ಬಹುನಿರೀಕ್ಷಿತ ಏಷ್ಯಾಕಪ್ಗಾಗಿ ಭಾರತ ತಂಡವನ್ನು (India Squad) ಪ್ರಕಟಿಸಲಾಗಿದೆ. 17 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಇನ್ನು ಯುವ ಎಡಗೈ ದಾಂಡಿಗ ತಿಲಕ್ ವರ್ಮಾ ಇದೇ ಮೊದಲ ಬಾರಿಗೆ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ತಿಲಕ್ ವರ್ಮಾ ತಂಡದಲ್ಲಿ ಸ್ಥಾನ ಪಡೆದರೆ ಅತ್ತ ಸಂಜು ಸ್ಯಾಮ್ಸನ್ 17 ಸದಸ್ಯರ ತಂಡದಿಂದ ಹೊರಬಿದ್ದಿದ್ದಾರೆ. ಇದಾಗ್ಯೂ ಸ್ಯಾಮ್ಸನ್ ಅವರನ್ನು ಟೀಮ್ ಇಂಡಿಯಾ ಬಳಗದಲ್ಲಿರಿಸಲಾಗಿದೆ ಎಂಬುದು ವಿಶೇಷ.
ಏಷ್ಯಾಕಪ್ಗಾಗಿ ಶ್ರೀಲಂಕಾಗೆ ತೆರಳಿರುವ ಟೀಮ್ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮೀಸಲು ಆಟಗಾರನಾಗಿ ಎಂಬುದಷ್ಟೇ ಇಲ್ಲಿ ವ್ಯತ್ಯಾಸ. ಅಂದರೆ ತಂಡದಿಂದ ಯಾವುದಾದರು ಬ್ಯಾಟರ್ ಹೊರಗುಳಿದರೆ ಸ್ಯಾಮ್ಸನ್ಗೆ ಚಾನ್ಸ್ ಸಿಗಬಹುದು.
ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿರುವ ತಂಡದಲ್ಲಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ವಿಕೆಟ್ ಕೀಪರ್ಗಳಾಗಿ ಸ್ಥಾನ ಪಡೆದಿದ್ದಾರೆ. ಇತ್ತ ಮೂರನೇ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಂಜು ಸ್ಯಾಮ್ಸನ್.
ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್…ಇವರಿಬ್ಬರಲ್ಲಿ ಯಾರಾದರೂ ಗಾಯಗೊಂಡು ತಂಡದಿಂದ ಹೊರಗುಳಿದರೆ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ 17 ಸದಸ್ಯರ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಹೀಗಾಗಿಯೇ ಏಕೈಕ ಮೀಸಲು ಆಟಗಾರನಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಜು ಸ್ಯಾಮ್ಸನ್ ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು. ಇದುವರೆಗೆ 13 ಏಕದಿನ ಪಂದ್ಯಗಳನ್ನಾಡಿರುವ ಕೇರಳದ ಕ್ರಿಕೆಟಿಗ 55.71 ಸರಾಸರಿಯಲ್ಲಿ ಒಟ್ಟು 375 ರನ್ ಕಲೆಹಾಕಿದ್ದಾರೆ. ಈ ವೇಳೆ 3 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ.
ಆದರೆ ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸ್ಯಾಮ್ಸನ್ ವಿಫಲರಾಗಿದ್ದರು. ಇದಾಗ್ಯೂ ಇದೀಗ ಏಷ್ಯಾಕಪ್ಗೆ ಮೀಸಲು ಆಟಗಾರನಾಗಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾಕಪ್ಗಾಗಿ ಆಯ್ಕೆಯಾದ ಭಾರತ ತಂಡ ಈ ಕೆಳಗಿನಂತಿದೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ)
ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಪಾಕ್ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ತಂಡ ನೇಪಾಳ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.