ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಇತ್ತೀಚೆಗೆ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಹೊಗಳಿದ್ದರು. ಸೂರ್ಯಕುಮಾರ್ ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್‌ನಂತೆ (AB de Villiers) ಬ್ಯಾಟ್ ಬೀಸುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಹೇಳಿಕೆ ನೀಡಿದ್ದರು. ಆದರೆ ಪಾಂಟಿಂಗ್ ಹೊಗಳಿಕೆಯನ್ನು ತಡೆದುಕೊಳ್ಳಲಾಗದ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್, ಆಸೀಸ್ ಮಾಜಿ ನಾಯಕನ ಕಾಲೆಳೆದಿದ್ದಾರೆ. ಸೂರ್ಯಕುಮಾರ್ ಪ್ರಸ್ತುತ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಏಷ್ಯಾಕಪ್ ಆಗಸ್ಟ್ 27 ರಿಂದ ಆರಂಭವಾಗುತ್ತಿದ್ದು, ಸೂರ್ಯ ಕುಮಾರ್ ಯಾದವ್ ಯಾವ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಪಾಂಟಿಂಗ್, ಸೂರ್ಯ ಕುಮಾರ್ ಅವರನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್‌ಗೆ ಹೋಲಿಸಿದ್ದರು.
ಡಿವಿಲಿಯರ್ಸ್‌ಗೆ ಸರಿಸಾಟಿ ಯಾರೂ ಇಲ್ಲ
ಸೂರ್ಯಕುಮಾರ್ ಯಾದವ್ರನ್ನು ಡಿವಿಲಿಯರ್ಸ್ ಜೊತೆಗೆ ಪಾಂಟಿಂಗ್ ಮಾಡಿದ ಹೋಲಿಕೆಯನ್ನು ಇಷ್ಟಪಡದ ಪಾಕ್ ಕ್ರಿಕೆಟರ್ ಸಲ್ಮಾನ್ ಬಟ್, ವಿಶ್ವ ಕ್ರಿಕೆಟ್‌ನಲ್ಲಿ ಡಿವಿಲಿಯರ್ಸ್‌ಗೆ ಸರಿಸಾಟಿ ಯಾರೂ ಇಲ್ಲ ಎಂದು ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಡಿವಿಲಿಯರ್ಸ್‌ಗೆ ಹೋಲಿಸುವ ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ಕಾಯಬೇಕಿತ್ತು ಎಂದು ಬಟ್ ಹೇಳಿಕೊಂಡಿದ್ದಾರೆ.
ಸಲ್ಮಾನ್, ಸೂರ್ಯಕುಮಾರ್ನನ್ನು ಡಿವಿಲಿಯರ್ಸ್‌ಗೆ ಹೋಲಿಸಿದ್ದು ಸ್ವಲ್ಪ ಅತಿಯಾಯಿತು ಎಂದೆನಿಸುತ್ತದೆ. ಸೂರ್ಯಕುಮಾರ್ ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದ್ದಾರೆ. ಅವರು ಪ್ರತಿಭಾವಂತರಾಗಿದ್ದು, ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಎಬಿ ಡಿವಿಲಿಯರ್ಸ್ ಜೊತೆ ಅವರ ಹೋಲಿಕೆ ಎಷ್ಟರ ಮಟ್ಟಿಗೆ ಸರಿ. ಪಾಂಟಿಂಗ್ ಸ್ವಲ್ಪ ಸಮಯ ಕಾಯಬೇಕಾಗಿತ್ತು. ಅಲ್ಲದೆ ಸೂರ್ಯಕುಮಾರ್ ಇನ್ನೂ ದೊಡ್ಡ ಟೂರ್ನಿ ಆಡಬೇಕಿದೆ. ಡಿವಿಲಿಯರ್ಸ್ ಅವರಂತೆ ಯಾರೂ ಆಡಿಲ್ಲ ಎಂಬುದು ಸತ್ಯ ಎಂದಿದ್ದಾರೆ. ಜೊತೆಗೆ ಪಾಂಟಿಂಗ್, ಸೂರ್ಯನನ್ನು ಡಿವಿಲಿಯರ್ಸ್‌ಗೆ ಹೋಲಿಸುವ ಬದಲು ವಿವಿಯನ್ ರಿಚರ್ಡ್ಸ್‌ಗೆ ಹೋಲಿಸಬಹುದಿತ್ತು ಎಂದು ಸಲ್ಮಾನ್ ಬಟ್ ಪಾಂಟಿಂಗ್ ಕಾಲೆಳೆದಿದ್ದಾರೆ.
ಆಧುನಿಕ ಕಾಲದಲ್ಲಿ ಯಾವುದೇ ಆಟಗಾರ ಡಿವಿಲಿಯರ್ಸ್ರಂತೆ ಬ್ಯಾಟ್ ಬೀಸುವುದನ್ನು ನಾನು ನೋಡಿಲ್ಲ. ಡಿವಿಲಿಯರ್ಸ್‌ಗೆ ಹೋಲಿಕೆ ಮಾಡಬೇಕಾದರೆ ತಂಡದಲ್ಲಿ ನಿಮ್ಮ ಪ್ರಭಾವ ಹೇಗಿರಬೇಕೆಂದರೆ, ನಿಮ್ಮನ್ನು ಬೇಗನೆ ಔಟ್ ಮಾಡದಿದ್ದರೆ ನಮಗೆ ಗೆಲುವಿಲ್ಲ ಎಂಬುದನ್ನು ಎದುರಾಳಿ ತಂಡ ತಿಳಿದಿರಬೇಕು. ಅಥವಾ ನೀವು ಪಂದ್ಯದ ದಿಕ್ಕನನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಹೀಗಾಗಿ ಇತ್ತೀಚಿನ ಇತಿಹಾಸದಲ್ಲಿ ಡಿವಿಲಿಯರ್ಸ್ ತರ ಯಾರೂ ಆಡಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬಟ್ ಹೇಳಿಕೊಂಡಿದ್ದಾರೆ.
ಪಾಂಟಿಂಗ್ ಹೇಳಿದ್ದೇನು?
ಆಸ್ಟ್ರೇಲಿಯಾಕ್ಕೆ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಪಾಂಟಿಂಗ್, ಐಸಿಸಿ ವಿಮರ್ಶೆಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದ್ದರು. ಸೂರ್ಯ ಮೈದಾನದಲ್ಲಿ 360 ಡಿಗ್ರಿ ಕ್ರಿಕೆಟ್ ಆಡುತ್ತಾನೆ. ಸೂರ್ಯನ ಆಟ ಎಬಿ ಡಿವಿಲಿಯರ್ಸ್ ಆಟವನ್ನು ಹೋಲುತ್ತದೆ. ಸೂರ್ಯನ ಲ್ಯಾಪ್ ಶಾಟ್, ಲೇಟ್ ಕಟರ್, ಕೀಪರ್ ತಲೆಯ ಮೇಲೆ ಹೊಡೆಯುವುದು, ಸ್ವಿಪ್ ಶಾಟ್ಗಳು, ಡಿವಿಯರ್ಸ್ರನ್ನು ನೆನಪಿಸುತ್ತವೆ ಎಂದಿದ್ದರು.