LPL 2024: ಹ್ಯಾಟ್ರಿಕ್ ವಿಕೆಟ್: ದಾಖಲೆ ಬರೆದ ಶಾದಾಬ್ ಖಾನ್

|

Updated on: Jul 03, 2024 | 2:33 PM

LPL 2024: ಲಂಕಾ ಪ್ರೀಮಿಯರ್ ಲೀಗ್​ನ 3ನೇ ಪಂದ್ಯದಲ್ಲಿ ಶಾದಾಬ್ ಖಾನ್ 4 ಓವರ್​ಗಳಲ್ಲಿ ಕೇವಲ 22 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈ ನಾಲ್ಕು ವಿಕೆಟ್​ಗಳಲ್ಲಿ ಮೂರು ವಿಕೆಟ್​ಗಳು ಮೂಡಿಬಂದಿರುವುದು ಹ್ಯಾಟ್ರಿಕ್ ಮೂಲಕ ಎಂಬುದು ವಿಶೇಷ. ಈ ಮೂಲಕ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.

LPL 2024: ಹ್ಯಾಟ್ರಿಕ್ ವಿಕೆಟ್: ದಾಖಲೆ ಬರೆದ ಶಾದಾಬ್ ಖಾನ್
Shadab Khan
Follow us on

ಶ್ರಿಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ (LPL 2024) ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಶಾದಾಬ್ ಖಾನ್ (Shadab Khan) ವಿಶೇಷ ದಾಖಲೆ ಬರೆದಿದ್ದಾರೆ. ಪಲ್ಲೆಕೆಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಲಂಬೊ ಸ್ಟ್ರೈಕರ್ಸ್ ಮತ್ತು ಕ್ಯಾಂಡಿ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಕ್ಯಾಂಡಿ ಫಾಲ್ಕನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲಂಬೊ ಸ್ಟ್ರೈಕರ್ಸ್ ಪರ ವಿಕೆಟ್ ಕೀಪರ್ ಬ್ಯಾಟರ್ ಸದೀರ ಸಮರವಿಕ್ರಮ 26 ಎಸೆತಗಳಲ್ಲಿ 7 ಫೋರ್​ ಹಾಗೂ 1 ಸಿಕ್ಸ್​ನೊಂದಿಗೆ 48 ರನ್ ಬಾರಿಸಿದರು.

ಇನ್ನು ಅಂತಿಮ ಓವರ್​ಗಳ ವೇಳೆ ಶಾದಾಬ್ ಖಾನ್ 20 ರನ್​ಗಳ ಕೊಡುಗೆ ನೀಡಿದರೆ, ಕರುಣರತ್ನೆ 25 ರನ್ ಬಾರಿಸಿದರು. ಈ ಮೂಲಕ ಕೊಲಂಬೊ ಸ್ಟ್ರೈಕರ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.

199 ರನ್​ಗಳ ಕಠಿಣ ಗುರಿ ಪಡೆದ ಕ್ಯಾಂಡಿ ಫಾಲ್ಕನ್ಸ್ ತಂಡಕ್ಕೆ ದುನಿಲ್ ವೆಲ್ಲಲಾಗೆ ಆರಂಭಿಕ ಆಘಾತ ನೀಡಿದ್ದರು. ಇದಾಗ್ಯೂ ಫಾಲ್ಕನ್ಸ್ ತಂಡವು 6 ಓವರ್​ಗಳಲ್ಲಿ 66 ರನ್ ಕಲೆಹಾಕಿತು. ಅಲ್ಲದೆ 10 ಓವರ್​ಗಳ ಮುಕ್ತಾಯದ ವೇಳೆಗೆ ತಂಡ ಮೊತ್ತ 100 ರನ್​ಗಳ ಗಡಿದಾಟಿತ್ತು.

ಆದರೆ 15ನೇ ಓವರ್​ನಲ್ಲಿ ದಾಳಿಗಿಳಿದ ಶಾದಾಬ್ ಖಾನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 4ನೇ ಎಸೆತದಲ್ಲಿ ವನಿಂದು ಹಸರಂಗ (25) ವಿಕೆಟ್ ಪಡೆದ ಶಾದಾಬ್, ಮರು ಎಸೆತದಲ್ಲೇ ಅಘಾ ಸಲ್ಮಾನ್​ (0) ರ ವಿಕೆಟ್ ಕಬಳಿಸಿದರು. ಇನ್ನು ಕೊನೆಯ ಎಸೆದಲ್ಲಿ ಪವನ್ ರಥನಾಯಕೆಗೆ (0) ಯನ್ನು ಎಲ್​ಬಿಡಬ್ಲ್ಯೂ ಮಾಡಿದರು. ಈ ಮೂಲಕ ಶಾದಾಬ್ ಖಾನ್ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಹ್ಯಾಟ್ರಿಕ್ ವಿಕೆಟ್​ಗಳ ಸಾಧನೆ ಮಾಡಿದರು.

ಈ ಹ್ಯಾಟ್ರಿಕ್​ ವಿಕೆಟ್​ನೊಂದಿಗೆ ದಿಢೀರ್ ಕುಸಿತ ಕಂಡ ಕ್ಯಾಂಡಿ ಫಾಲ್ಕನ್ಸ್ ತಂಡವು 15.5 ಓವರ್​ಗಳಲ್ಲಿ 147 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಕೊಲಂಬೊ ಸ್ಟ್ರೈಕರ್ಸ್ ತಂಡವು 51 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಶಾದಾಬ್ ಖಾನ್ ದಾಖಲೆ:

ಪಾಕಿಸ್ತಾನದ ಸ್ಪಿನ್ನರ್ ಶಾದಾಬ್ ಖಾನ್ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ವಿದೇಶಿ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಎಲ್​ಪಿಎಲ್​ನಲ್ಲಿ ಈ ಸಾಧನೆ ಮಾಡಿದ 2ನೇ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ಶಾದಾಬ್ ಖಾನ್ ಹ್ಯಾಟ್ರಿಕ್ ವಿಡಿಯೋ:

ಇದಕ್ಕೂ ಮುನ್ನ 2022 ರಲ್ಲಿ ಕೊಲಂಬೊ ಸ್ಟಾರ್ಸ್ ವಿರುದ್ಧ ವನಿಂದು ಹಸರಂಗ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. ಇದೀಗ ಕ್ಯಾಂಡಿ ಫಾಲ್ಕನ್ಸ್ ವಿರುದ್ಧ ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಉರುಳಿಸಿ ಶಾದಾಬ್, ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.