ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡು ದುಡ್ಡಿಗಾಗಿ ಅಲೆಯುತ್ತಿರುವ ಶಾಹಿದ್ ಅಫ್ರಿದಿ
BPL 2025: ಈ ಬಾರಿಯ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನ ಫೈನಲ್ನಲ್ಲಿ ಫಾರ್ಚೂನ್ ಬಾರಿಶಾಲ್ ಹಾಗೂ ಚಿತ್ತಗಾಂಗ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಅಂತಿಮ ಪಂದ್ಯದಲ್ಲಿ ಕಿಂಗ್ಸ್ ಪಡೆಯನ್ನು ಸೋಲಿಸಿ ಬಾರಿಶಾಲ್ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಇತ್ತ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿದ ಚಿತ್ತಗಾಂಗ್ ಕಿಂಗ್ಸ್ ತಂಡದ ಮೆಂಟರ್ ಆಗಿ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಕಾರ್ಯ ನಿರ್ವಹಿಸಿದ್ದರು.

ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇತ್ತೀಚೆಗೆ ಮುಗಿದ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ತಗಾಂಗ್ ಕಿಂಗ್ಸ್ ತಂಡದ ಮಾರ್ಗದರ್ಶಕ ಮತ್ತು ಬ್ರಾಂಡ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದ ಅಫ್ರಿದಿಗೆ ಇನ್ನೂ ವೇತನ ನೀಡಲಾಗಿಲ್ಲ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಕಳೆದ ಕೆಲ ದಿನಗಳಿಂದ ತಮ್ಮ ವೇತನಕ್ಕಾಗಿ ಶಾಹಿದ್ ಅಫ್ರಿದಿ ಚಿತ್ತಗಾಂಗ್ ಕಿಂಗ್ಸ್ ಫ್ರಾಂಚೈಸಿಯನ್ನು ಸಂಪರ್ಕಿಸಿದ್ದು, ಈ ವೇಳೆ ಸ್ಪಷ್ಟ ಉತ್ತರ ಕೂಡ ಸಿಕ್ಕಿಲ್ಲ. ಹೀಗಾಗಿ ಇದೀಗ ಅವರು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ದೂರು ಸಲ್ಲಿಸಿದ್ದಾರೆ.
ಚಿತ್ತಗಾಂಗ್ ಕಿಂಗ್ಸ್ ಫ್ರಾಂಚೈಸಿ ಶಾಹಿದ್ ಅಫ್ರಿದಿಯನ್ನು ಬಿಪಿಎಲ್ 2025 ರಲ್ಲಿ ಮೆಂಟರ್ ಆಗಿ ನೇಮಿಸಿಕೊಂಡಿತ್ತು. ಹೀಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು 1 ಲಕ್ಷ ಡಾಲರ್ ವೇತನದ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು.
ಅಂದರೆ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ಶಾಹಿದ್ ಅಫ್ರಿದಿಗೆ ಚಿತ್ತಗಾಂಗ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 87,33,155 ರೂ. ನೀಡಬೇಕಿತ್ತು. ಆದರೆ ಇಲ್ಲಿಯವರೆಗೆ ಅವರಿಗೆ ಆ ಮೊತ್ತವನ್ನು ನೀಡಲಾಗಿಲ್ಲ.
ಇನ್ನು ಬಿಡಿನ್ಯೂಸ್ 24 ವರದಿಯ ಪ್ರಕಾರ, ಅಫ್ರಿದಿಗೆ ಕೇವಲ 19 ಸಾವಿರ ಡಾಲರ್ (ರೂ. 16,59,368) ಮಾತ್ರ ನೀಡಲಾಗಿದೆ. ಇನ್ನುಳಿದ ವೇತನ ನೀಡಲು ಚಿತ್ತಗಾಂಗ್ ಕಿಂಗ್ಸ್ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಅಫ್ರಿದಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನಿಂದ ಈ ಸಮಸ್ಯೆ ಬಗೆಹರಿಯದಿದ್ದರೆ, ಪ್ರಧಾನಿ ಅಥವಾ ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರರಿಗೆ ದೂರು ನೀಡುವುದಾಗಿ ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.
ಇದನ್ನೂ ಓದಿ: IPL 2025: RCB ತಂಡದ ಹೊಸ ಜೆರ್ಸಿ ಫೋಟೋ ಲೀಕ್?
ಅಫ್ರಿದಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚಿತ್ತಗಾಂಗ್ ಕಿಂಗ್ಸ್ ತಂಡದ ಮಾಲೀಕ ಸಮೀರ್ ಖಾದರ್ ಚೌಧರಿ, ಆಫ್ರಿದಿ ತಂಡದ ಪರ ಆಡಿದ ಆಟಗಾರನಲ್ಲ. ಹೀಗಾಗಿ ಅವರಿಗೆ ಈಗಾಗಲೇ 21 ಸಾವಿರ ಡಾಲರ್ (ರೂ. 18,34,336) ನೀಡಿದ್ದೇವೆ. ಇನ್ನುಳಿದ ಮೊತ್ತವನ್ನು ಶೀಘ್ರದಲ್ಲೇ ಪಾವತಿಸುವುದಾಗಿ ತಿಳಿಸಿದ್ದಾರೆ. ಉಳಿದ ಮೊತ್ತವನ್ನು ಶೀಘ್ರದಲ್ಲೇ ಅವನು ಪಡೆಯುತ್ತಾನೆ.
