ಆಸ್ಟ್ರೇಲಿಯಾ ಆಟಗಾರ ಶಾನ್ ಮಾರ್ಷ್ (Shaun Marsh) ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದ್ದ ಮಾರ್ಷ್ 2019 ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಇದಾಗ್ಯೂ ಅವರು ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಫ್ರಾಂಚೈಸಿ ಲೀಗ್ಗಳಲ್ಲಿ ಮುಂದುವರೆದಿದ್ದರು. ಇದೀಗ ಬಿಗ್ ಬ್ಯಾಷ್ ಲೀಗ್ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅದರಂತೆ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಅಂತಿಮ ಮ್ಯಾಚ್ ಅವರ ವೃತ್ತಿಜೀವನದ ಕೊನೆಯ ಪಂದ್ಯವಾಗಿರಲಿದೆ.
ಆಸ್ಟ್ರೇಲಿಯಾ ಪರ 38 ಟೆಸ್ಟ್ ಪಂದ್ಯಗಳನ್ನಾಡಿರುವ ಮಾರ್ಷ್ 6 ಶತಕ ಹಾಗೂ 10 ಅರ್ಧಶತಕಗಳೊಂದಿಗೆ ಒಟ್ಟು 2265 ರನ್ ಕಲೆಹಾಕಿದ್ದಾರೆ. ಹಾಗೆಯೇ 73 ಏಕದಿನ ಪಂದ್ಯಗಳಲ್ಲಿ 7 ಶತಕ ಹಾಗೂ 15 ಅರ್ಧಶತಕಗಳನ್ನು ಬಾರಿಸಿ 2773 ರನ್ಗಳಿಸಿದ್ದಾರೆ. ಇನ್ನು 15 ಟಿ20 ಪಂದ್ಯಗಳಲ್ಲಿ ಆಸೀಸ್ ಪರ ಬ್ಯಾಟ್ ಬೀಸಿದ್ದ ಮಾರ್ಷ್ ಕೇವಲ 255 ರನ್ ಕಲೆಹಾಕಿದ್ದಾರೆ.
ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ದಾಖಲೆ ಶಾನ್ ಮಾರ್ಷ್ ಹೆಸರಿನಲ್ಲಿದೆ. 2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ 11 ಪಂದ್ಯಗಳನ್ನಾಡಿದ್ದ ಮಾರ್ಷ್ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 616 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್ ಸೀಸನ್ವೊಂದರಲ್ಲಿ 600+ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.
ವಿಶೇಷ ಎಂದರೆ ಶಾನ್ ಮಾರ್ಷ್ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಪರ ಮಾತ್ರ ಕಣಕ್ಕಿಳಿದಿದ್ದಾರೆ. ಒಂದೇ ತಂಡದ ಪರ 9 ಸೀಸನ್ನಲ್ಲಿ 71 ಪಂದ್ಯಗಳನ್ನಾಡಿದ್ದ ಎಡಗೈ ದಾಂಡಿಗ 1 ಶತಕ ಹಾಗೂ 20 ಅರ್ಧಶತಕಗಳೊಂದಿಗೆ 2477 ರನ್ ಕಲೆಹಾಕಿದ್ದಾರೆ.
2017 ರಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಶಾನ್ ಮಾರ್ಷ್ ಅವರನ್ನು ಬಿಡುಗಡೆ ಮಾಡಿತು. 2018 ರ ಹರಾಜಿನಲ್ಲಿ 1.5 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಮಾರ್ಷ್ ಅವರನ್ನು ಆ ಬಳಿಕ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ ಬಿಗ್ ಬ್ಯಾಷ್ ಲೀಗ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಮಾರ್ಷ್ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಈ IPL ನಲ್ಲೂ RCBಗೆ ಸೋಲು: SRH ವಿನ್ನರ್..!
ಇದೀಗ ತಮ್ಮ 40ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅದರಂತೆ ಜನವರಿ 17 ರಂದು ಸಿಡ್ನಿ ಥಂಡರ್ ವಿರುದ್ಧದ ಪಂದ್ಯದ ಮೂಲಕ ಶಾನ್ ಮಾರ್ಷ್ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ.