ನ್ಯೂಜಿಲೆಂಡ್-ಸ್ಕಾಟ್ಲೆಂಡ್ ನಡುವಣ ಟಿ20 ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಯುವ ಆಟಗಾರ ಫಿನ್ ಅಲೆನ್ ಅಬ್ಬರಿಸಿದ್ದಾರೆ. ಆತಿಥೇಯ ಸ್ಕಾಟ್ಲೆಂಡ್ನ ಎಡಿನ್ಬರ್ಗ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಫಿನ್ ಅಲೆನ್ ಬಿರುಸಿನ ಆರಂಭ ಒದಗಿಸಿದ್ದರು. ಮಾರ್ಟಿನ್ ಗಪ್ಟಿಲ್ ಜೊತೆಗೂಡಿ ಇನಿಂಗ್ಸ್ ಆರಂಭಿಸಿದ ಫಿನ್ ಅಲೆನ್ ಮೊದಲ ವಿಕೆಟ್‌ಗೆ 85 ರನ್‌ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 40 ರನ್ಗಳಿಸಿದ್ದ ಗಪ್ಟಿಲ್ ಔಟಾದರು. ಇದಾಗ್ಯೂ ಅಲೆನ್ ಅಬ್ಬರ ಮುಂದುವರೆದಿತ್ತು.
56 ಎಸೆತಗಳನ್ನು ಎದುರಿಸಿದ ಅಲೆನ್ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 101 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಈ ಮೂಲಕ ವೃತ್ತಿಜೀವನದ ಮೊದಲ ಶತಕ ಸಿಡಿಸಿ ಮಿಂಚಿದರು. ಫಿನ್ ಅಲೆನ್ ಅವರ ಈ ಸ್ಪೋಟಕ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು 5 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಡ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.
ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ ಕ್ಯಾಲಮ್ ಮೆಕ್ಲಿಯೋಡ್ 33 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಹಾಗೆಯೆ ಕ್ರಿಸ್ ಗ್ರೀವ್ಸ್ (31) ಮತ್ತು ಆರಂಭಿಕ ಜಾರ್ಜ್ ಮುನ್ಸಿ (28) ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇತ್ತ ನ್ಯೂಜಿಲೆಂಡ್ ಪರ ಇಶ್ ಸೋಧಿ 4 ಓವರ್ ಗಳಲ್ಲಿ 28 ರನ್ ನೀಡಿ ಕೇವಲ 4 ವಿಕೆಟ್ ಕಬಳಿಸಿ ಮಿಂಚಿದ್ದರು.
ಸ್ಪೋಟಕ ಶತಕ ಸಿಡಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡ ಫಿನ್ ಅಲೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಐಪಿಎಲ್ನಲ್ಲಿ ಕಳೆದ ಎರಡು ಸೀಸನ್ಗಳಿಂದ ಫಿನ್ ಅಲೆನ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಅವರಿಗೆ ಆರ್ಸಿಬಿ ಪರ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ ಎಂಬುದು ವಿಶೇಷ. ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.