ಭಾರತ ಮತ್ತು ಅಫ್ಘಾನಿಸ್ತಾನ್ (India vs Afghanistan) ನಡುವಣ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯಕ್ಕೆ ಮೊಹಾಲಿ ಆತಿಥ್ಯವಹಿಸಿದರೆ, ಎರಡನೇ ಪಂದ್ಯವು ಇಂದೋರ್ನಲ್ಲಿ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕರಾಗಿ ಕಾಣಿಸಿಕೊಳ್ಳುವುದು ಯಾರು? ಎಂಬ ಪ್ರಶ್ನೆ ಮೂಡುವುದು ಸಹಜ.
ಏಕೆಂದರೆ ತಂಡದಲ್ಲಿ ಮೂವರು ಆರಂಭಿಕ ಆಟಗಾರರಿದ್ದಾರೆ. ಇವರಲ್ಲಿ ನಾಯಕ ರೋಹಿತ್ ಶರ್ಮಾಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಖಚಿತ. ಆದರೆ ಇನ್ನೊಂದೆಡೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ನಡುವೆ ನೇರ ಪೈಪೋಟಿ ಇದೆ. ಇಲ್ಲಿ ಯಶಸ್ವಿ ಜೈಸ್ವಾಲ್ ಎಡಗೈ ದಾಂಡಿಗನಾದರೆ, ಶುಭ್ಮನ್ ಗಿಲ್ ಬಲಗೈ ಬ್ಯಾಟರ್. ಹೀಗಾಗಿಯೇ ರೈಟ್ ಹ್ಯಾಂಡ್ ಬ್ಯಾಟರ್ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಅವರನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಹುಲ್ ದ್ರಾವಿಡ್, ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಬಲಗೈ-ಎಡಗೈ ಕಾಂಬಿನೇಷನ್ನಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಪರ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೆ ಅವಕಾಶ ಕೈ ತಪ್ಪಲಿದೆಯಾ? ಈ ಪ್ರಶ್ನೆಗೆ ಸದ್ಯದ ಉತ್ತರ ನೋ.
ಏಕೆಂದರೆ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಅತ್ತ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್. ಹೀಗಾಗಿ 3ನೇ ಸ್ಥಾನದಲ್ಲಿ ಶುಭ್ಮನ್ ಗಿಲ್ ಆಡುವ ಸಾಧ್ಯತೆ ಹೆಚ್ಚಿದೆ. ಅದರಂತೆ ಮೊದಲ ಟಿ20 ಪಂದ್ಯದಲ್ಲಿ ಗಿಲ್ಗೂ ಅವಕಾಶ ಸಿಗಲಿದೆ ಎನ್ನಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್.
ಇದನ್ನೂ ಓದಿ: ನನಗೆ RCB ಪರ ಆಡೋದು ಇಷ್ಟವಿರಲಿಲ್ಲ, ಬೆದರಿಸಿ ಆಡ್ಸಿದ್ರು..!
Published On - 6:48 am, Thu, 11 January 24