Adam Zampa: ಮಂಕಡ್ ರನೌಟ್ ಮಾಡಿದ್ರೂ ನಾಟೌಟ್ ಎಂದ ಅಂಪೈರ್..!
Adam Zampa's Mankad Runout: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್ ಕಲೆಹಾಕಿತು. ಈ ಸಾಧಾರಣ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 9 ವಿಕೆಟ್ ಕಳೆದುಕೊಂಡು 108 ರನ್ಗಳಿಸಲಷ್ಟೇ ಶಕ್ತರಾದರು.
Big Bash League 2023: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ಸೀಸನ್ 12 ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಮೈಕೆಲ್ ನೇಸರ್ ಹಿಡಿದ ವಿವಾದಾತ್ಮಕ ಕ್ಯಾಚ್ನಿಂದ ಸುದ್ದಿಯಲ್ಲಿದ್ದ ಬಿಬಿಎಲ್ (BBL) ಈ ಬಾರಿ ರನೌಟ್ ವಿಷಯದಲ್ಲಿ ಎಲ್ಲರ ಗಮನ ಸೆಳೆದಿದೆ. ಅದು ಕೂಡ ಮಂಕಡ್ ರನೌಟ್ ತೀರ್ಪಿನಿಂದ ಎಂಬುದೇ ವಿಶೇಷ. ಬಿಬಿಎಲ್ನ 27ನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಟಾರ್ಸ್ ತಂಡದ ನಾಯಕ ಆ್ಯಡಂ ಝಂಪಾ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ರೆನೆಗೇಡ್ಸ್ ಪರ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 32 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಶಾನ್ ಮಾರ್ಷ್ ಕೂಡ 32 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಇದನ್ನೂ ಓದಿ: VIDEO: ಔಟಾ-ನಾಟೌಟಾ? ಹೊಸ ವಿವಾದಕ್ಕೆ ಕಾರಣವಾದ ವಿಚಿತ್ರ ಕ್ಯಾಚ್
ಮೊದಲ ಹತ್ತು ಓವರ್ಗಳ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಮೆಲ್ಬೋರ್ನ್ ಸ್ಟಾರ್ಸ್ ಬೌಲರ್ಗಳು ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಮೆಲ್ಬೋರ್ನ್ ರೆನೆಗೇಡ್ಸ್ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಆ್ಯಡಂ ಝಂಪಾ ಟಾಮ್ ರೋಜರ್ಸ್ ಅವರನ್ನು ಮಂಕಡ್ ರನೌಟ್ ಮಾಡಿದ್ದರು.
20ನೇ ಓವರ್ ಎಸೆದಿದ್ದ ಝಂಪಾ ಚೆಂಡೆಸೆಯುವ ಮುನ್ನ ನಾನ್ ಸ್ಟ್ರೈಕ್ನಲ್ಲಿದ್ದ ರೋಜರ್ಸ್ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ಝಂಪಾ ತಕ್ಷಣವೇ ಮಂಕಡ್ ರನೌಟ್ ಮಾಡಿ ಅಂಪೈರ್ಗೆ ಮನವಿ ಸಲ್ಲಿಸಿದರು. ಅತ್ತ ಕ್ರೀಸ್ನಿಂದ ಮಾರುದ್ದವೇ ದೂರವಿದ್ದ ರೋಜರ್ಸ್ ಔಟ್ ಎಂದುಕೊಂಡಿದ್ದರು.
ಆದರೆ ಝಂಪಾ ಮನವಿಯನ್ನು ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ಗೆ ವರ್ಗಾಯಿಸಿದರು. ಈ ರನೌಟ್ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದ ಥರ್ಡ್ ಅಂಪೈರ್ ಬಿಗ್ ಸ್ಕ್ರೀನ್ನಲ್ಲಿ ನಾಟೌಟ್ ಎಂದು ತೀರ್ಪು ನೀಡಿದರು. ಇತ್ತ ಮಂಕಡ್ ರನೌಟ್ ಆಗಿದ್ದರೂ ನಾಟೌಟ್ ಎಂದಿರುವುದನ್ನು ನೋಡಿ ಮೆಲ್ಬೋರ್ನ್ ಸ್ಟಾರ್ಸ್ ಅಭಿಮಾನಿಗಳು ಸ್ತಬ್ಧರಾದರು. ಇದೀಗ ಈ ನಾಟೌಟ್ ಆಗಿರುವ ಮಂಕಡ್ ರನೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಈ ನಾಟೌಟ್ ಬಗ್ಗೆ ಚರ್ಚೆಗಳು ಕೂಡ ಶುರುವಾಗಿದೆ.
ನಾಟೌಟ್ ನೀಡಲು ಕಾರಣವೇನು?
ಐಸಿಸಿ ನಿಯಮದ ಪ್ರಕಾರ ಬೌಲರ್ ಚೆಂಡೆಸೆಯುವ ಮುನ್ನ ನಾನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟರೆ ರನೌಟ್ ಮಾಡುವ ಅವಕಾಶ ಬೌಲರ್ಗೆ ಇದೆ. ಇದೇ ಮಾದರಿಯಲ್ಲಿ ಆ್ಯಡಂ ಝಂಪಾ ಕೂಡ ರನೌಟ್ ಮಾಡಿದ್ದರು. ಆದರೆ ಇಲ್ಲಿ ಆಸೀಸ್ ಸ್ಪಿನ್ನರ್ ಮಾಡಿದ ಸಣ್ಣ ತಪ್ಪಿನಿಂದಾಗಿ ಔಟ್ ಲಭಿಸಲಿಲ್ಲ.
ಕ್ರಿಕೆಟ್ ನಿಯಮ ರೂಪಿಸುವ ಎಂಸಿಸಿ ಪ್ರಕಾರ, ಬೌಲರ್ ತನ್ನ ಬೌಲಿಂಗ್ ಶೈಲಿಯನ್ನು ಪೂರ್ಣಗೊಳಿಸಿದ್ದರೆ ಮಂಕಡ್ ರನೌಟ್ ಮಾಡುವಂತಿಲ್ಲ. ಅಂದರೆ ಸಾಮಾನ್ಯವಾಗಿ ಬೌಲರ್ 90 ಡಿಗ್ರಿಯಲ್ಲಿ ಬೌಲಿಂಗ್ ಮಾಡ್ತಾರೆ. ಈ ವೇಳೆ ಬೌಲಿಂಗ್ ಶೈಲಿಯಲ್ಲಿ ಚೆಂಡು ತೋಳನ್ನು ದಾಟಿ ಮುಂದಕ್ಕೆ ಹೋದ ಬಳಿಕ ಮಂಕಡ್ ರನೌಟ್ ಮಾಡುವಂತಿಲ್ಲ. ಇಲ್ಲಿ ಆ್ಯಡಂ ಝಂಪಾ ಕೂಡ ಚೆಂಡನ್ನು ಎಸೆಯಲು ಮುಂದಾಗಿ ರನೌಟ್ ಮಾಡಿದ್ದರು. ಇದೇ ಕಾರಣದಿಂದಾಗಿ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದಾರೆ.
ಈ ಹಿಂದೆ ಮಂಕಡ್ ರನೌಟ್ ಮಾಡಿದ್ದ ಟೀಮ್ ಇಂಡಿಯಾದ ರವಿಚಂದ್ರನ್ ಅಶ್ವಿನ್ ಆಗಲಿ ಅಥವಾ ದೀರ್ಪಿ ಶರ್ಮಾ ಆಗಿರಲಿ, ರನೌಟ್ ಮಾಡುವ ಮುನ್ನ ತಮ್ಮ ಬೌಲಿಂಗ್ ಶೈಲಿಯನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿಯೇ ಅದನ್ನು ರನೌಟ್ ಎಂದು ಪರಿಗಣಿಸಲಾಗಿತ್ತು. ಆ ವಿಡಿಯೋವನ್ನು ಈ ಕೆಳಗೆ ಗಮನಿಸಬಹುದು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್ ಕಲೆಹಾಕಿತು. ಈ ಸಾಧಾರಣ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 9 ವಿಕೆಟ್ ಕಳೆದುಕೊಂಡು 108 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ರೆನೆಗೇಡ್ಸ್ ತಂಡವು 33 ರನ್ಗಳ ಭರ್ಜರಿ ಜಯ ಸಾಧಿಸಿತು.
Published On - 5:58 pm, Wed, 4 January 23