಬೀಸುತ್ತಿದ್ದರು. ಭಾರತದ ಬೌಲರ್​ಗಳು ಪವರ್ ಪ್ಲೇನಲ್ಲಿ 63 ರನ್​ಗಳನ್ನು ನೀಡಿದರು. ಇವರಿಬ್ಬರನ್ನು ಹೇಗಾದರು ಮಾಡಿ ಕಟ್ಟಿಹಾಕಬೇಕು ಎಂದು ನಾನಾ ಕಸರತ್ತು ನಡೆಸಿದ ರೋಹಿತ್ ಶರ್ಮಾಗೆ ಯಾರೂ ಸಾಥ್ ನೀಡಲಿಲ್ಲ. ಭಾರತದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಇದರಿಂದ ರೋಹಿತ್ ಶರ್ಮಾ ಸಿಟ್ಟುಗೊಂಡ ಘಟನೆ ಕೂಡ ನಡೆಯಿತು.

ಇದನ್ನೂ ಓದಿ
Team India: ಐಸಿಸಿ ಟಿ20 ವಿಶ್ವಕಪ್​ 2022 ರಲ್ಲಿ ಭಾರತ ಮಾಡಿದ 5 ಮಹಾ ತಪ್ಪುಗಳಿವು: ಇದಕ್ಕೆ ಉತ್ತರವೆಲ್ಲಿದೆ?
ನಾಯಕನೂ ಸೇರಿ ಟಿ20 ಕ್ರಿಕೆಟ್​ಗೆ ವಿದಾಯ ಹೇಳಬಹುದಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!
IND vs ENG: ‘ಕಲಿಸಲು ಸಾಧ್ಯವಿಲ್ಲ’; ತನ್ನಲ್ಲಿಯೇ ತಪ್ಪಿಟ್ಟುಕೊಂಡು ಇತರರ ಮೇಲೆ ಗೂಬೆ ಕೂರಿಸಿದ ರೋಹಿತ್..!
IND vs ENG: 10 ವಿಕೆಟ್​ಗಳ ಹೀನಾಯ ಸೋಲು; ಬಿಸಿಸಿಐ ಈಗಲಾದರೂ ಬದಲಾಗಬೇಕು ಎಂದ ಕೋಚ್ ರಾಹುಲ್

9ನೇ ಓವರ್​ನ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್​ನಲ್ಲಿ ಬಟ್ಲರ್ ಅವರು ಔಟ್​ಸೈಡ್ ಡೆಲಿವರಿಯನ್ನು ಪುಲ್ ಮಾಡಿದರು. ವಿಕೆಟ್ ಹಿಂದೆ ಹೋದ ಚೆಂಡನ್ನು ಬೌಂಡರಿ ಗೆರೆ ಬಳಿ ಓಡಿ ಬಂದು ಮೊಹಮ್ಮದ್ ಶಮಿ ಹಿಡಿದರು. ಅವರು ನೇರವಾಗಿ ಕೀಪರ್​ಗೆ ಥ್ರೊ ಮಾಡುವ ಬದಲು ತನ್ನ ಪಕ್ಕದಲ್ಲಿದ್ದ ಭುವನೇಶ್ವರ್ ಕುಮಾರ್​ಗೆ ಎಸೆದರು. ಆದರೆ, ಶಮಿ ಥ್ರೋ ಮಾಡಿದ ವೇಗ ಹೆಚ್ಚಿದ್ದ ಕಾರಣ ಚೆಂಡು ಭುವಿ ಕೈಗೆ ಸೇರದೆ ಎತ್ತರದಿಂದ ಮತ್ತೊಮ್ಮೆ ಬೌಂಡರಿ ಗೆರೆ ಬಳಿ ತೆರಳಿತು. ಅತ್ತ ಬಟ್ಲರ್ ಮತ್ತೆ ರನ್​ಗಾಗಿ ಓಡಿದರು. ಶಮಿ ಮಾಡಿದ ಎಡವಟ್ಟಿನಿಂದ ರನ್ ಬಂದಿದ್ದ ಕಾರಣ ಸಿಟ್ಟಾದ ರೋಹಿತ್ ಶರ್ಮಾ ಅಸಮಾಧಾನ ಹೊರಹಾಕಿದರು. ಇದರ ವಿಡಿಯೋ ವೈರಲ್ ಆಗುತ್ತಿದೆ.

 

ಪಂದ್ಯದ ಬಗ್ಗೆ ಮಾತನಾಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್​ ರಾಹುಲ್​ 5 ರನ್​ಗಳನ್ನಷ್ಟೇ ಗಳಿಸಿ ವಿಕೆಟ್​ ಒಪ್ಪಿಸಿದ್ದರು. ನಾಯಕ ರೋಹಿತ್​ ಶರ್ಮಾ ಹಾಗೂ ವಿರಾಟ್​ ಜೊತೆಗೂಡಿ ತಂಡವನ್ನು ಆರಂಭಿಕ ಕುಸಿತದಿಂದ ಮೇಲೆತ್ತುವ ಯತ್ನ ಮಾಡಿದರು. ತಂಡದ ಮೊತ್ತ 59 ರನ್​ಗಳಾಗಿದ್ದಾಗ 27 ರನ್​ ಗಳಿಸಿದ್ದ ರೋಹಿತ್ ಓಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್​ 14 ರನ್​ ಗಳಿಸಿ ಪೆವಿಲಿಯನ್ ಸೇರಿದ್ದರು. ಆದರೆ, ವಿರಾಟ್​ ಕೊಹ್ಲಿ- ಹಾರ್ದಿಕ್​ ಪಾಂಡ್ಯ ತಂಡಕ್ಕೆ ಆಸರೆಯಾದರು. ಕೊಹ್ಲಿ 40 ಎಸೆತಗಳಲ್ಲಿ 1 ಸಿಕ್ಸರ್​ ಮತ್ತು 4 ಬೌಂಡರಿಗಳ ಸಮೇತ 50 ರನ್​ ಗಳಿಸಿದರೆ, ಹಾರ್ದಿಕ್ ಕೇವಲ 33 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು 4 ಬೌಂಡರಿಗಳನ್ನು ಬಾರಿಸಿ 63 ರನ್ ಗಳಿಸಿದರು. ಪರಿಣಾಮ ಭಾರತ 20 ಓವರ್​ಗಳಲ್ಲಿ 168 ರನ್ ಕಲೆಹಾಕಿತು.

169ರನ್‌ಗಳ ಗುರಿಗೆ ಪ್ರತಿಯಾಗಿ ಬ್ಯಾಟ್‌ ಮಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಅಲೆಕ್ಸ್‌ ಹೇಲ್ಸ್‌ ಹಾಗೂ ಜೋಸ್ ಬಟ್ಲರ್‌ 16 ಓವರ್‌ಗಳಲ್ಲಿ 170 ರನ್‌ ಬಾರಿಸಿ ಸುಲಭ ವಿಜಯ ತಂದುಕೊಟ್ಟರು. ಹೇಲ್ಸ್‌ 47 ಎಸೆತಗಳಲ್ಲಿ 86 ರನ್‌ ಬಾರಿಸಿದರೆ, ಬಟ್ಲರ್‌ 49 ಎಸೆತಗಳಲ್ಲಿ 80 ರನ್‌ ಗಳಿಸಿದರು. ಈ ಮೂಲಕ ಈ ಜೋಡಿ ಟಿ20 ವಿಶ್ವ ಕಪ್‌ನಲ್ಲಿ ಗರಿಷ್ಠ ಜೊತೆಯಾಟ ನೀಡಿದ ವಿಶ್ವ ದಾಖಲೆ ಕೂಡ ಮಾಡಿದರು. ಅಲ್ಲದೆ ಎರಡು ವಾರದ ಹಿಂದೆ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಾದ ಕ್ವಿಂಟನ್‌ ಡಿ ಕಾಕ್‌ ಹಾಗೂ ರೀಲಿ ರೊಸ್ಸೊ ಸೃಷ್ಟಿಸಿದ್ದ 168 ರನ್‌ಗಳ ಜತೆಯಾಟದ ದಾಖಲೆಯನ್ನೂ ಮುರಿದರು.

Published On - 9:50 am, Fri, 11 November 22