Shardul Thakur: 7 ವಿಕೆಟ್​ ಉರುಳಿಸಿ 7 ದಾಖಲೆ ಬರೆದ ಶಾರ್ದೂಲ್ ಠಾಕೂರ್..!

| Updated By: ಝಾಹಿರ್ ಯೂಸುಫ್

Updated on: Jan 04, 2022 | 8:57 PM

India vs South Africa 2nd Test: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾದ ಮೂರನೇ ಬೌಲರ್ ಎಂಬ ದಾಖಲೆ ಕೂಡ ಶಾರ್ದೂಲ್ ಠಾಕೂರ್ ಪಾಲಾಗಿದೆ. ಈ ಹಿಂದೆ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್ ಈ ಸಾಧನೆ ಮಾಡಿದ್ದರು.

Shardul Thakur: 7 ವಿಕೆಟ್​ ಉರುಳಿಸಿ 7 ದಾಖಲೆ ಬರೆದ ಶಾರ್ದೂಲ್ ಠಾಕೂರ್..!
Shardul Thakur
Follow us on

ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ವೇಗಿ ಶಾರ್ದೂಲ್ ಠಾಕೂರ್ (Shardul Thakur)  7 ವಿಕೆಟ್ ಕಬಳಿಸಿ ಹೊಸ ದಾಖಲೆ ಬರೆದಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ನೀಡಿದ 202 ರನ್​ಗಳಿಗೆ ಉತ್ತರವಾಗಿ ಇನಿಂಗ್ಸ್​ ಆರಂಭಿಸಿದ ದಕ್ಷಿಣ ಆಫ್ರಿಕಾ 2ನೇ ದಿನದಾಟವನ್ನು ಉತ್ತಮವಾಗಿ ಆರಂಭಿಸಿತ್ತು. ನಾಯಕ ಡೀನ್ ಎಲ್ಗರ್ ಹಾಗೂ ಕೀಗನ್ ಪೀಟರ್ಸನ್ 2ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿದ್ದರು. ಆದರೆ ಈ ವೇಳೆ ದಾಳಿಗಿಳಿದ ಶಾರ್ದೂಲ್ ಠಾಕೂರ್ ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಪಡೆಯುವ ಮೂಲಕ ಸೌತ್​ ಆಫ್ರಿಕಾಗೆ ಶಾಕ್ ನೀಡಿದ್ದರು. ಅಲ್ಲದೆ 60 ಎಸೆತಗಳಲ್ಲಿ ಬಿರುಸಿನ 51 ರನ್​ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ತೆಂಬ ಬವುಮಾ ಅವರನ್ನು ಔಟ್ ಮಾಡುವ ಮೂಲಕ ಶಾರ್ದೂಲ್ ಠಾಕೂರ್ ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. 17.5 ಓವರ್‌ಗಳನ್ನು ಬೌಲ್ ಮಾಡಿದ ಶಾರ್ದೂಲ್ ಅಂತಿಮವಾಗಿ ಕೇವಲ 61 ರನ್​ ನೀಡಿ 7 ವಿಕೆಟ್ ಕಬಳಿಸಿದರು.

ಈ ಮೂಲಕ ಜೋಹಾನ್ಸ್​ಬರ್ಗ್​ನ ಮೈದಾನದಲ್ಲಿ ಐದು ವಿಕೆಟ್ ಕಬಳಿಸಿದ ಟೀಮ್ ಇಂಡಿಯಾದ 6ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ಪಿಚ್​ನಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಶ್ರೀಶಾಂತ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಐದು ವಿಕೆಟ್ ಕಬಳಿಸಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಶಾರ್ದೂಲ್ ಠಾಕೂರ್ ಕೂಡ ಸೇರ್ಪಡೆಯಾಗಿದ್ದಾರೆ.

ಅಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ದ 7 ವಿಕೆಟ್ ಪಡೆದ ಟೀಮ್ ಇಂಡಿಯಾದ ಮೊದಲ ವೇಗಿ ಎಂಬ ದಾಖಲೆಯನ್ನೂ ಕೂಡ ಶಾರ್ದೂಲ್ ಠಾಕೂರ್ ಬರೆದಿದ್ದಾರೆ. ಇದಕ್ಕೂ ಮುನ್ನ ಸೌತ್ ಆಫ್ರಿಕಾ ವಿರುದ್ದ ಸ್ಪಿನ್ನರ್​ಗಳಾದ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್ 7 ವಿಕೆಟ್ ಕಬಳಿಸಿದ್ದರು.

ಜೊತೆಗೆ ಜೋಹಾನ್ಸ್​ಬರ್ಗ್​ನ ವಾಂಡರರ್ಸ್​ ಪಿಚ್​ನಲ್ಲಿ 7 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಬೌಲರ್​ ಎನಿಸಿಕೊಂಡರು. ಇದಕ್ಕೂ ಮುನ್ನ ಈ ಪಿಚ್​ನಲ್ಲಿ ಅನಿಲ್ ಕುಂಬ್ಳೆ 6 ವಿಕೆಟ್ ಪಡೆದಿರುವುದು ದಾಖಲೆಯಾಗಿತ್ತು.

ಇನ್ನು ದಕ್ಷಿಣ ಆಫ್ರಿಕಾ ವಿರುದ್ದ ಅತ್ಯಂತ ಯಶಸ್ವಿ ಟೀಮ್ ಇಂಡಿಯಾ ಬೌಲರ್ ಎಂಬ ದಾಖಲೆಯನ್ನೂ ಕೂಡ ಶಾರ್ದೂಲ್ ಠಾಕೂರ್ ತಮ್ಮದಾಗಿಸಿಕೊಂಡರು. ಈ ಹಿಂದೆ 2016 ರಲ್ಲಿ ನಡೆದ ನಾಗ್ಪುರ ಟೆಸ್ಟ್​​ನಲ್ಲಿ ಅಶ್ವಿನ್ 66 ರನ್​ಗೆ 7 ವಿಕೆಟ್ ಕಬಳಿಸಿದ್ದು ಅತ್ಯುತ್ತಮ ದಾಖಲೆಯಾಗಿತ್ತು. ಇದೀಗ ಕೇವಲ 61 ರನ್​ಗೆ 7 ವಿಕೆಟ್ ಉರುಳಿಸಿ ಶಾರ್ದೂಲ್ ಠಾಕೂರ್ ಹೊಸ ಇತಿಹಾಸ ಬರೆದಿದ್ದಾರೆ.

ಇದಲ್ಲದೆ ದಕ್ಷಿಣ ಆಫ್ರಿಕಾದಲ್ಲಿ 7 ವಿಕೆಟ್ ಪಡೆದ 2ನೇ ಟೀಮ್ ಇಂಡಿಯಾ ಬೌಲರ್ ಎಂಬ ದಾಖಲೆಯನ್ನೂ ಕೂಡ ಶಾರ್ದೂಲ್ ಠಾಕೂರ್ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2011 ರಲ್ಲಿ ಹರ್ಭಜನ್ ಸಿಂಗ್ ಕೇಪ್​ಟೌನ್​ನಲ್ಲಿ 7 ವಿಕೆಟ್ ಕಬಳಿಸಿದ್ದರು.

ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾದ ಮೂರನೇ ಬೌಲರ್ ಎಂಬ ದಾಖಲೆ ಕೂಡ ಶಾರ್ದೂಲ್ ಠಾಕೂರ್ ಪಾಲಾಗಿದೆ. ಈ ಹಿಂದೆ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್ ಈ ಸಾಧನೆ ಮಾಡಿದ್ದರು.

ಇನ್ನು ವಾಂಡರರರ್ಸ್​ ಮೈದಾನದಲ್ಲಿ ಅತ್ಯುತ್ತಮ ಬೌಲಿಂಗ್ ಫಿಗರ್ ಎಂಬ ದಾಖಲೆಯನ್ನು ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ವೇಗಿ ಜೊತೆ ಹಂಚಿಕೊಂಡಿದ್ದಾರೆ. 2005 ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವೇಗಿ ಮ್ಯಾಥ್ಯೂ ಹೊಗಾರ್ಡ್​ 61 ರನ್​ ನೀಡಿ 7 ವಿಕೆಟ್ ಪಡೆದಿದ್ದರು. ಇದೀಗ ಶಾರ್ದೂಲ್ ಠಾಕೂರ್ ಕೂಡ 61 ಕ್ಕೆ 7 ವಿಕೆಟ್ ಉರುಳಿಸಿ 16 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ.

ಸಂಕ್ಷಿಪ್ತ ಸ್ಕೋರ್ ವಿವರ:
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್​- 229
ಭಾರತ ಮೊದಲ ಇನಿಂಗ್ಸ್​- 202
ಭಾರತ 2ನೇ ಇನಿಂಗ್ಸ್​- 74/2 (18)

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(SA Vs IND: Shardul Thakur Enters Record Books With Seven-wicket Haul)