ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಗ್ರೂಪ್ 2 ಸೂಪರ್ 12ನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ (South Africa vs Bangladesh) ತಂಡಗಳು ಸೆಣೆಸಾಟ ನಡೆಯುತ್ತಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಈ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಹರಿಣಗಳು ಸ್ಫೋಟಕ ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತ ಕಲೆಹಾಕಿದೆ. ಆಫ್ರಿಕಾ ಪರ ರಿಲೀ ರಾಸ್ಸೋ (Rilee Rossouw) ಬಿರುಸಿನ ಬ್ಯಾಟಿಂಗ್ ಮಾಡಿದ್ದು, ಟಿ20 ವಿಶ್ವಕಪ್ 2022ರಲ್ಲಿ ಮೊದಲ ಶತಕ ಸಿಡಿಸಿದ್ದಾರೆ. ರಾಸ್ಸೋ ಶತಕ ಹಾಗೂ ಡಿಕಾಕ್ ಅವರ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 205 ರನ್ ಗಳಿಸಿದೆ.
ಟಾಸ್ ಗೆದ್ದ ದಕ್ಷಿಣ ಆಪ್ರಿಕಾ ತಂಡದ ನಾಯಕ ತೆಂಬಾ ಬವುಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್ಗಳಾಗಿ ಕ್ರೀಸ್ಗೆ ಬಂದ ತೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಪೈಕಿ ಟಸ್ಕರ್ ಅಹ್ಮದ್ ಬೌಲಿಂಗ್ನ ಮೊದಲ ಓವರ್ನಲ್ಲೇ ಬವುಮಾ 2 ರನ್ಗೆ ಔಟಾದರು. ನಂತರ ದ್ವಿತೀಯ ವಿಕೆಟ್ಗೆ ಜೊತೆಯಾದ ಡಿಕಾಕ್ ಹಾಗೂ ರಿಲೀ ರಾಸ್ಸೋ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪವರ್ ಪ್ಲೇನಲ್ಲಿ ಬಿರುಸಿನ ಆಟವಾಡಿದ ಈ ಜೋಡಿ ಆರಂಭದಲ್ಲೇ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದರು.
ಈ ಜೋಡಿ 2ನೇ ವಿಕೆಟ್ಗೆ ಬರೋಬ್ಬರಿ 168 ರನ್ಗಳ ಜೊತೆಯಾಟ ಆಡಿತು. ಅದುಕೂಡ 14.3 ಓವರ್ ಆಗುವಷ್ಟರಲ್ಲಿ ಎಂಬುದು ವಿಶೇಷ. ರಿಲೀ ರಾಸ್ಸೋ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ಡಿಕಾಕ್ 38 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 63 ರನ್ಗೆ ಔಟಾದರು. ನಂತರ ಬಂದ ಟ್ರಿಸ್ಟನ್ ಸ್ಟಬ್ಸ್ 7 ರನ್ಗೆ ಔಟಾದರು. ಅಂತಿಮ ಹಂತದಲ್ಲಿ ಮತ್ತಷ್ಟು ಬಿರುಸಿನ ಬ್ಯಾಟಿಂಗ್ ನಡೆಸಿದ ರಿಲೀ ರಾಸ್ಸೋ ಅಮೋಘ ಶತಕ ಸಿಡಿಸಿ ಮಿಂಚಿದರು.
ಒಟ್ಟು 56 ಎಸೆತಗಳಲ್ಲಿ ಎದುರಿಸಿದ ರಿಲೀ ರಾಸ್ಸೋ 7 ಫೋರ್ ಮತ್ತು 8 ಸಿಕ್ಸರ್ ಬಾರಿಸಿ 109 ರನ್ ಚಚ್ಚಿದರು. ಆ್ಯಡಂ ಮರ್ಕ್ರಮ್ 10 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿದೆ. ಬಾಂಗ್ಲಾ ಪರ ಶಕಿಬ್ ಅಲ್ ಹಸನ್ 2, ಟಸ್ಕಿನ್ ಅಹ್ಮದ್ ಹಾಗೂ ಅಸಿಫ್ ಹುಸೈನ್ 1 ವಿಕೆಟ್ ಪಡೆದರು.
ಪ್ಲೇಯಿಂಗ್ XI:
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ತೆಂಬಾ ಬವುಮಾ (ನಾಯಕ), ರಿಲೀ ರಾಸ್ಸೋ, ಆ್ಯಡೆನ್ ಮರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.
ಬಾಂಗ್ಲಾದೇಶ ತಂಡ: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್.
ಭಾರತ- ನೆದರ್ಲೆಂಡ್ಸ್ ಪಂದ್ಯ:
ಐಸಿಸಿ ಟಿ20 ವಿಶ್ವಕಪ್ನಲ್ಲಿಂದು ಮತ್ತೊಂದು ರೋಚಕ ಕದನ ನಡೆಯಲದೆ. ಮಧ್ಯಾಹ್ನ 12:30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಮತ್ತೊಂದು ಜಯ ಸಾಧಿಸಿ ಟೇಬಲ್ ಟಾಪರ್ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಬಾಂಗ್ಲಾ ಎದುರು ಸೋತ ನೆದರ್ಲೆಂಡ್ಸ್ ಚೊಚ್ಚಲ ಗೆಲುವನ್ನು ಎದುರು ನೋಡುತ್ತಿದೆ. ರೋಹಿತ್ ಪಡೆ ನೆದರ್ಲೆಂಡ್ಸ್ ತಂಡವನ್ನು ಹಗುರವಾಗಿ ಪರಿಗಣಿಸದೆ ಗೇಮ್ ಪ್ಲಾನ್ ರೂಪಿಸುತ್ತಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ಸಾಕ್ಷಿಯಾಗಲಿದೆ.