India vs Netherlands: ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ಟೀಮ್ ಇಂಡಿಯಾಗೆ ಏಕೆ ಬಹಳ ಮುಖ್ಯ? ಇಲ್ಲಿದೆ 4 ಕಾರಣಗಳು
India vs Netherlands: ನೆದರ್ಲ್ಯಾಂಡ್ಸ್ ವಿರುದ್ಧ ತನ್ನೆಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.
T20 World Cup 2022: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಭಾರತ ತಂಡವು ನೆದರ್ಲ್ಯಾಂಡ್ಸ್ (India vs Netherlands) ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ರೋಚಕ ಜಯ ಸಾಧಿಸಿರುವ ಟೀಮ್ ಇಂಡಿಯಾಗೆ (Team India) ಈ ಪಂದ್ಯ ಕೂಡ ಬಹಳ ಮಹತ್ವದ್ದು. ಏಕೆಂದರೆ ಈ ಪಂದ್ಯದ ಬಳಿಕ ಭಾರತ ತಂಡವು ಕಣಕ್ಕಿಳಿಯಬೇಕಿರುವುದು ಸೌತ್ ಆಫ್ರಿಕಾ (South Africa) ವಿರುದ್ಧ. ಹೀಗಾಗಿ ನೆದರ್ಲ್ಯಾಂಡ್ಸ್ ವಿರುದ್ಧ ತನ್ನೆಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ಇದಲ್ಲದೆ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಹತ್ವದೆನಿಕೊಳ್ಳಲು ಇನ್ನೂ ಹಲವು ಕಾರಣಗಳಿವೆ….
1- ಗೆಲುವಿನ ಲಯ:
ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿದೆ. ಆದರೆ ಆ ಗೆಲುವಿನ ಲಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ಅದರಲ್ಲೂ ಏಕಪಕ್ಷೀಯ ಗೆಲುವಿನ ಮೂಲಕ ಟೀಮ್ ಇಂಡಿಯಾಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಿಕ್ಕ ಅತ್ಯುತ್ತಮ ಅವಕಾಶ ಎಂದರೆ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ. ಏಕೆಂದರೆ 3ನೇ ಪಂದ್ಯದಲ್ಲಿ ಭಾರತ ಎದುರಾಳಿ ಸೌತ್ ಆಫ್ರಿಕಾ ತಂಡ. ಹೀಗಾಗಿ ಅದಕ್ಕೂ ಮುನ್ನ ತನ್ನೆಲ್ಲಾ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.
2- ಕೈ ಕೊಡುತ್ತಿರುವ ಹವಾಮಾನ:
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಇದೀಗ ವರುಣನ ಅವಕೃಪೆಗೆ ಒಳಗಾಗುತ್ತಿದೆ. ಈಗಾಗಲೇ 2 ಪಂದ್ಯಗಳು ರದ್ದಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ರದ್ದಾದ ಪಂದ್ಯಗಳಲ್ಲಿ ಉಭಯ ತಂಡಗಳಿಗೆ ಕೇವಲ 1 ಪಾಯಿಂಟ್ ಮಾತ್ರ ಸಿಗಲಿದೆ. ಒಂದು ವೇಳೆ ಟೀಮ್ ಇಂಡಿಯಾದ ಮುಂದಿನ ಯಾವುದಾದರೂ ಪಂದ್ಯ ಮಳೆಯಿಂದ ರದ್ದಾದರೆ ಸಂಕಷ್ಟಕ್ಕೆ ಸಿಲುಕಬಹುದು. ಹೀಗಾಗಿ ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕಿದೆ. ಏಕೆಂದರೆ ಮಳೆಯಿಂದ ಪಂದ್ಯಗಳು ರದ್ದಾಗಲು ಆರಂಭಿಸಿದರೆ ಅಂತಿಮವಾಗಿ ಸೆಮಿಫೈನಲ್ ಪ್ರವೇಶಿಸಲು ನೆಟ್ ರನ್ ರೇಟ್ ಮೊರೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಪ್ರತಿ ಪಂದ್ಯವನ್ನು ಗೆಲ್ಲುವುದು ಮುಖ್ಯ. ಅದರಲ್ಲೂ ಭಾರೀ ಅಂತರದಿಂದ ಗೆಲ್ಲುವುದು ಬಹಳ ಮುಖ್ಯ.
3- ಬ್ಯಾಟಿಂಗ್ ವೈಫಲ್ಯ:
ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಆಪತ್ಭಾಂಧವರಾಗಿದ್ದು ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್ಗಳು ಸಂಪೂರ್ಣ ವಿಫಲರಾಗಿದ್ದರು. ಕೇವಲ 31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ನೆದರ್ಲ್ಯಾಂಡ್ಸ್ ವಿರುದ್ಧ ಅಗ್ರ ಕ್ರಮಾಂಕದ ಆಟಗಾರರು ಫಾರ್ಮ್ಗೆ ಮರಳಬೇಕಾದ ಅನಿವಾರ್ಯತೆಯಿದೆ. ಅದರಲ್ಲೂ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿ ಉತ್ತಮ ಅಡಿಪಾಯ ಹಾಕಿಕೊಡಬೇಕಾದ ಅವಶ್ಯಕತೆಯಿದೆ.
4- ಡೆತ್ ಓವರ್ಗಳ ಸುಧಾರಣೆ:
ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಗೆದ್ದಿರಬಹುದು. ಆದರೆ ಬೌಲಿಂಗ್ ಹೇಳಿಕೊಳ್ಳುವಂತಿರಲಿಲ್ಲ ಎಂಬುದಕ್ಕೆ ಭಾರತದ ಬೌಲರ್ಗಳು ದ್ವಿತಿಯಾರ್ಧದಲ್ಲಿ ನೀಡಿದ ರನ್ಗಳ ಸಾಕ್ಷಿ. ಅಂದರೆ ಮೊದಲ 10 ಓವರ್ಗಳಲ್ಲಿ ಕೇವಲ 60 ರನ್ ಬಿಟ್ಟುಕೊಟ್ಟಿದ್ದ ಟೀಮ್ ಇಂಡಿಯಾ ಬೌಲರ್ಗಳು 2ನೇ 10 ಓವರ್ಗಳಲ್ಲಿ 99 ರನ್ ನೀಡಿದ್ದರು. ಅದರಲ್ಲೂ ಡೆತ್ ಓವರ್ಗಳಲ್ಲಿ ರನ್ ಬಿಟ್ಟು ಕೊಟ್ಟ ಪರಿಣಾಮ ಪಾಕಿಸ್ತಾನ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಹೀಗಾಗಿ ಡೆತ್ ಓವರ್ಗಳ ವೇಳೆ ರನ್ ನಿಯಂತ್ರಿಸುವುದು ಕೂಡ ಟೀಮ್ ಇಂಡಿಯಾ ಪಾಲಿಗೆ ಅತ್ಯಗತ್ಯ. ಹೀಗಾಗಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ಕೊನೆಯ ಅವಕಾಶ ಎಂದೇ ಹೇಳಬಹುದು.