India vs Netherlands: ಭಾರತ-ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆಯ ಕಾಟ?: ಸಿಡ್ನಿ ಹವಾಮಾನ ವರದಿ ಇಲ್ಲಿದೆ ನೋಡಿ
Sydney Weather Report, IND vs NED: ಟಿ20 ವಿಶ್ವಕಪ್ನಲ್ಲಿ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ ತಂಡ ಮುಖಾಮುಖಿ ಆಗುತ್ತಿದೆ. ಹಾಗಾದರೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆಯೇ?, ಸಿಡ್ನಿ ಹವಾಮಾನ ಹೇಗಿದೆ? ಎಂಬುದನ್ನು ನೋಡೋಣ.
ಐಸಿಸಿ ಟಿ20 ವಿಶ್ವಕಪ್ನಲ್ಲಿಂದು (T20 Word Cup) ಮತ್ತೊಂದು ರೋಚಕ ಕದನ ನಡೆಯಲದೆ. ಮಧ್ಯಾಹ್ನ 12:30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ (India vs Netherlands) ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಮತ್ತೊಂದು ಜಯ ಸಾಧಿಸಿ ಟೇಬಲ್ ಟಾಪರ್ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಬಾಂಗ್ಲಾ ಎದುರು ಸೋತ ನೆದರ್ಲೆಂಡ್ಸ್ ಚೊಚ್ಚಲ ಗೆಲುವನ್ನು ಎದುರು ನೋಡುತ್ತಿದೆ. ರೋಹಿತ್ ಪಡೆ ನೆದರ್ಲೆಂಡ್ಸ್ ತಂಡವನ್ನು ಹಗುರವಾಗಿ ಪರಿಗಣಿಸದೆ ಗೇಮ್ ಪ್ಲಾನ್ ರೂಪಿಸುತ್ತಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಗ್ರೌಂಡ್ (Sydney Cricket Ground) ಸಾಕ್ಷಿಯಾಗಲಿದೆ. ಹಾಗಾದರೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆಯೇ?, ಸಿಡ್ನಿ ಹವಾಮಾನ ಹೇಗಿದೆ? ಎಂಬುದನ್ನು ನೋಡೋಣ.
ಕಳೆದ ಭಾರತ- ಪಾಕಿಸ್ತಾನ ಪಂದ್ಯಕ್ಕೆ ಮೆಲ್ಬೋರ್ನ್ನಲ್ಲಿ ವರುಣನ ಕಾಟ ಇರಲಿದೆ ಎಂದು ಹೇಳಲಾಗಿತ್ತು. ಆದರೆ, ಪಂದ್ಯ ಸರಾಗವಾಗಿ ಸಾಗಿತು. ಇಂದು ಕೂಡ ಇಂಡೋ- ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಲಿದೆ ಎನ್ನಲಾಗಿದೆ. ಗುರುವಾರ ಸಿಡ್ನಿ ಸುತ್ತಮುತ್ತ ಮಳೆಯಾಗುವ ಸಾಧ್ಯತೆಯಿರುವ ಕಾರಣ ಪಂದ್ಯಕ್ಕೂ ಸಣ್ಣ ಪ್ರಮಾಣದಲ್ಲಿ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೆಲ್ಬೋರ್ನ್ಗೆ ಹೋಲಿಸಿದರೆ ಸಿಡ್ನಿ ಪಿಚ್ ವಿಶೇಷವಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನ ಬ್ಯಾಟಿಂಗ್‌ಗೆ ಉತ್ತಮವಾಗಿರುವ ಪಿಚ್ ಹೊಂದಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ಕಾರಣ ಆರಂಭದಿಂದಲೇ ಬ್ಯಾಟರ್‌ಗಳು ಯಶಸ್ಸು ಸಾಧಿಸುತ್ತಾರೆ. ಇದುಕೂಡ ದೊಡ್ಡ ಮೈದಾನ ಆಗಿರುವುದರಿಂದ 160+ ರನ್ ಕಲೆಹಾಕುವುದು ಸುಲಭವಲ್ಲ. ಹೀಗಾಗಿ ಇಂದಿನ ಮ್ಯಾಚ್ ಕೂಡ ಹೈವೋಲ್ಟೇಜ್ ಆಗುವ ನಿರೀಕ್ಷೆಯಿದೆ. ಭಾರತ- ನೆದರ್ಲೆಂಡ್ಸ್ ಪಂದ್ಯಕ್ಕೂ ಮುನ್ನ ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸೆಣೆಸಾಟ ನಡೆಸಲಿದೆ.
ಟೀಮ್ ಇಂಡಿಯಾ ಮೊದಲ ಪಂದ್ಯ ಗೆದ್ದರೂ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗದಲ್ಲಿ ಸುಧಾರಣೆ ಕಾಣಬೇಕಿದೆ. ಓಪನರ್ಗಳಾದ ಕೆಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ. ಸೂರ್ಯಕುಮಾರ್ ಯಾದವ್ ಕೂಡ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಕೊಹ್ಲಿ ಹಾರ್ದಿಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಕೊಡುಗೆ ತಂಡಕ್ಕೆ ಇನ್ನೂ ಬೇಕಾಗಿದೆ. ಅಕ್ಷರ್ ಪಟೇಲ್ ಕಡೆಯಿಂದ ಕೂಡ ಬ್ಯಾಟಿಂಗ್ ವಿಭಾಗದಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟ ನಿರೀಕ್ಷಿಸಲಾಗಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಕೂಡ ಭಾರತ ಬಿಗಿಯಾಗಬೇಕಿದೆ. ಕಳೆದ ಪಾಕ್ ವಿರುದ್ಧ ಮೊದಲ 10 ಓವರ್ಗಳಲ್ಲಿ ಭಾರತೀಯ ಬೌಲರ್ಗಳು ನೀಡಿದ್ದು ಕೇವಲ 60 ರನ್ಗಳನ್ನು ಮಾತ್ರ. ಆದರೆ, ನಂತರದ 10 ಓವರ್ಗಳಲ್ಲಿ 99 ರನ್ ನೀಡಿದ್ದರು. ಅದರಲ್ಲೂ ಡೆತ್ ಓವರ್ಗಳಲ್ಲಿ ರನ್ ಬಿಟ್ಟು ಕೊಟ್ಟ ಪರಿಣಾಮ ಪಾಕಿಸ್ತಾನ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಹೀಗಾಗಿ ಕಳೆದ ಒಂದು ವರ್ಷದಿಂದ ರೋಹಿತ್ ಪಡೆಯಲ್ಲಿ ಕಾಡುತ್ತಿರುವ ಡೆತ್ ಓವರ್ಗಳ ಸಮಸ್ಯೆ ಸುಧಾರಿಸಬೇಕಿದೆ.
ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. 12 ಗಂಟೆಗೆ ಟಾಸ್ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ನೇರ ಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ TV9Kannada.com ನಲ್ಲಿ ಈ ಪಂದ್ಯದ ಲೈವ್ ನವೀಕರಣಗಳನ್ನು ಸಹ ಓದಬಹುದು.
Published On - 8:37 am, Thu, 27 October 22