ಮೈದಾನದಲ್ಲೇ ಕಿತ್ತಾಡಿಕೊಂಡ ಸೌತ್ ಆಫ್ರಿಕಾ ಆಟಗಾರರು!

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ಸ್ಲೆಡ್ಜಿಂಗ್ ಅಥವಾ ವಾಗ್ವಾದ ನಡೆಯುವುದು ಸಾಮಾನ್ಯ. ಆದರೆ, ಇಲ್ಲಿ ಸ್ವಂತ ತಂಡದ ಆಟಗಾರರೇ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದಾರೆ! ಹೌದು, ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಹಾಗೂ ಹಿರಿಯ ಆಟಗಾರ ಕ್ವಿಂಟನ್ ಡಿ ಕಾಕ್ ನಡುವೆ ವಾಕ್ಸಮರ ನಡೆದಿದೆ. 

ಮೈದಾನದಲ್ಲೇ ಕಿತ್ತಾಡಿಕೊಂಡ ಸೌತ್ ಆಫ್ರಿಕಾ ಆಟಗಾರರು!
South Africa
Image Credit source: x.com

Updated on: Sep 29, 2026 | 9:02 AM

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯವು ಕೇವಲ ರನ್ ಮಳೆಯಿಂದಷ್ಟೇ ಅಲ್ಲದೆ, ಮೈದಾನದಲ್ಲಿ ನಡೆದ ನಾಯಕ ಮತ್ತು ಹಿರಿಯ ಆಟಗಾರನ ನಡುವಿನ ತೀವ್ರ ವಾಕ್ಸಮರದಿಂದಲೂ ಭಾರಿ ಸುದ್ದಿಯಲ್ಲಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾದ ನಾಯಕ ತೆಂಬಾ ಬವುಮಾ ಮತ್ತು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿದ್ದು, ಸಹ ಆಟಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು.

ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಸಾಂಪ್ರದಾಯಿಕ ‘ಪಿಂಕ್ ಡೇ’ ಪಂದ್ಯದಲ್ಲಿ ಈ ಹೈಡ್ರಾಮಾ ನಡೆದಿದೆ. ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ನಾಯಕ ತೆಂಬಾ ಬವುಮಾ (103) ಹಾಗೂ ಡೇವಿಡ್ ಮಿಲ್ಲರ್ (142) ಭರ್ಜರಿ ಶತಕಗಳ ನೆರವಿನೊಂದಿಗೆ 365 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ಆ ಬಳಿಕ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಬವುಮಾ ಹಾಗೂ ಡಿಕಾಕ್ ನಡುವೆ ವಾಕ್ಸಮರ ನಡೆದಿದೆ.

ವಿವಾದಕ್ಕೆ ಕಾರಣವಾದ ‘DRS’ ಕರೆ!

366 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ಪರ ಕೆಳ ಕ್ರಮಾಂಕದಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಬಿರುಸಿನ ಅರ್ಧಶತಕ ಬಾರಿಸಿ ಸೌತ್ ಆಫ್ರಿಕಾಗೆ ಆತಂಕ ಮೂಡಿಸಿದ್ದರು. ಪಂದ್ಯದ 48ನೇ ಓವರ್‌ನಲ್ಲಿ ಲಿಝಾಡ್ ವಿಲಿಯಮ್ಸ್ ಎಸೆದ ಯಾರ್ಕರ್ ಬಾಲ್ ಬಾರ್ಟ್ಲೆಟ್ ಅವರ ಪ್ಯಾಡ್‌ಗೆ ಬಡಿಯಿತು. ಎಲ್‌ಬಿಡಬ್ಲ್ಯೂ ಗಾಗಿ ಸೌತ್ ಆಫ್ರಿಕಾ ಆಟಗಾರರು ಮನವಿ ಮಾಡಿದರೂ, ಅಂಪೈರ್ ಅದನ್ನು ‘ನಾಟ್ ಔಟ್’ ಎಂದು ಘೋಷಿಸಿದರು.

ಬೌಲರ್ ವಿಲಿಯಮ್ಸ್ ‘ಡಿಆರ್‌ಎಸ್’ ತೆಗೆದುಕೊಳ್ಳುವಂತೆ ನಾಯಕನಲ್ಲಿ ಮನವಿ ಮಾಡಿದರು. ಆದರೆ ವಿಕೆಟ್ ಹಿಂಭಾಗದಲ್ಲಿದ್ದ ಕ್ವಿಂಟನ್ ಡಿ ಕಾಕ್, ಚೆಂಡು ಲೆಗ್ ಸ್ಟಂಪ್‌ನಿಂದ ಹೊರಗೆ ಹೋಗುತ್ತಿದೆ, ರಿವ್ಯೂ ತಗೊಂಡು ವ್ಯರ್ಥ ಮಾಡಬೇಡಿ ಎಂದು ನಾಯಕನಿಗೆ ಸನ್ನೆ ಮಾಡಿದರು.

ಇಬ್ಬರ ನಡುವೆ ಜಗಳ ಶುರು!

ಸಮಯ ಮುಗಿಯುವ ಮುನ್ನ ನಾಯಕ ಬವುಮಾ, ಡಿ ಕಾಕ್ ಮಾತನ್ನು ನಿರ್ಲಕ್ಷಿಸಿ ಅಂಪೈರ್ ಬಳಿ ರಿವ್ಯೂ ಕೋರಿದರು. ಇದರಿಂದ ಅಸಮಾಧಾನಗೊಂಡ ಡಿ ಕಾಕ್ ಏನೋ ಹೇಳಲು ಬಂದಾಗ, ಬವುಮಾ ಮೈದಾನದಲ್ಲೇ ಕೈಬೆರಳು ತೋರಿಸಿ “ಸುಮ್ಮನೆ ಇರು” ಎಂದು ಗದರಿದರು.

ಲೈವ್ ಟೆಲಿವಿಷನ್‌ನಲ್ಲೇ ನಾಯಕ ತನಗೆ ಈ ರೀತಿ ಹೇಳಿದ್ದರಿಂದ ಕೆರಳಿದ ಡಿ ಕಾಕ್, ಬವುಮಾ ಎದುರು ಧಾವಿಸಿ ತೀವ್ರ ವಾಗ್ವಾದಕ್ಕಿಳಿದರು. ಇಬ್ಬರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ ಪರಿಸ್ಥಿತಿ ಅರಿತ ಹಿರಿಯ ಆಟಗಾರ ಡೇವಿಡ್ ಮಿಲರ್ ಮತ್ತು ಮಾರ್ಕೊ ಯಾನ್ಸೆನ್ ಓಡಿ ಬಂದು ಡಿ ಕಾಕ್ ಅವರನ್ನು ಸಮಾಧಾನಪಡಿಸಿ ದೂರ ಕರೆದುಕೊಂಡು ಹೋದರು. ಇದೀಗ ಸೌತ್ ಆಫ್ರಿಕಾ ಆಟಗಾರರ ನಡುವಣ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾಯಕನ ನಿರ್ಧಾರವೇ ಸರಿ!

ಮೈದಾನದಲ್ಲಿ ಇಷ್ಟೆಲ್ಲಾ ಹೈಡ್ರಾಮಾ ನಡೆದ ನಂತರ ಬಂದ ರೀಪ್ಲೇ ಫಲಿತಾಂಶ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ಬಾಲ್ ಟ್ರ್ಯಾಕಿಂಗ್‌ನಲ್ಲಿ ಚೆಂಡು ನೇರವಾಗಿ ಮಿಡಲ್ ಸ್ಟಂಪ್‌ಗೆ ಬಡಿಯುತ್ತಿರುವುದು ಸ್ಪಷ್ಟವಾಗಿ ಕಾಣಿಸಿತು. ಅಂಪೈರ್ ತೀರ್ಪು ಬದಲಾಗಿ ಕ್ಸೇವಿಯರ್ ಬಾರ್ಟ್ಲೆಟ್ ಔಟ್ ಆದರು. ಅಂತಿಮವಾಗಿ ಸೌತ್ ಆಫ್ರಿಕಾ ತಂಡವು 32 ರನ್‌ಗಳ ಜಯ ಸಾಧಿಸಿ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us