ರೋಹಿತ್ ಬಳಿಕ ಟೀಂ ಇಂಡಿಯಾದ ನಾಯಕ ಯಾರು? ಪಾಕ್ ಮಾಜಿ ಕ್ರಿಕೆಟಿಗರ ಆಯ್ಕೆ ಯಾರು ಗೊತ್ತಾ?
ನೆರೆಯ ದೇಶ ಪಾಕಿಸ್ತಾನದ ಮಾಜಿ ಆಟಗಾರರು ಕೂಡ ಹಾರ್ದಿಕ್ ಆಟಕ್ಕೆ ಮನಸೋತಿದ್ದು, ಅವರನ್ನು ಟೀಂ ಇಂಡಿಯಾದ ಭವಿಷ್ಯದ ನಾಯಕನಂತೆ ಬಿಂಬಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ (T20 World Cup 2022) ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ತನ್ನ ಆರಂಭಿಕ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಬಗ್ಗುಬಡಿದಿರುವ ರೋಹಿತ್ ಪಡೆ ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿದೆ. ಈಗ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದ್ದು, ಅದಕ್ಕಾಗಿ ತಯಾರಿ ಆರಂಭಿಸಿದೆ. ರೋಚಕ ಘಟ್ಟ ತಲುಪಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) 82 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ಇನ್ನಿಂಗ್ಸ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ಎಷ್ಟು ನಿಜವೋ, ಇತರ ಆಟಗಾರರೂ ಗೆಲುವಿಗಾಗಿ ನೀಡಿದ ಅದ್ಭುತ ಪ್ರದರ್ಶನವೂ ಕೊಹ್ಲಿ ಇನ್ನಿಂಗ್ಸ್ನಷ್ಟೇ ಪ್ರಮುಖವಾಗಿದೆ ಎಂಬುದನ್ನು ಇಲ್ಲಿ ಸ್ಮರೀಸಬೇಕಿದೆ.
ಬೌಲಿಂಗ್ನಲ್ಲಿ ಮಿಂಚಿದ ವೇಗಿಗಳು
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ತಂಡಕ್ಕೆ ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಉತ್ತಮ ಆರಂಭ ನೀಡಿದರು. ಅದರಲ್ಲೂ ಅರ್ಷದೀಪ್ ಸಿಂಗ್ ಪವರ್‌ಪ್ಲೇಯಲ್ಲಿಯೇ ಪಾಕಿಸ್ತಾನದ ಇಬ್ಬರು ಆರಂಭಿಕರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಅವರಲ್ಲದೆ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಬೌಲಿಂಗ್ನಲ್ಲಿ ಪ್ರಮುಖ 3 ವಿಕೆಟ್ ಪಡೆದರೆ, ಆ ಬಳಿಕ ಬ್ಯಾಟಿಂಗ್‌ನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೇ ವಿರಾಟ್ ಕೊಹ್ಲಿ ಜತೆ ಶತಕದ ಜೊತೆಯಾಟವನ್ನು ಹಂಚಿಕೊಂಡರು.
ಇದನ್ನೂ ಓದಿ: ICC rankings: ಪಾಕ್ ವಿರುದ್ಧ ಅಬ್ಬರಿಸಿದ ಕಿಂಗ್ ಕೊಹ್ಲಿಗೆ ರ್ಯಾಂಕಿಂಗ್ನಲ್ಲೂ ಮುಂಬಡ್ತಿ! ಟಾಪ್ 9ರಲ್ಲಿ ವಿರಾಟ್
ಪಾಂಡ್ಯರ ಈ ಆಲ್ರೌಂಡರ್ ಆಟ ನೋಡಿದ ಕ್ರಿಕೆಟ್ ಜಗತ್ತೆ ಅವರನ್ನು ಹೊಗಳಲು ಆರಂಭಿಸಿದೆ. ಇತ್ತ ನೆರೆಯ ದೇಶ ಪಾಕಿಸ್ತಾನದ ಮಾಜಿ ಆಟಗಾರರು ಕೂಡ ಹಾರ್ದಿಕ್ ಆಟಕ್ಕೆ ಮನಸೋತಿದ್ದು, ಅವರನ್ನು ಟೀಂ ಇಂಡಿಯಾದ ಭವಿಷ್ಯದ ನಾಯಕನಂತೆ ಬಿಂಬಿಸಿದ್ದಾರೆ. ಹಾರ್ದಿಕ್ ಅವರನ್ನು ಭವಿಷ್ಯದ ಕ್ಯಾಪ್ಟನ್ ಮೆಟಿರಿಯಲ್ ಎಂದಿರುವ ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಸ್ ಅವರ ಆಟದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಹಾಗೆಯೇ ಪಾಕ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಾಕ್ ಕೂಡ ಪಾಂಡ್ಯ ಆಟಕ್ಕೆ ಬೆರಗಾಗಿದ್ದಾರೆ.
ಪಾಂಡ್ಯರನ್ನು ಹೊಗಳಿದ ಮಿಸ್ಬಾ
ಟಿವಿ ಕಾರ್ಯಕ್ರಮವೊಂದರಲ್ಲಿ ಬಾಗಿಯಾಗಿದ್ದ ಮಿಸ್ಬಾ, ಈ ವೇಳೆ ಮಿಸ್ಬಾ ಹಾರ್ದಿಕ್ ಪಾಂಡ್ಯ ಅವರನ್ನು ಹೊಗಳಿ ಮಾತನಾಡಿದ್ದಾರೆ. ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕತ್ವವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಲ್ಲದೆ ಪ್ರತಿ ಪಂದ್ಯದಲ್ಲೂ ಅವರು ಒತ್ತಡವನ್ನು ನಿಭಾಯಿಸಿದ ರೀತಿ ಅದ್ಭುತವಾಗಿತ್ತು. ಸದ್ಯ ಪಾಂಡ್ಯ ಟೀಂ ಇಂಡಿಯಾದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನೀವು ಮಾನಸಿಕವಾಗಿ ಸದೃಢರಾಗಿದ್ದರೆ, ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಮಾತ್ರ ನೀವು ಫಿನಿಶರ್ ಆಗಿ ತಂಡದಲ್ಲಿರುತ್ತೀರಿ. ಈ ಎಲ್ಲಾ ಗುಣವನ್ನು ಹಾರ್ದಿಕ್ ಪಾಂಡ್ಯ ಹೊಂದಿದ್ದಾರೆ ಎಂದು ಮಿಸ್ಬಾ ಹೇಳಿದ್ದಾರೆ.
ಪಾಂಡ್ಯರನ್ನು ಭವಿಷ್ಯದ ಟೀಂ ಇಂಡಿಯಾದ ನಾಯಕ ಎಂದಿರುವ ವಾಕರ್ ಯೂನಿಸ್, ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕನಾದರೆ ನಾನು ಆಶ್ಚರ್ಯಪಡುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ವಾಸಿಂ ಅಕ್ರಂ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು. ಪಾಂಡ್ಯ ಈ ಮೊದಲು ಐಪಿಎಲ್‌ನಲ್ಲಿ ನಾಯಕತ್ವವಹಿಸಿಕೊಂಡು ತನ್ನ ನಾಯಕತ್ವದ ಮೊದಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ ಮಾಡಿದರು. ಈಗ ಅವರು ಟೀಂ ಇಂಡಿಯಾದ ಪ್ರಮುಖ ಶಕ್ತಿಯಾಗಿದ್ದಾರೆ. ಅಲ್ಲದೆ ಆಟದ ವೇಳೆ ನಾಯಕನಿಗೆ ಹಲವು ಸಲಹೆ ನೀಡುತ್ತಾರೆ. ಹೀಗಾಗಿ ಭವಿಷ್ಯದ ನಾಯಕತ್ವದ ದೃಷ್ಟಿಯಿಂದ ಪಾಂಡ್ಯ ಈ ಎಲ್ಲಾ ಕಲೆಗಳನ್ನು ಹಂತಹಂತವಾಗಿ ಕಲಿಯುತ್ತಿದ್ದಾರೆ ಎಂದು ಅಕ್ರಂ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ