
ಭಾರತ ಎ ಹಾಗೂ ಶ್ರೀಲಂಕಾ ಎ ( India A vs Sri Lanka A) ತಂಡಗಳ ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ಎ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudharsan) ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಇದಕ್ಕೂ ಮುಂಚೆ ನಡೆದಿದ್ದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಸುದರ್ಶನ್ ಶತಕದ ಇನ್ನಿಂಗ್ಸ್ ಆಡಿದ್ದರು. ಇದೀಗ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ 166 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಸಾಯಿ ಸುದರ್ಶನ್ ಅವರ ಸತತ ಎರಡನೇ ಶತಕವಾಗಿದೆ. ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಸಾಯಿ 132 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
ಸಾಯಿ ಸುದರ್ಶನ್ ಐಪಿಎಲ್‌ನಿಂದಲೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ತಮ್ಮ ಕೊನೆಯ 11 ಪಂದ್ಯಗಳ ಒಂಬತ್ತು ಪಂದ್ಯಗಳಲ್ಲಿ ಎರಡು ಶತಕಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಸ್ಕೋರ್‌ಗಳನ್ನು ದಾಖಲಿಸಿದ್ದಾರೆ. ಸಾಯಿ ಸುದರ್ಶನ್ ಅವರನ್ನು ಸಾಮಾನ್ಯವಾಗಿ ಉತ್ತಮ ವೈಟ್-ಬಾಲ್ ಕ್ರಿಕೆಟಿಗ ಎಂದು ಪರಿಗಣಿಸಲಾಗುತ್ತದೆ, ಆದರೆ ಅವರು ಈಗ ರೆಡ್-ಬಾಲ್ ಕ್ರಿಕೆಟ್‌ನಲ್ಲೂ ತಮ್ಮ ಪರಾಕ್ರಮವನ್ನು ತೋರಿಸುತ್ತಿದ್ದಾರೆ. ಇತ್ತೀಚಿನ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೂ ಸಾಯಿ ಸುದರ್ಶನ್ 81 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈಗ, ಅವರು ಶ್ರೀಲಂಕಾ ಪ್ರವಾಸದಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದಾರೆ.
ಸಾಯಿ ಸುದರ್ಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 10 ಶತಕಗಳನ್ನು ಸಿಡಿಸಿದ್ದು, ಸುಮಾರು 3,000 ಪ್ರಥಮ ದರ್ಜೆ ರನ್‌ಗಳನ್ನು ಕಲೆಹಾಕಿದ್ದಾರೆ. ಆದಾಗ್ಯೂ, ಅವರು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷವಾಗಿ ಉತ್ತಮ ಪ್ರದರ್ಶನ ನೀಡಿಲ್ಲ. ಆಡಿರುವ ಏಳು ಪಂದ್ಯಗಳಲ್ಲಿ 31.91 ರ ಸರಾಸರಿಯಲ್ಲಿ 383 ರನ್‌ಗಳನ್ನು ಗಳಿಸಿದ್ದಾರೆ. ಆದಾಗ್ಯೂ ಆಯ್ಕೆ ಮಂಡಳಿ ಅವರ ಮೇಲೆ ಭರವಸೆಗಳನ್ನು ಇಟ್ಟಿದ್ದು, ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಸಿಗುವ ಕಾಲ ದೂರವಿಲ್ಲ ಎನ್ನಬಹುದು.
IND vs SL: ಟಿ20 ಸರಣಿ ರದ್ದು; ಭಾರತ- ಲಂಕಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಎ ತಂಡ ಮೊದಲ ಇನ್ನಿಂಗ್ಸ್ನಲ್ಲಿ 366 ರನ್ ಕಲೆಹಾಕಿತು. ತಂಡದ ಪರ ನಾಯಕ ಅರಿಚಿಗೆ ಶತಕದ ಇನ್ನಿಂಗ್ಸ್ ಆಡಿದರು. ಇತ್ತ ಟೀಂ ಇಂಡಿಯಾ ಪರ ಗುರ್ನೂರ್ ಬ್ರಾರ್ 77 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರೆ, ಆಫ್-ಸ್ಪಿನ್ನರ್ ಸರಾಂಶ್ ಜೈನ್ 92 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು.