5 ಭರ್ಜರಿ ಸಿಕ್ಸ್, 9 ಫೋರ್: ಸ್ಪೋಟಕ ಶತಕ ಸಿಡಿಸಿದ ಶರತ್
Maharaja Trophy KSCA T20 2023: ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶರತ್ ಅಬ್ಬರಕ್ಕೆ ಮೈಸೂರು ವಾರಿಯರ್ಸ್ ಬೌಲರ್ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಶರತ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಸಿಡಿಸಿದರು.
Maharaja Trophy T20 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 5ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಮೈಸೂರು ವಾರಿಯರ್ಸ್ ವಿರುದ್ಧದ ಈ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಬಿಆರ್ ಶರತ್ ಮಂಗಳೂರು ಡ್ರಾಗನ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ಡ್ರಾಗನ್ಸ್ ತಂಡದ ನಾಯಕ ಕೃಷ್ಣಪ್ಪ ಗೌತಮ್ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡಕ್ಕೆ ಕಾರ್ತಿಕ್ (29) ಹಾಗೂ ಸಮರ್ಥ್ (14) ಉತ್ತಮ ಆರಂಭ ಒದಗಿಸಿದ್ದರು.
4 ಓವರ್ಗಳಲ್ಲಿ 41 ರನ್ ಪೇರಿಸಿದ್ದ ವೇಳೆ ಸಮರ್ಥ್ ಔಟಾದರು. ಈ ವೇಳೆ ಕಣಕ್ಕಿಳಿದ ನಾಯಕ ಕರುಣ್ ನಾಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಂಗಳೂರು ಬೌಲರ್ಗಳ ಬೆಂಡೆತ್ತಿದ ಕರುಣ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅಲ್ಲದೆ ಕೇವಲ 39 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 77 ರನ್ ಬಾರಿಸಿ ಕರುಣ್ ನಾಯರ್ ರನೌಟ್ ಆಗಿ ನಿರ್ಗಮಿಸಿದರು. ಈ ಸ್ಪೋಟಕ ಇನಿಂಗ್ಸ್ ಪರಿಣಾಮ ಮೈಸೂರು ವಾರಿಯರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿತು.
202 ರನ್ಗಳ ಕಠಿಣ ಗುರಿ ಪಡೆದ ಮಂಗಳೂರು ಡ್ರಾಗನ್ಸ್ ಪರ ಆರಂಭಿಕ ಆಟಗಾರ ರೋಹನ್ ಪಾಟೀಲ್ ಕೇವಲ 27 ಎಸೆತಗಳಲ್ಲಿ 54 ರನ್ ಚಚ್ಚಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಬಿಆರ್ ಶರತ್ ಅಕ್ಷರಶಃ ಅಬ್ಬರಿಸಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶರತ್ ಅಬ್ಬರಕ್ಕೆ ಮೈಸೂರು ವಾರಿಯರ್ಸ್ ಬೌಲರ್ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಶರತ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಸಿಡಿಸಿದರು. ಪರಿಣಾಮ ಕೇವಲ 57 ಎಸೆತಗಳಲ್ಲಿ ಶರತ್ ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂತು.
ಶತಕದ ಬಳಿಕ ಅಬ್ಬರ ಮುಂದುವರೆಸಿದ ಶರತ್ 61 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 111 ರನ್ ಚಚ್ಚಿದರು. ಈ ಮೂಲಕ 18.5 ಓವರ್ಗಳಲ್ಲಿ ಮಂಗಳೂರು ಡ್ರಾಗನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿ ಜಯದ ರೂವಾರಿ ಎನಿಸಿಕೊಂಡರು.
ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಕೋದಂಡ ಅಜಿತ್ ಕಾರ್ತಿಕ್ , ಕರುಣ್ ನಾಯರ್ (ನಾಯಕ) , ರಾಹುಲ್ ರಾವತ್ , ತುಷಾರ್ ಸಿಂಗ್ , ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್) , ಮನೋಜ್ ಭಾಂಡಗೆ , ಜಗದೀಶ ಸುಚಿತ್ , ಶ್ರೀಶ ಆಚಾರ್ , ಮುರಳೀಧರ ವೆಂಕಟೇಶ್ , ಮೋನಿಶ್ ರೆಡ್ಡಿ.
ಇದನ್ನೂ ಓದಿ: Suryakumar Yadav: 50 ಇನಿಂಗ್ಸ್ ಬಳಿಕ ಟಾಪ್-5 ಗೆ ಸೂರ್ಯನ ಎಂಟ್ರಿ..!
ಮಂಗಳೂರು ಡ್ರಾಗನ್ಸ್ ಪ್ಲೇಯಿಂಗ್ 11: ನಿಕಿನ್ ಜೋಸ್ , ಶರತ್ ಬಿಆರ್ (ವಿಕೆಟ್ ಕೀಪರ್) , ಕೃಷ್ಣಮೂರ್ತಿ ಸಿದ್ಧಾರ್ಥ್ , ಅನಿರುದ್ಧ್ ಜೋಶಿ , ಧೀರಜ್ ಜೆ ಗೌಡ , ಕೃಷ್ಣಪ್ಪ ಗೌತಮ್ (ನಾಯಕ) , ಆನಂದ್ ದೊಡ್ಡಮನಿ , ಅನೀಶ್ವರ್ ಗೌತಮ್ , ಆದಿತ್ಯ ಗೋಯಲ್ , ಪ್ರತೀಕ್ ಜೈನ್ , ನವೀನ್ ಎಂಜಿ.