ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ವೇಳೆ ಅತೀ ಚರ್ಚೆಯಲ್ಲಿದ್ದ ಆಟಗಾರರಲ್ಲಿ ರಿಯಾನ್ ಪರಾಗ್ ಒಬ್ಬರು. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಪರಾಗ್ ಮಿಂಚಿದ್ದು ಮಾತ್ರ ಫೀಲ್ಡಿಂಗ್ ಮೂಲಕ. ಆದರೆ ಯುವ ಆಟಗಾರನ ವರ್ತನೆ ಮಾತ್ರ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಏಕೆಂದರೆ ಈ ಬಾರಿ 17 ಪಂದ್ಯಗಳನ್ನು ಆಡಿದ್ದ ಪರಾಗ್ ಕಲೆಹಾಕಿದ್ದು ಕೇವಲ 183 ರನ್ ಮಾತ್ರ. ಇನ್ನು ಒಟ್ಟಾರೆ ಐಪಿಎಲ್ ಕೆರಿಯರ್ನ ಅಂಕಿ ಅಂಶಗಳನ್ನು ಗಮನಿಸಿದರೆ, ಆಡಿದ 47 ಪಂದ್ಯಗಳಿಂದ 522 ರನ್ ಗಳಿಸಿದ್ದಾರೆ. ಹೀಗಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡವು ರಿಯಾನ್ ಪರಾಗ್ಗೆ ಸತತ ಚಾನ್ಸ್ ನೀಡುತ್ತಿರುವ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು.
ಅದರಲ್ಲೂ ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಪರಾಗ್ ಅವರ ಪ್ರದರ್ಶನದ ಬಗ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ. ಇಡೀ ಸೀಸನ್ ಉದ್ದಕ್ಕೂ ರಿಯಾನ್ ಪರಾಗ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಇದಾಗ್ಯೂ ಆತನ ಎಲ್ಲಾ ಪಂದ್ಯಗಳಲ್ಲೂ ಅವಕಾಶ ಪಡೆದಿದ್ದಾರೆ ಎಂದು ಸಂಜಯ್ ಮಂಜ್ರೇಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
‘ನಾವು ಕಳೆದ ಎರಡು ಐಪಿಎಲ್ ಸೀಸನ್‌ಗಳನ್ನು ನೋಡಿದರೆ, ರಿಯಾನ್ ಪರಾಗ್ ಅವರ ಸರಾಸರಿ ಕೇವಲ 11 ಇದೆ. ಅವರ ಸ್ಟ್ರೈಕ್ ರೇಟ್ ಕೂಡ 110 ರ ಆಸುಪಾಸಿನಲ್ಲಿದೆ. ಇದರ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ಅವರನ್ನು ಹರಾಜಿನಲ್ಲಿ 3.8 ಕೋಟಿ ರೂ.ಗೆ ಖರೀದಿಸಿದೆ. ಕಳೆದ ಮೂರು ವರ್ಷಗಳಲ್ಲಿ ನಮಗೆ ಕಾಣದದ್ದೇನು ರಿಯಾನ್ ಪರಾಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ಕಂಡಿದೆಯೋ..ದೇವರೇ ಬಲ್ಲ ಎಂದು ಸಂಜಯ್ ಮಂಜ್ರೇಕರ್ ನೇರವಾಗಿ ತಂಡದ ಆಯ್ಕೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನನ್ನ ಪ್ರಕಾರ ರಿಯಾನ್ ಪರಾಗ್ ಅವರನ್ನು ಹೊರತುಪಡಿಸಿದರೆ, ರಾಜಸ್ಥಾನ್ ರಾಯಲ್ಸ್ ತಂಡವು ಈ ಬಾರಿ ಉತ್ತಮ ತಂಡವಾಗಿತ್ತು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಇನ್ನು ರಿಯಾನ್ ಪರಾಗ್ ಈ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತಮ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಇದಾಗ್ಯೂ ಯುವ ಆಟಗಾರನ ವರ್ತನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅದರಲ್ಲೂ ಓವರ್ ಅಟಿಟ್ಯೂಡ್ ಎಂಬ ಹಣೆಪಟ್ಟಿಯೊಂದು ಪರಾಗ್ಗೆ ಅಂಟಿಕೊಂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರೂ, ಅಂತಹದ್ದೇ ವರ್ತನೆಗಳೊಂದಿಗೆ ರಿಯಾನ್ ಪರಾಗ್ ಮೈದಾನದಲ್ಲಿ ಕಾಣಿಸಿಕೊಂಡಿರುವುದು ಅನೇಕ ಕ್ರಿಕೆಟ್ ಪ್ರೇಮಿಗಳಿಗೆ ಈತನ ಮೇಲೆ ಕೆಟ್ಟ ಭಾವನೆ ಮೂಡಲು ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜಸ್ಥಾನ್ ರಾಯಲ್ಸ್ (RR): ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ತೇಜಸ್ ಬರೋಕಾ, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಕುಲ್ದ್ರುವ್ ಜುರೆಲ್ , ಶುಭಂ ಗರ್ವಾಲ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವಾನ್ ಡೆರ್ ಡುಸ್ಸೆನ್, ಜೇಮ್ಸ್ ನೀಶಮ್, ಡೇರಿಲ್ ಮಿಚೆಲ್, ಕರುಣ್ ನಾಯರ್, ಒಬೆಡ್ ಮೆಕಾಯ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Thu, 2 June 22