ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ನ್ಯೂಜಿಲೆಂಡ್ ತಂಡ ಪ್ರವಾಸಿ ನೆದರ್ಲೆಂಡ್ಸ್ (New Zealand vs Netherlands) ವಿರುದ್ಧ ಅಂತಿಮ ಮೂರನೇ ಏಕದಿನ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡ ಕಿವೀಸ್ ಪಡೆ ಸರಣಿ ವಶಪಡಿಸಿಕೊಂಡಿದೆ. ಇದೀಗ ನಡೆಯುತ್ತಿರುವ ತೃತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟಾಮ್ ಲಾಥಮ್ (Tom Latham) ಪಡೆ ಬ್ಯಾಟಿಂಗ್ ನಡೆಸಿ 50 ಓವರ್ಗಳಲ್ಲಿ 333 ರನ್ ಚಚ್ಚಿದೆ. ನ್ಯೂಜಿಲೆಂಡ್ ತಂಡದ ದಿಗ್ಗಜ ಬ್ಯಾಟರ್ ರಾಸ್ ಟೇಲರ್ (Ross Tayler) ಅವರಿಗೆ ಇದು ವಿದಾಯದ ಅಂತರರಾಷ್ಟ್ರೀಯ ಪಂದ್ಯ. ತನ್ನ ಕೊನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಟೇಲರ್ ಭಾವುಕರಾದರು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ರಾಷ್ಟ್ರಗೀತೆಗೆ ಗೌರವ ಸೂಚಿಸುವ ಸಲುವಾಗಿ ಮೈದಾನಕ್ಕೆ ಆಗಮಿಸುವುದು ವಾಡಿಕೆ. ಅದರಂತೆ ನ್ಯೂಜಿಲೆಂಡ್ ದೇಶದ ರಾಷ್ಟ್ರಗೀತೆ ಆಗುತ್ತಿರುವ ವೇಳೆ ಟೇಲರ್ ದುಃಖ ತಾಳಲಾರದೆ ಕಣ್ಣೀರಿಟ್ಟರು. ಮೈದಾನದಲ್ಲಿ ಇವರ ಜೊತೆ ಇಬ್ಬರು ಮಕ್ಕಳು ಮತ್ತು ಮಡದಿ ಕೂಡ ಇದ್ದರು.
ಟೇಲರ್ 450ನೇ ಪಂದ್ಯ:
2006ರ ಮಾರ್ಚ್ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರಾಸ್ ಟೇಲರ್ ಇದುವರೆಗೆ ಏಕದಿನ, ಟಿ20 ಮತ್ತು ಟೆಸ್ಟ್ ಸೇರಿ ಬರೋಬ್ಬರಿ 450 ಪಂದ್ಯಗಳನ್ನು ಆಡಿದ್ದಾರೆ. ಕಿವೀಸ್ ಪಡೆಯ ಆಧಾರಸ್ವಂಭವಾಗಿದ್ದ ಇವರು ಅದೆಷ್ಟೊ ಬಾರಿ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟೇಲರ್ 112 ಟೆಸ್ಟ್ ಪಂದ್ಯಗಳಲ್ಲಿ ಮೂರು ದ್ವಿತಶಕ, 19 ಶತಕ ಮತ್ತು 35 ಅರ್ಧಶತಕದೊಂದಿಗೆ 7684 ರನ್ ಸಿಡಿಸಿದ್ದಾರೆ. ಇವರ ಗರಿಷ್ಠ ಸ್ಕೋರ್ 290 ಆಗಿದೆ. 236 ಏಕದಿನ ಪಂದ್ಯಗಳಲ್ಲಿ 21 ಶತಕ ಮತ್ತು 51 ಅರ್ಧಶತಕದೊಂದಿಗೆ 8602 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 181 ಆಗಿದೆ. ಇನ್ನು 102 ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ 1909 ರನ್ ಕಲೆಹಾಕಿದ್ದು 7 ಅರ್ಧಶತಕ ಬಾರಿಸಿದ್ದಾರೆ.
Ross Taylor gets emotional as he takes the field for New Zealand one last time in international cricket. ♥️
? Spark Sportpic.twitter.com/rxYUdCtVof
— The Field (@thefield_in) April 4, 2022
ನ್ಯೂಜಿಲೆಂಡ್ 333 ರನ್:
ಸದ್ಯ ಸಾಗುತ್ತಿರುವ ನೆದರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 50 ಓವರ್ಗೆ 8 ವಿಕೆಟ್ ನಷ್ಟಕ್ಕೆ 333 ರನ್ ಬಾರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ 12 ರನ್ಗೆ ಹೆನ್ರಿ ನಿಕೋಲ್ಸ್ (2) ವಿಕೆಟ್ ಕಳೆದುಕೊಂಡಿತಾದರೂ ನಂತರ ಭರ್ಜರಿ ಕಮ್ಬ್ಯಾಕ್ ಮಾಡಿತು. ಎರಡನೇ ವಿಕೆಟ್ಗೆ ಮಾರ್ಟಿಮನ್ ಗಪ್ಟಿಲ್ ಹಾಗೂ ವಿಲ್ ಯಂಗ್ ಬೊಂಬಾಟ್ ಆಟ ಪ್ರದರ್ಶಿಸಿದರು. ನೆದರ್ಲೆಂಡ್ ಬೌಲರ್ಗಳ ಬೆಂಡೆತ್ತಿದ ಇವರಿಬ್ಬರು ದ್ವಿತಶಕದ ಜೊತೆಯಾಟ ಆಡಿದರು.
ಬರೋಬ್ಬರಿ 203 ರನ್ಗಳ ಕಾಣಿಕೆ ನೀಡಿದ ಮಾರ್ಟಿನ್-ಯಂಗ್ 38 ಓವರ್ ವರೆಗೆ ಬ್ಯಾಟಿಂಗ್ ನಡೆಸಿದರು. ಇಬ್ಬರೂ ಶತಕ ಸಿಡಿಸಿ ಆರ್ಭಟಿಸಿದರು. ಗಪ್ಟಿಲ್ 123 ಎಸೆತಗಳಲ್ಲಿ 11 ಫೋರ್, 2 ಸಿಕ್ಸರ್ನೊಂದಿಗೆ 106 ರನ್ ಸಿಡಿಸಿದರೆ, ವಿಲ್ ಯಂಗ್ 112 ಎಸೆತಗಳಲ್ಲಿ 6 ಫೋರ್, 4 ಸಿಕ್ಸರ್ನೊಂದಿಗೆ 120 ರನ್ ಚಚ್ಚಿದರು. ಇವರಿಬ್ಬರ ನಿರ್ಗಮನದ ಬಳಿಕ ನ್ಯೂಜಿಲೆಂಡ್ ದಿಢೀರ್ ಕುಸಿತ ಕಂಡಿತು. ವಿದಾಯದ ಪಂದ್ಯವನ್ನಾಡಿದ ರಾಸ್ ಟೇಲರ್ 16 ಎಸೆತಗಳಲ್ಲಿ 1 ಸಿಕ್ಸರ್ ಬಾರಿಸಿ 14 ರನ್ಗೆ ಔಟಾದರು.
ಕೊನೆಯಲ್ಲಿ ಡಗ್ ಬ್ರಾಸ್ವೆಲ್ (22) ಹಾಗೂ ನಾಯಕ ಟಾಮ್ ಲಾಥಮ್ 23 ರನ್ ಗಳಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್ಗೆ 8 ವಿಕೆಟ್ ನಷ್ಟಕ್ಕೆ 333 ರನ್ ಕಲೆಹಾಕಿತು. ನೆದರ್ಲೆಂಡ್ ಪರ ಫ್ರೆಡ್ ಕ್ಲಾಸೆನ್, ವಾನ್ ಬೀಕ್, ಕ್ಲೇಟನ್ ಹಾಗೂ ಆರ್ಯನ್ ದತ್ ತಲಾ 2 ವಿಕೆಟ್ ಪಡೆದರು.
Ravindra Jadeja: ಸೋಲಿನ ಬಳಿಕ ದುಃಖದಿಂದ ಆತ ತಂಡದಲ್ಲಿ ಇರಬೇಕಿತ್ತು ಎಂದ ಜಡೇಜಾ: ಯಾರು ಗೊತ್ತೇ?
IPL 2022: ಪಾಯಿಂಟ್ ಟೇಬಲ್ನಲ್ಲಿ ಯಾರು ಟಾಪರ್?: ಆರೆಂಜ್-ಪರ್ಪಲ್ ಕ್ಯಾಪ್ ರೇಸ್ನಲ್ಲಿ ಯಾರಿದ್ದಾರೆ?