Shubman Gill: ಬರೋಬ್ಬರಿ 104 ಮೀಟರ್ ಸಿಕ್ಸ್: ಶುಭ್ಮನ್ ಗಿಲ್ ಸ್ಫೋಟಕ ಹೊಡೆತಕ್ಕೆ ಚೆಂಡು ಎಲ್ಲೋಯ್ತು ನೋಡಿ
India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಎರಡು ರನ್ಗಳ ಅಂತರದಿಂದ ಶತಕವನ್ನು ಮಿಸ್ ಮಾಡಿಕೊಂಡರು. ಇದರಲ್ಲಿ ಗಿಲ್ ಸಿಡಿಸಿದ ಒಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ.
ಸುಮಾರು ಒಂದವರೆ ವರ್ಷಗಳ ಬಳಿಕ ಭಾರತ ತಂಡದ ಪರ ಏಕದಿನ ಕ್ರಿಕೆಟ್ನಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ (Shubman Gill) ಅಮೋಘ ಪ್ರದರ್ಶನ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ (Shikhar Dhawan) ಜೊತೆ ಇನ್ನಿಂಗ್ಸ್ ಆರಂಭಿಸಿದ ಗಿಲ್ ತಮ್ಮ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಆಡಿದ ಮೂರೂ ಪಂದ್ಯಗಳಲ್ಲಿ 64, 43, 98 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಅದರಲ್ಲೂ ಅಂತಿಮ ಪಂದ್ಯದಲ್ಲಿ 98 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಇದಕ್ಕಾಗಿ ಸರಣಿಶ್ರೇಷ್ಠ ಮತ್ತು ಪಂದ್ಯಶ್ರೇಷ್ಠ ಎರಡೂ ಪ್ರಶಸ್ತಿಯನ್ನು ಬಾಜಿಕೊಂಡಿದ್ದಾರೆ. ಈ ಪ್ರದರ್ಶನದಿಂದ ಗಿಲ್ ಮುಂದಿನ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಟೀಮ್ ಇಂಡಿಯಾದ (Team India) ಬ್ಯಾಕಪ್ ಓಪನರ್ಗಳಾದ ಇಶಾನ್ ಕಿಶನ್ ಹಾಗೂ ರುತುರಾಜ್ ಗಾಯಕ್ವಾಡ್ ಸ್ಥಾನಕ್ಕೂ ಕುತ್ತು ಬಂದಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗಿಲ್ ಎರಡು ರನ್ಗಳ ಅಂತರದಿಂದ ಶತಕವನ್ನು ಮಿಸ್ ಮಾಡಿಕೊಂಡರು. ಗಿಲ್ ಆಟದಲ್ಲಿ ಎರಡು ಮನಮೋಹಕ ಸಿಕ್ಸರ್ಗಳಿದ್ದವು. ಅದರಲ್ಲೂ ಒಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. 15ನೇ ಓವರ್ನ ಹೇಡನ್ ವಾಲ್ಶ್ ಬೌಲಿಂಗ್ನಲ್ಲಿ ಮುಂದೆ ಬಂದು ಲಾಂಗ್ ಆನ್ನಲ್ಲಿ ಚೆಂಡನ್ನು ಸಿಕ್ಸರ್ಗೆಂದು ಅಟ್ಟಿದರು. ಗಿಲ್ ಹೊಡೆದ ರಭಸಕ್ಕೆ ಚೆಂಡು ಬರೋಬ್ಬರಿ 104 ಮೀಟರ್ ಹೋಗಿದ್ದು ಮಾತ್ರಬಲ್ಲದೆ ಸ್ಟೇಡಿಯಂನಿಂದಲೇ ಹೊರಗಡೆ ಬಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
That’s out of the park! pic.twitter.com/oITuoQFj3s
— gautam (@itsgautamm) July 27, 2022
ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ಗಿಲ್, “ಶತಕ ಗಳಿಸುವ ಆಸೆ ಇತ್ತು. ಆದರೆ, ಆಟಕ್ಕೆ ಮಳೆ ಅಡ್ಡಿಸಿತು, ಇದು ನನ್ನ ನಿಯಂತ್ರಣದಲ್ಲಿ ಇರಲಿಲ್ಲ ನಿಜ. ಇದರಿಂದ ತುಂಬಾ ಬೇಸರವಾಗಿದೆ. ಇನ್ನೊಂದು ಓವರ್ ಇರುತ್ತಿದ್ದರೆ ನಾನು ಶತಕ ಗಳಿಸುತ್ತಿದ್ದೆ. ಮೊದಲ ಎರಡು ಏಕದಿನ ಪಂದ್ಯದಲ್ಲೂ ಔಟಾಗಿದ್ದು ನನಗೆ ಸಮಾದಾನ ನೀಡಲಿಲ್ಲ. ನಾನು ಬಾಲ್ಗೆ ತಕ್ಕಂತೆ ಬ್ಯಾಟ್ ಬೀಸಲು ಯತ್ನಿಸುತ್ತೇನೆ. ಮೂರು ಪಂದ್ಯಗಳಲ್ಲಿ ವಿಕೆಟ್ ಅದ್ಭುತವಾಗಿತ್ತು. ನನ್ನ ಪ್ರದರ್ಶನದ ಬಗೆಗ ನನಗೆ ಹೆಮ್ಮೆಯಿದೆ,” ಎಂದು ಗಿಲ್ ಹೇಳಿದ್ದಾರೆ.
ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ತೃತೀಯ ಏಕದಿನ ಪಂದ್ಯದಲ್ಲೂ ಭಾರತ ಭರ್ಜರಿ ಪ್ರದರ್ಶನ ತೋರಿ ಗೆದ್ದು ಬೀಗಿತು. ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿದ ಟೀಮ್ ಇಂಡಿಯಾ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ ಬರೋಬ್ಬರಿ 119 ರನ್ಗಳ ಅಮೋಘ ಜಯ ಸಾಧಿಸಿತು.
ಈ ಮೂಲಕ ಮೂರೂ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಧವನ್ ಪಡೆ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿದ ಸಾಧನೆ ಗೈದಿದೆ. ಶುಭ್ಮನ್ ಗಿಲ್, ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ನಲ್ಲಿ ಮಿಂಚಿದರೆ, ಬೌಲಿಂಗ್ನಲ್ಲಿ ಯುಜ್ವೇಂದ್ರ ಚಹಲ್, ಸಿರಾಜ್ ಹಾಗೂ ಶಾರ್ದೂಲ್ ಮಾರಕ ದಾಳಿ ಸಂಘಟಿಸಿದರು. ಪಂದ್ಯದ ನಡುವೆ ಮಳೆಯರಾಯನ ಆಗಮನವಾದ ಕಾರಣ ಓವರ್ ಕಡಿತಗೊಳಿಸಿ ಆಡಿಸಲಾಯಿತು.
Published On - 11:19 am, Thu, 28 July 22