ಏಷ್ಯಾಕಪ್ ಪ್ರಶಸ್ತಿ ಸಮಾರಂಭದಲ್ಲಿ ‘ಟ್ವಿಸ್ಟ್’ ನೀಡಿದ ಬುಮ್ರಾ ಪತ್ನಿ ಸಂಜನಾ ಗಣೇಸನ್

Asia Cup 2025 Final India vs Pakistan: ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್​ಗಳಲ್ಲಿ 146 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ.

ಏಷ್ಯಾಕಪ್ ಪ್ರಶಸ್ತಿ ಸಮಾರಂಭದಲ್ಲಿ ಟ್ವಿಸ್ಟ್ ನೀಡಿದ ಬುಮ್ರಾ ಪತ್ನಿ ಸಂಜನಾ ಗಣೇಸನ್
Sanjana - Team India

Updated on: Sep 30, 2025 | 8:43 AM

ಏಷ್ಯಾಕಪ್ ಟೂರ್ನಿಯ 17ನೇ ಆವೃತ್ತಿಗೆ ತೆರೆಬಿದ್ದಿದೆ. ಈ ಬಾರಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬಳಿಕ ನಡೆದ ಸಮಾರೋಪ ಸಮಾರಂಭವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಅದರಲ್ಲೂ ಪಂದ್ಯ ಮುಗಿದು 45 ನಿಮಿಷಗಳಾದರೂ ಪ್ರಶಸ್ತಿಯನ್ನು ನೀಡಿರಲಿಲ್ಲ.

ಇದಕ್ಕೆ ಮುಖ್ಯ ಕಾರಣ ಮೊಹ್ಸಿನ್ ನಖ್ವಿ ಅವರ ಹಠಮಾರಿತನ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ/ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲ್ಲ ಎಂಬುದನ್ನು ಟೀಮ್ ಇಂಡಿಯಾ ಆಟಗಾರರು ಖಚಿತಪಡಿಸಿದ್ದರು. ಅಲ್ಲದೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿ ಹಸ್ತಾಂತರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಒಪ್ಪಿರಲಿಲ್ಲ. ಇದರಿಂದ ಪ್ರಶಸ್ತಿ ಸಮಾರಂಭವು ವಿಳಂಬವಾಯಿತು.

ಆದರೆ ಅತ್ತ ತನ್ನಿಂದ ಭಾರತೀಯ ಆಟಗಾರರು ಟ್ರೋಫಿ ಸ್ವೀಕರಿಸಲ್ಲ ಎಂಬುದು ದೃಢವಾಗುತ್ತಿದ್ದಂತೆ ಮೊಹ್ಸಿನ್ ನಖ್ವಿ ಏಷ್ಯಾಕಪ್ ಹಾಗೂ ಭಾರತೀಯರ ಮೆಡಲ್​ಗಳನ್ನು ಹೊಟೇಲ್​ಗೆ ಕೊಂಡೊಯ್ಯುವಂತೆ ಸೂಚಿಸಿದರು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೇ ಸಂಭ್ರಮಿಸಿದರು.

ಇದರ ನಡುವೆ ಟೀಮ್ ಇಂಡಿಯಾ ಆಟಗಾರ ಅಭಿಷೇಕ್ ಶರ್ಮಾ ಪ್ಲೇಯರ್ ಆಫ್​ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದರೆ, ಶಿವಂ ದುಬೆ ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಹೀಗೆ ಸಿಕ್ಕ ಪ್ರಶಸ್ತಿಯ ಚೆಕ್ ಕಾರ್ಡ್ ಅನ್ನು ದುಬೆ ಮೈದಾನದಲ್ಲೇ ಎಸೆದು ಹೋಗಿದ್ದರು.

ಇದನ್ನು ಎತ್ತಿಕೊಂಡ ಸೋನಿ ಸ್ಪೋರ್ಟ್ಸ್ ತಂಡದ ನಿರೂಪಕರು ವಿಶೇಷ ಮಿಮಿಕ್ರಿ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡಿದ್ದಾರೆ. ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್ ತಂಡದ ವ್ಯಕ್ತಿಯೊಬ್ಬರು ರವಿ ಶಾಸ್ತ್ರಿ ಶೈಲಿಯಲ್ಲಿ ಪ್ರೆಸೆಂಟೇಷನ್ ಮಾಡಿದ್ದು, ಈ ಮೂಲಕ ಸಂಜನಾ ಗಣೇಸನ್ ಕೈಯಿಂದ ಮತ್ತೋರ್ವ ನಿರೂಪಕಿ ತನ್ವಿ ಶಾಗೆ ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೀಡಿದ್ದಾರೆ.

ಪ್ರಶಸ್ತಿ ಸಮಾರಂಭದ ಬಳಿಕ ಮಾಡಲಾದ ಈ ತಮಾಷೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರವಿ ಶಾಸ್ತ್ರಿಯ ಧ್ವನಿಯನ್ನು ಅನುಕರಿಸಿದ ವ್ಯಕ್ತಿಯ ಪ್ರತಿಭೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಜಸ್​ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಸನ್ ವಿಡಿಯೋ:

ಜಯಭೇರಿ ಬಾರಿಸಿದ ಭಾರತ:

ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಒಂದೇ ಒಂದು ಪಂದ್ಯ ಸೋತಿಲ್ಲ. ಆಡಿದ 7 ಮ್ಯಾಚ್​ಗಳಲ್ಲೂ ಗೆಲ್ಲುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 146 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಭಾರತೀಯ ಪಡೆ 9ನೇ ಬಾರಿ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿದೆ.